100 ಕೋಟಿ ಚಿನ್ನ ಸ್ಮಗ್ಲಿಂಗ್: ಜ್ಯುವೆಲ್ಲರಿ ವರ್ತಕನ ಮಗ ಸೆರೆ| 250 ಕೇಜಿ ಚಿನ್ನದ ಕಳ್ಳಸಾಗಣೆ ಆರೋಪ
ಹೈದರಾಬಾದ್(ಮಾ.13): 100 ಕೋಟಿ ರು. ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹೈದರಾಬಾದ್‌ನ ಘನಶಾಮದಾಸ್ ಜ್ಯುವೆಲ್ಲರಿ ಮುಖ್ಯಸ್ಥ ಹಾಗೂ ಚಿನ್ನದ ವರ್ತಕ ಸಂಜಯಕುಮಾರ್ ಅಗರ್‌ವಾಲ್ ಅವರ ಪುತ್ರ ಪ್ರೀತ್‌ಕುಮಾರ್ ಅಗರ್‌ವಾಲ್‌ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ.
ಪ್ರೀತ್ ಕುಮಾರ್ ಮೇಲೆ 250 ಕೇಜಿ ಚಿನ್ನದ ಕಳ್ಳಸಾಗಣೆ ಆರೋಪ ಕೇಳಿಬಂದಿದೆ. ಬುಧವಾರ ಹೈದರಾಬಾದ್‌ನ 5 ಚಿನ್ನಾಭರಣ ವರ್ತಕರ ಸ್ಥಳಗಳಲ್ಲಿ ಕೋಲ್ಕತಾ ಹಾಗೂ ಸ್ಥಳೀಯ ಇ.ಡಿ. ಘಟಕಗಳು ಜಂಟಿಯಾಗಿ ದಾಳಿ ನಡೆಸಿದ್ದವು. ಈ ವೇಳೆ ಚಿನ್ನದ ಹವಾಲಾ ದಂಧೆಯ ಸ್ಪಷ್ಟಕುರುಹುಗಳು ಲಭಿಸಿದ್ದವು.
ದುಬೈಗೆ ಕಳಿಸಬೇಕಿದ್ದ 16 ಕೋಟಿ ರು. ಮೌಲ್ಯದ 1194 ಚಿನ್ನದ ಬಳೆಗಳನ್ನು ಪ್ರೀತ್‌ಕುಮಾರ್, ತನ್ನ ತಂದೆಗೆ ಕೋಲ್ಕತಾ ಏರ್‌ಪೋರ್ಟಲ್ಲಿ ಅಕ್ರಮವಾಗಿ ಹಸ್ತಾಂತರಿಸಿದ್ದ. ಇದನ್ನು ಸಂಜಯ್ ಕೋಲ್ಕತಾದಿಂದ ಹೈದರಾಬಾದ್‌ಗೆ ರವಾನಿಸಿದ್ದ. ಇದೇ ರೀತಿ ಸಾಕಷ್ಟುಕಳ್ಳಸಾಗಣೆಯನ್ನು ಅವರು ಮಾಡಿದ್ದಾರೆ ಎಂದು ಗೊತ್ತಾಗಿದೆ. ಈ ಕಾರಣಕ್ಕೆ ಪ್ರೀತ್‌ನನ್ನು ಬಂಧಿಸಲಾಗಿದೆ,
ಈ ಹಿಂದೆ ಸಂಜಯಕುಮಾರ್, ಸುಂಕಮುಕ್ತ ಚಿನ್ನವನ್ನು ಸ್ಟೇಟ್ ಟ್ರೇಡಿಂಗ್ ಕಾರ್ಪೋರೆಷನ್ ಆಫ್ ಇಂಡಿಯಾ, ಡೈಮಂಡ್ ಇಂಡಿಯಾ ಲಿ., ಹಾಗೂ ಎಂಎಂಟಿಸಿಗಳಿಂದ ಖರೀದಿಸಿದ್ದರು. ಆದರೆ ಇವನ್ನು ಅಕ್ರಮವಾಗಿ ದೇಶೀ ಪೇಟೆಯಲ್ಲಿ ಮಾರಿ ಸುಂಕ ವಂಚನೆ ಮಾಡಿದ್ದರು. ಈ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದರು.