
ಕೇಂದ್ರ ಸರ್ಕಾರದ ‘ನಾಶಾ ಮುಕ್ತ ಭಾರತ್’ ಅಭಿಯಾನದಡಿ ಮಾದಕ ದ್ರವ್ಯ ನಿಗ್ರಹಕ್ಕೆ ಮುಂದಾಗಿರುವ ಜಾರಿ ನಿರ್ದೇಶನಾಲಯ (ED), ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಒಟ್ಟು 30 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ಮಾದಕ ವಸ್ತು ಜಾಲದ ಆರ್ಥಿಕ ವಹಿವಾಟು ಹಾಗೂ ಹಣ ಅಕ್ರಮ ವರ್ಗಾವಣೆ (PMLA) ಪ್ರಕರಣಗಳ ತನಿಖೆ ಚುರುಕುಗೊಳಿಸಿದ್ದಾರೆ.
ಮಾದಕ ವಸ್ತು ಕಳ್ಳಸಾಗಣೆಯಿಂದ ಬಂದ ಅಪರಾಧದ ಆದಾಯವನ್ನು (Proceeds of Crime) ಅಕ್ರಮವಾಗಿ ವರ್ಗಾಯಿಸಲಾಗಿದೆಯೇ ಮತ್ತು ಆಸ್ತಿಗಳನ್ನು ಸೃಷ್ಟಿಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು PMLA ಅಡಿಯಲ್ಲಿ ದಾಖಲಾಗಿರುವ 8 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯಾಚರಣೆ ನಡೆದಿದೆ. ಕೇವಲ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲದೆ, ಈ ದಂಧೆಗೆ ಆರ್ಥಿಕ ಬಲ ನೀಡುತ್ತಿರುವ ಅಕ್ರಮ ಹಣಕಾಸು ಜಾಲಗಳನ್ನು ಸಂಪೂರ್ಣವಾಗಿ ಕಿತ್ತೊಗೆಯುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.
ಬೆಂಗಳೂರು ನಗರದ 4 ಪ್ರಮುಖ ಸ್ಥಳಗಳಲ್ಲಿ ಇಡಿ ದಾಳಿ ನಡೆದಿದ್ದು, ಮಾದಕ ದ್ರವ್ಯ ಜಾಲದಲ್ಲಿ ಭಾಗಿಯಾದ ಶಂಕೆಯಿರುವ ಮೃತ್ಯುಂಜಯ ಎಂಬ ಆರೋಪಿಯ ನಿವಾಸ ಹಾಗೂ ಕಚೇರಿಗಳ ಮೇಲೆ ಪರಿಶೀಲನೆ ನಡೆಸಲಾಗಿದೆ.
ಥೈಲ್ಯಾಂಡ್‌ನಿಂದ ಹೈಬ್ರಿಡ್ ಗಾಂಜಾವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಹಲವು ಭಾಗಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ತೆಲಂಗಾಣದ ನಾರ್ಕೋಟಿಕ್ಸ್ ವಿಭಾಗ (EAGLE) ದಾಖಲಿಸಿದ್ದ ಬಹು FIRಗಳ ಆಧಾರದ ಮೇಲೆ ಹೈದರಾಬಾದ್‌ನ 3 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮುಖ್ಯವಾಗಿ ನಾನಕ್‌ರಾಮ್‌ಗುಡದ ಲೋಧಾ ಬಸ್ತಿಯಲ್ಲಿ ಅಕ್ರಮ ಗಾಂಜಾ ದಂಧೆ ನಡೆಸುತ್ತಿದ್ದ ನೀತು ಬಾಯಿ ಹಾಗೂ ಆಕೆಯ ಕುಟುಂಬದ ಜಾಲವನ್ನು ಇಡಿ ಗುರಿ ಮಾಡಿದೆ.
ಆಕೆಯ ಪತಿ ಮುನ್ನಾ ಸಿಂಗ್ ಮತ್ತು ಮಕ್ಕಳು ಸೇರಿ ನಡೆಸುತ್ತಿದ್ದ ಈ ಚಿಲ್ಲರೆ ವ್ಯಾಪಾರ ಕೇಂದ್ರಕ್ಕೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳು ಬಂದು ಹೋಗುತ್ತಿದ್ದರು. ತನಿಖೆ ವೇಳೆ ಡಿಟರ್ಜೆಂಟ್ ಬಾಕ್ಸ್‌ನಲ್ಲಿ ಬಾಂಚಲಾದ ಲಕ್ಷಾಂತರ ರೂಪಾಯಿ ನಗದು ಹಣ ಮತ್ತು ಮಾದಕ ದ್ರವ್ಯ ಮಾರಾಟದ ಆರ್ಥಿಕ ವಿವರಗಳು ಲಭ್ಯವಾಗಿವೆ. PMLA ಅಡಿಯಲ್ಲಿ ನೀತು ಬಾಯಿ ಗಳಿಸಿದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಲು ಇಡಿ ತೀವ್ರ ಶೋಧ ನಡೆಸುತ್ತಿದೆ.
ದಕ್ಷಿಣ ಭಾರತದಲ್ಲಿ ಮಾದಕ ದ್ರವ್ಯ ಜಾಲ ತೀವ್ರವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಎನ್‌ಡಿಪಿಎಸ್ (NDPS) ಕಾಯ್ದೆಯ ಜೊತೆಗೆ ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯನ್ನು (PMLA) ಬಳಸಿ ಕಾರ್ಯಾಚರಣೆ ನಡೆಸಿರುವುದು ಜಾಲದ ಆರ್ಥಿಕ ಬೆನ್ನೆಲುಬನ್ನು ಮುರಿಯಲು ನೆರವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ