ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರೀಯ ತನಿಖಾ ಸಂಸ್ಥೆಗಳ ಹೆಸರು ಕೆಡಿಸಲು ಹಾಗೂ ಅವುಗಳಿಗೆ ಬೆದರಿಕೆ ಹಾಕಲು ಯತ್ನಿಸುತ್ತಿದ್ದರು. ಈಗ ಡ್ರಾಮಾ ಹಾಗೂ ಧರಣಿ ಎಲ್ಲವೂ ಮುಗಿದಿದೆ.
ನವದೆಹಲಿ (ಜು.24): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರೀಯ ತನಿಖಾ ಸಂಸ್ಥೆಗಳ ಹೆಸರು ಕೆಡಿಸಲು ಹಾಗೂ ಅವುಗಳಿಗೆ ಬೆದರಿಕೆ ಹಾಕಲು ಯತ್ನಿಸುತ್ತಿದ್ದರು. ಈಗ ಡ್ರಾಮಾ ಹಾಗೂ ಧರಣಿ ಎಲ್ಲವೂ ಮುಗಿದಿದೆ. ಹಣ ಎಲ್ಲಿಂದ ಬಂತು ಎಂಬ ನೈಜ ಪ್ರಶ್ನೆಗೆ ಉತ್ತರಿಸಬೇಕಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಬಂಗಾಳದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಬಂಧನ ಹಾಗೂ ಅವರ ಆಪ್ತೆಯ ಮನೆಯಲ್ಲಿ 21 ಕೋಟಿ ರು. ನಗದು ಸಿಕ್ಕ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಟರ್ಜಿ ಅವರನ್ನು ಮಮತಾ ಹೊಗಳುತ್ತಿದ್ದರು. ಭ್ರಷ್ಟಾಚಾರದ ಹಣವನ್ನು ನಿರ್ವಹಿಸಿದ ಕಾರಣಕ್ಕೆ ಅವರು ಹೊಗಳುತ್ತಿದ್ದರು ಎಂದು ಜನರಿಗೆ ಈಗ ಅನ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಕರ ನೇಮಕ ಹಗರಣ: ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಬಂಧನ!
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಲಪಡಿಸಿ, ಸ್ವತಂತ್ರಗೊಳಿಸಿದೆ. ಇದರ ಫಲವಾಗಿ ಹಲವಾರು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ 1 ಲಕ್ಷ ಕೋಟಿ ರು.ಗೂ ಅಧಿಕ ಅಕ್ರಮ ಸಂಪತ್ತನ್ನು ಪತ್ತೆ ಮಾಡಿದೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಬಿಜೆಪಿ ನಾಯಕ ದಿಲೀಪ್ ಘೋಷ್, ತೃಣಮೂಲ ಕಾಂಗ್ರೆಸ್ಸಿನ ಉನ್ನತ ನಾಯಕರನ್ನು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಬೇಕು. ಹಲವಾರು ವರ್ಷಗಳಿಂದ ಟಿಎಂಸಿ ನಾಯಕರು ಅಪಾರ ಹಣ ಸಂಗ್ರಹಿಸಿದ್ದಾರೆ. ಆ ಪಕ್ಷದ ಹೈಕಮಾಂಡ್‌ಗೆ ಇದೆಲ್ಲಾ ಗೊತ್ತಿಲ್ಲ ಎಂದರೆ ಯಾರೂ ನಂಬುವುದಿಲ್ಲ ಎಂದು ಮಮತಾ ಹೆಸರೆತ್ತದೆ ವಾಗ್ದಾಳಿ ನಡೆಸಿದರು.
ಅರ್ಪಿತಾ ಜತೆ ದೀದಿ ಇದ್ದ ಚಿತ್ರ ಹಂಚಿಕೊಂಡ ಬಿಜೆಪಿ: ಶಿಕ್ಷಕರ ಅಕ್ರಮ ನೇಮಕಾತಿ ಹಗರಣದಲ್ಲಿ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಇಬ್ಬರೂ ಬಂಧಿತ ಆರೋಪಿಗಳೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಚಿತ್ರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ತಪ್ಪಿತಸ್ಥರ ಸಂಘ’ ಎಂದು ಚಿತ್ರಕ್ಕೆ ಕ್ಯಾಪ್ಶನ್ ಕೊಟ್ಟಿದ್ದು, ‘ಇದು ಕೇವಲ ಟ್ರೇಲರ್, ಸಿನಿಮಾ ಇನ್ನೂ ಬಾಕಿ ಇದೆ’ ಎಂದು ಸುವೇಂದು ಟ್ವೀಟ್ ಮೂಲಕ ಮಮತಾಗೆ ಟಾಂಗ್ ಕೊಟ್ಟಿದ್ದಾರೆ.
21 ಕೋಟಿ ಹಣ ಹೊಂದಿದ್ದ ಪಾರ್ಥ ಆಪ್ತೆ ತ್ರಿಭಾಷಾ ನಟಿ: 21 ಕೋಟಿ ರು. ನಗದಿನ ರಾಶಿಯ ಕಾರಣಕ್ಕೆ ಸುದ್ದಿಯಲ್ಲಿರುವ ಅರ್ಪಿತಾ ಮುಖರ್ಜಿ ಬಂಗಾಳ, ಒಡಿಯಾ ಹಾಗೂ ತಮಿಳು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪಾರ್ಥ ಚಟರ್ಜಿ ಅವರ ‘ಅತ್ಯಂತ ನಿಕಟವರ್ತಿ’. ಕೋಲ್ಕತಾದಲ್ಲಿ ನಾಕ್ತಲ ಉದಯನ್ ಸಂಘ ಎಂಬ ದುರ್ಗಾ ಪೂಜಾ ಸಮಿತಿ ಇದೆ. ಅದಕ್ಕೆ ಪಾರ್ಥ ಚಟರ್ಜಿಯೇ ಮುಖ್ಯಸ್ಥ. 10 ವರ್ಷಗಳ ಹಿಂದಿನಿಂದಲೂ ಅರ್ಪಿತಾ ಹಾಗೂ ಪಾರ್ಥ ಅವರ ನಡುವೆ ಒಡನಾಟವಿತ್ತು. ದುರ್ಗಾ ಪೂಜೆಯ ಪ್ರಚಾರ ಅಭಿಯಾನಗಳಲ್ಲಿ ಪಾರ್ಥ ಕೃಪೆಯಿಂದಾಗಿ ಅರ್ಪಿತಾ ಸ್ಥಾನ ಪಡೆದಿದ್ದರು. ಅರ್ಪಿತಾ ಮನೆಗೂ ಪದೇ ಪದೇ ಪಾರ್ಥ ಭೇಟಿ ಕೊಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
'ಹೇಳು ಪಾರ್ಥ..' ಎಂದು ಚಟರ್ಜಿಗೆ ಗಂಟುಬಿದ್ದಿದ್ಯಾಕೆ ED, ಅಷ್ಟಕ್ಕೂ ಯಾರೀಕೆ ಅರ್ಪಿತಾ?
ಚಟರ್ಜಿ ಆಪ್ತೆ ಮೊನಾಲಿಸಾ ಹೆಸರಲ್ಲಿ 10 ಫ್ಲಾಟ್: ಶಾಲಾ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡ ಹಗರಣದಲ್ಲಿ ಬಂಧಿಯಾಗಿರುವ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿಯವರ ಆಪ್ತೆಯಾದ ಮೊನಾಲಿಸಾ ದಾಸ್ ಅವರ ಮೇಲೂ ಇಡಿ ನಿಗಾ ಇರಿಸಿದ್ದು, ಶೀಘ್ರ ಅವರ ಮೇಲೂ ಇ.ಡಿ. ದಾಳಿ ನಡೆಸುವ ಸಾಧ್ಯತೆಗಳಿವೆ. ಪಾರ್ಥ ಚಟರ್ಜಿಯವರ ಆಪ್ತೆಯಾಗಿದ್ದ ಕಾರಣ ಈಕೆಯನ್ನು 2014ರಲ್ಲಿ ಖಾಜಿ ನರ್ಜುಲ್ ವಿಶ್ವವಿದ್ಯಾಲಯದ ಬಂಗಾಳಿ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು ಎನ್ನಲಾಗದೆ. ಈಕೆಯ ಹೆಸರಿನಲ್ಲಿ 10 ಫ್ಲಾಟ್‌ಗಳಿವೆ. ಸಾಮಾನ್ಯ ಪ್ರೊಫೆಸರ್ ಹೆಸರಿನಲ್ಲಿ ಇಷ್ಟೊಂದು ಫ್ಲಾಟ್‌ಗಳಿರುವುದು ಇ.ಡಿ. ಶಂಕೆಗೆ ಕಾರಣವಾಗಿದೆ.