ಬರೋಬ್ಬರಿ 5,590 ಕೋಟಿ ರೂ ಅಕ್ರಮದಲ್ಲಿ ಆಪ್ ಶಾಸಕ, ಸೌರಭ್ ಭಾರದ್ವಾಜ್ ಮನೆ ಸೇರಿ ಹಲವೆಡೆ ಇಡಿ ದಾಳಿ

Published : Aug 26, 2025, 10:36 AM ISTUpdated : Aug 26, 2025, 11:32 AM IST
Saurabh Bharadwaj

ಸಾರಾಂಶ

ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. 2018-19ರ ಆಸ್ಪತ್ರೆ ನಿರ್ಮಾಣ ಯೋಜನೆಯಲ್ಲಿನ ಅಕ್ರಮ ಹಾಗೂ ಹಣಕಾಸು ಅವ್ಯವಹಾರದ ಆರೋಪದ ಮೇಲೆ ಈ ದಾಳಿ ನಡೆದಿದೆ. 5,590 ಕೋಟಿ ರೂ.   ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

ದೆಹಲಿ: ಆಮ್ ಆದ್ಮಿ ಪಕ್ಷದ (AAP) ಪ್ರಮುಖ ನಾಯಕ ಹಾಗೂ ದೆಹಲಿ ಶಾಸಕ ಸೌರಭ್ ಭಾರದ್ವಾಜ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಇಂದು ಬೆಳಿಗ್ಗೆ ದಾಳಿ ನಡೆಸಿದೆ. ಒಟ್ಟು 13 ಕಡೆಗಳಲ್ಲಿ ಒಂದೇ ಸಮಯದಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ದಾಳಿ 2018-19ರಲ್ಲಿ ದೆಹಲಿ ಸರ್ಕಾರ ರೂಪಿಸಿದ್ದ ಆಸ್ಪತ್ರೆಗಳ ನಿರ್ಮಾಣ ಯೋಜನೆಗೆ ಸಂಬಂಧಿಸಿದೆ. ಆ ಸಮಯದಲ್ಲಿ ಸರ್ಕಾರವು 24 ಹೊಸ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 5,590 ಕೋಟಿ ರೂ. ಮೌಲ್ಯದ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿತ್ತು. ಆದರೆ, ಈ ಯೋಜನೆಯಲ್ಲಿ ಭಾರಿ ಮಟ್ಟದ ಅಕ್ರಮ ಮತ್ತು ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಗರಣಕ್ಕೆ ಸಂಬಂಧಿಸಿದಂತೆ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಾಗಿದ್ದು, ಅದರ ಅಡಿ ಇಡಿ ತನಿಖೆ ನಡೆಸುತ್ತಿದೆ. ದೆಹಲಿಯ ಹಲವಾರು ಸ್ಥಳಗಳಲ್ಲಿನಂತೆ ಸೌರಭ್ ಭಾರದ್ವಾಜ್ ಹಾಗೂ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೂ ಶೋಧ ಕಾರ್ಯ ನಡೆದಿದೆ.

5590 ಕೋಟಿಯ ಯೋಜನೆಗೆ ಅಕ್ರಮದ ನೆರಳು

ಮೂಲಗಳ ಪ್ರಕಾರ, ಆಸ್ಪತ್ರೆ ನಿರ್ಮಾಣಕ್ಕಾಗಿ ಹೊರಡಿಸಿದ ಕೋಟ್ಯಾಂತರ ರೂಪಾಯಿಗಳಲ್ಲಿ ಟೆಂಡರ್, ಗುತ್ತಿಗೆ ಹಾಗೂ ಪಾವತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೆಲವು ಕಂಪನಿಗಳಿಗೆ ನಿಯಮ ಉಲ್ಲಂಘಿಸಿ ಗುತ್ತಿಗೆ ನೀಡಲಾಗಿದೆ, ಹಾಗೆಯೇ ಕಾಗದ ದಾಖಲೆಗಳಲ್ಲಿ ದೊಡ್ಡ ವ್ಯತ್ಯಾಸವಿದೆ ಎಂದು ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೌರಭ್ ಭಾರದ್ವಾಜ್ ಹಾಗೂ ಸತ್ಯೇಂದ್ರ ಜೈನ್ ವಿರುದ್ಧ ಅಧಿಕೃತ ದೂರು ದಾಖಲಾಗಿದೆ. ಇವರಿಬ್ಬರು ಆ ಸಮಯದಲ್ಲಿ ಆರೋಗ್ಯ ಇಲಾಖೆ ಸಂಬಂಧಿತ ನಿರ್ಧಾರಗಳಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂಬ ಆರೋಪವಿದೆ. ಇಡೀ ಪ್ರಕ್ರಿಯೆಯಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಹೂಡಿಕೆಗಳ ದುರುಪಯೋಗ ನಡೆದಿದೆ ಎಂಬ ಸುಳಿವು ಇಡಿಗೆ ಲಭಿಸಿದೆ. ಈ ದಾಳಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ವಿವಿಧ ಹಗರಣ ಪ್ರಕರಣಗಳಲ್ಲಿ ಇಡೀ ತನಿಖೆಯ ಅಡಿಯಲ್ಲಿ ಇರುವ ಆಪ್ ಪಕ್ಷದ ಹಲವಾರು ನಾಯಕರ ಪೈಕಿ, ಇದೀಗ ಸೌರಭ್ ಭಾರದ್ವಾಜ್ ಹೆಸರು ಸೇರ್ಪಡೆಯಾಗಿದೆ.

ಗ್ರೇಟರ್ ಕೈಲಾಶ್ ಕ್ಷೇತ್ರದ ಪ್ರಸ್ತುತ ಶಾಸಕರಾಗಿರುವ ಭಾರದ್ವಾಜ್, ಆರೋಗ್ಯ, ನಗರಾಭಿವೃದ್ಧಿ ಮತ್ತು ನೀರು ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು ದೆಹಲಿ ಜಲ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ಎಎಪಿಯ ಅಧಿಕೃತ ವಕ್ತಾರರಲ್ಲಿ ಒಬ್ಬರು. 

2018-19ರಲ್ಲಿ 11 ಗ್ರೀನ್‌ಫೀಲ್ಡ್ ಹಾಗೂ 13 ಬ್ರೌನ್‌ಫೀಲ್ಡ್ ಸೇರಿದಂತೆ ಒಟ್ಟು 24 ಆಸ್ಪತ್ರೆ ಯೋಜನೆಗಳಿಗೆ ₹5,590 ಕೋಟಿ ಮಂಜೂರಾತಿ ನೀಡಲಾಗಿತ್ತು. ಆದರೆ ಈ ಯೋಜನೆಗಳು ವಿವರಿಸಲಾಗದ ವಿಳಂಬ ಮತ್ತು ಅತಿರೇಕದ ವೆಚ್ಚಗಳಲ್ಲಿ ಸಿಲುಕಿಕೊಂಡಿದ್ದು, ಇದು ಹಣಕಾಸಿನ ಭಾರಿ ದುರುಪಯೋಗವನ್ನು ಸೂಚಿಸುತ್ತದೆ ಎಂದು ಎಸಿಬಿ (ACB) ತಿಳಿಸಿದೆ. ದೆಹಲಿಯಾದ್ಯಂತ ನಿರ್ಮಾಣವಾಗಬೇಕಾಗಿದ್ದ ಆಸ್ಪತ್ರೆಗಳು, ಪಾಲಿಕ್ಲಿನಿಕ್‌ಗಳು ಹಾಗೂ ಐಸಿಯು ವಿಭಾಗಗಳು ಸಂಬಂಧಿಸಿದಂತೆ ಗಂಭೀರ ಅಕ್ರಮಗಳು, ಅನಾವಶ್ಯಕ ವಿಳಂಬಗಳು ಮತ್ತು ನಿಧಿಗಳ ದುರುಪಯೋಗ ಕಂಡುಬಂದಿರುವುದಾಗಿ ಎಸಿಬಿ ಹೇಳಿದೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ನಂತರವೇ ಪ್ರಕರಣ ದಾಖಲಿಸಲಾಗಿದೆಯೆಂದು ಎಸಿಬಿ ಸ್ಪಷ್ಟಪಡಿಸಿದೆ. 2024ರ ಆಗಸ್ಟ್ 22ರಂದು, ದೆಹಲಿಯ ವಿರೋಧ ಪಕ್ಷದ ನಾಯಕರಾಗಿದ್ದ ವಿಜೇಂದರ್ ಗುಪ್ತಾ ಅವರು GNCTD ಅಡಿಯಲ್ಲಿ ನಡೆಯುತ್ತಿದ್ದ ಆರೋಗ್ಯ ಮೂಲಸೌಕರ್ಯ ಯೋಜನೆಗಳಲ್ಲಿ ಗಂಭೀರ ಅಕ್ರಮಗಳು ಮತ್ತು ಶಂಕಿತ ಭ್ರಷ್ಟಾಚಾರದ ಬಗ್ಗೆ ವಿವರವಾದ ದೂರು ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

AAP ನಾಯಕರ ಮೇಲೆ ಇಡಿ ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಪಕ್ಷದ ಪ್ರಮುಖ ಮುಖಂಡರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಅಮಾನತುಲ್ಲಾ ಖಾನ್ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೂ ಇಡಿ ದಾಳಿ ನಡೆದಿದೆ. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಮತ್ತು ಕೇಜ್ರಿವಾಲ್ ಮನೆ-ಕಚೇರಿಗಳ ಮೇಲೆ ಶೋಧ ನಡೆದಿದೆ. ಜಲ ಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ ಸತ್ಯೇಂದ್ರ ಜೈನ್ ಮೇಲೆ ದಾಳಿ ನಡೆದಿದೆ. ಓಖ್ಲಾ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಹಣ ವರ್ಗಾವಣೆ ಆರೋಪದ ಮೇರೆಗೆ ಇಡಿ ದಾಳಿ ನಡೆಸಲಾಗಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ