E-Jagriti: ಗ್ರಾಹಕರ ಹಕ್ಕುಗಳಿಗೆ ಡಿಜಿಟಲ್ ಬಲ! ದೂರು ದಾಖಲೆಯಿಂದ ಪರಿಹಾರದವರೆಗೆ ಎಲ್ಲವೂ ಈಗ ಬೆರಳ ತುದಿಯಲ್ಲಿ!

Kannadaprabha News   | Kannada Prabha
Published : Jul 05, 2026, 09:50 AM IST
E Jagriti s for consumer justice in Digital India pralhad joshi

ಸಾರಾಂಶ

ಭಾರತದ ಗ್ರಾಹಕ ನ್ಯಾಯ ವ್ಯವಸ್ಥೆಯು ಎದುರಿಸುತ್ತಿದ್ದ ವಿಳಂಬ ಮತ್ತು ಸಂಕೀರ್ಣತೆಗಳಿಗೆ 'ಇ-ಜಾಗೃತಿ' ಪೋರ್ಟಲ್ ಡಿಜಿಟಲ್ ಪರಿಹಾರ ಒದಗಿಸಿದೆ.  ದೂರು ದಾಖಲಾತಿಯಿಂದ ಹಿಡಿದು ಪರಿಹಾರದವರೆಗೆ ಸಂಪೂರ್ಣ ಪ್ರಕ್ರಿಯೆ ಸರಳಗೊಳಿಸಿ, ನ್ಯಾಯವನ್ನು ಎಲ್ಲರಿಗೂ ವೇಗವಾಗಿ ಪರಿಹಾರ ತಲುಪುವಂತೆ ಮಾಡಿದೆ. 

-ಪ್ರಹ್ಲಾದ ಜೋಶಿ,

 ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು.

ನ್ಯಾಯ ವಿಳಂಬವು ಭಾರತೀಯ ಗ್ರಾಹಕರನ್ನು ದೀರ್ಘಕಾಲದಿಂದ ಕಾಡುತ್ತಿರುವ ಅತಿ ದೊಡ್ಡ ಹತಾಶೆಗಳಲ್ಲಿ ಒಂದಾಗಿದೆ. ಅದು ದೋಷಪೂರಿತ ಉತ್ಪನ್ನವಾಗಿರಲಿ, ಕೈಗೆ ಸಿಗದ ಆನ್‌ಲೈನ್ ಖರೀದಿಯಾಗಿರಲಿ ಅಥವಾ ಅನ್ಯಾಯದ ಸೇವಾ ಒಪ್ಪಂದವಾಗಿರಲಿ, ದೂರನ್ನು ದಾಖಲಿಸುವುದರಿಂದ ಹಿಡಿದು ಪರಿಹಾರವನ್ನು ಪಡೆಯುವವರೆಗಿನ ಹಾದಿಯು ಸಾಮಾನ್ಯವಾಗಿ ನಿಧಾನಗತಿಯಿಂದ, ಕಷ್ಟದಿಂದ ಮತ್ತು ಭಯ ಹುಟ್ಟಿಸುವಂತೆ ಇರುತ್ತಿತ್ತು. ಭಾರತದ ಗ್ರಾಹಕ ರಕ್ಷಣೆ ವ್ಯವಸ್ಥೆಯು ವರ್ಷಗಳಲ್ಲಿ ಸ್ಥಿರವಾಗಿ ಬೆಳೆದಿದ್ದರೂ, ಅದಕ್ಕೆ ಬೆಂಬಲ ನೀಡುವ ವ್ಯವಸ್ಥೆಗಳು ವೇಗವಾಗಿ ಡಿಜಿಟಲ್ ರೂಪ ಪಡೆಯುತ್ತಿದ್ದು, ಇಂದಿನ ಆರ್ಥಿಕತೆಯ ವಾಸ್ತವಕ್ಕೆ ತಕ್ಕಂತೆ ವೇಗವನ್ನು ಪಡೆದುಕೊಂಡಿರಲಿಲ್ಲ.

ಗ್ರಾಹಕರ ಸಮಸ್ಯೆಗೆ ಸಿಗಲಿದೆ ಪರಿಹಾರ ಸುಲಭ:

ಇಂದು ಗ್ರಾಹಕರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು, ಡಿಜಿಟಲ್ ಪಾವತಿ ವ್ಯವಸ್ಥೆಗಳು ಮತ್ತು ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಹಿಂದೆಂದೂ ಕಾಣದ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಕಾಗದ ಪತ್ರಗಳ ಸಲ್ಲಿಕೆ, ಮ್ಯಾನುಯಲ್ (ಕೈಯಾರೆ ಮಾಡುವ) ಪರಿಶೀಲನೆ, ಹರಿದು ಹಂಚಿ ಹೋಗಿದ್ದ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್‌ಗಳು ಮತ್ತು ಖುದ್ದಾಗಿ ಹಾಜರಾಗುವ ವಿಚಾರಣೆಗಳ ಸುತ್ತ ನಿರ್ಮಾಣವಾಗಿದ್ದ ಸಾಂಪ್ರದಾಯಿಕ ಗ್ರಾಹಕ ನ್ಯಾಯ ವ್ಯವಸ್ಥೆಯು ದಿನಕಳೆದಂತೆ ಕಷ್ಟಕರವಾಗುತ್ತಿತ್ತು. ಡಿಜಿಟಲ್ ಯುಗದಲ್ಲಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕೇವಲ ಕಾನೂನು ಸುಧಾರಣೆಗಳಿಗಿಂತ ಹೆಚ್ಚಿನದರ ಅಗತ್ಯವಿತ್ತು. ಅದು ನ್ಯಾಯವನ್ನು ಒದಗಿಸುವ ವಿಧಾನದಲ್ಲೇ ಸಂಪೂರ್ಣ ಬದಲಾವಣೆಯನ್ನು ಬಯಸುತ್ತಿತ್ತು. ಇ-ಜಾಗೃತಿಯು (e-Jagriti) ಒಂದು ಪ್ರಮುಖ ಬದಲಾವಣೆಯನ್ನು ಇಲ್ಲಿಯೇ ಗುರುತಿಸುತ್ತದೆ. ಇದು ಒಂದು ತಂತ್ರಜ್ಞಾನದ ಪ್ಲಾಟ್‌ಫಾರ್ಮ್ ಮಾತ್ರವಲ್ಲ, ಬದಲಿಗೆ ಸುಲಭ ಲಭ್ಯತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಆಡಳಿತದ ಕೇಂದ್ರ ಬಿಂದುವನ್ನಾಗಿ ಮಾಡುವ ಮೂಲಕ ಗ್ರಾಹಕ ವಿವಾದಗಳ ಪರಿಹಾರ ವ್ಯವಸ್ಥೆಯನ್ನು ಮರುರೂಪಿಸಿದ ಕಥೆಯಾಗಿದೆ.

ನ್ಯಾಯ ಪಡೆಯಲು ಅನುವು:

ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ಉದಯೋನ್ಮುಖ ಮಾರುಕಟ್ಟೆಯ ವಾಸ್ತವಗಳಿಗೆ ಸ್ಪಂದಿಸುವ ಸಾಮರ್ಥ್ಯವಿರುವ ಆಧುನಿಕ ವ್ಯವಸ್ಥೆಯನ್ನು ರೂಪಿಸಿತು. ಆದಾಗ್ಯೂ, ಕಾನೂನಿನ ಆಶಯವನ್ನು ದಕ್ಷ ಸಾರ್ವಜನಿಕ ಸೇವೆಯಾಗಿ ಪರಿವರ್ತಿಸಲು ಪರಸ್ಪರ ಸಂಪರ್ಕವಿಲ್ಲದ ಹಳೆಯ ವ್ಯವಸ್ಥೆಗಳ ಬದಲಿಗೆ ಏಕೀಕೃತ ಡಿಜಿಟಲ್ ವ್ಯವಸ್ಥೆಯನ್ನು ತರುವುದು ಅಗತ್ಯವಾಗಿತ್ತು. ಹಿಂದಿನ ಪ್ಲಾಟ್‌ಫಾರ್ಮ್‌ಗಳು ಅಸಮಂಜಸವಾದ ಕೆಲಸದ ಹರಿವು, ಹಳೆಯ ತಂತ್ರಜ್ಞಾನ, ಸೀಮಿತ ಪರಸ್ಪರ ಕಾರ್ಯಸಾಧ್ಯತೆ ಮತ್ತು ಮ್ಯಾನುಯಲ್ ಪ್ರಕ್ರಿಯೆಗಳ ಮೇಲಿನ ಅತಿಯಾದ ಅವಲಂಬನೆಯಿಂದ ಬಳಲುತ್ತಿದ್ದವು. ಅನೇಕ ಗ್ರಾಹಕರಿಗೆ-ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಅನಿವಾಸಿ ಭಾರತೀಯರಿಗೆ - ನ್ಯಾಯವನ್ನು ಪಡೆಯಲು ತಗಲುವ ವೆಚ್ಚವೇ ಒಂದು ದೊಡ್ಡ ತಡೆಯಾಗಿ ಪರಿಣಮಿಸುತ್ತಿತ್ತು. ಇ-ಜಾಗೃತಿಯು ಗ್ರಾಹಕ ದೂರಿನ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡುವ ಮೂಲಕ ಈ ರಚನಾತ್ಮಕ ಸವಾಲುಗಳನ್ನು ಪರಿಹರಿಸುತ್ತದೆ. ಒಟಿಪಿ ಆಧಾರಿತ ನೋಂದಣಿ ಮತ್ತು ಆನ್‌ಲೈನ್ ಸಲ್ಲಿಕೆಯಿಂದ ಹಿಡಿದು ಡಿಜಿಟಲ್ ಪರಿಶೀಲನೆ, ಎಲೆಕ್ಟ್ರಾನಿಕ್ ಪಾವತಿಗಳು, ವರ್ಚುವಲ್ ವಿಚಾರಣೆಗಳು, ಬಹುಭಾಷಾ ಆದೇಶಗಳು ಮತ್ತು ನೈಜ-ಸಮಯದ ಪ್ರಕರಣಗಳ ಟ್ರ್ಯಾಕಿಂಗ್‌ವರೆಗೆ, ಈ ಪ್ಲಾಟ್‌ಫಾರ್ಮ್ ನಾಗರಿಕರು ಭೌಗೋಳಿಕ ದೂರ ಅಥವಾ ಕಾರ್ಯವಿಧಾನದ ಸಂಕೀರ್ಣತೆಗಳ ಮಿತಿಯಿಲ್ಲದೆ ನ್ಯಾಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಆರ್ಥಿಕ, ಪ್ರಯಾಣದ ವೆಚ್ಚ ಕಡಿಮೆ:

ಇಂತಹ ಬದಲಾವಣೆಯ ಮಹತ್ವವು ಕೇವಲ ಅನುಕೂಲಕ್ಕಷ್ಟೇ ಸೀಮಿತವಾಗಿಲ್ಲ. ಇದು ನಾಗರಿಕರು ಮತ್ತು ಸಾರ್ವಜನಿಕ ಸಂಸ್ಥೆಗಳ ನಡುವಿನ ಸಂಬಂಧವನ್ನು ಮೂಲಭೂತವಾಗಿ ಬದಲಾಯಿಸುತ್ತದೆ. ಡಿಜಿಟಲ್ ಕೆಲಸದ ಹರಿವು ಕಾಗದದ ಕೆಲಸವನ್ನು ಕಡಿಮೆ ಮಾಡುತ್ತದೆ. ಎಲ್ಲಾ ನ್ಯಾಯವ್ಯಾಪ್ತಿಗಳಲ್ಲಿ ಪ್ರಕ್ರಿಯೆಗಳನ್ನು ಒಂದೇ ರೂಪಕ್ಕೆ ತರುತ್ತದೆ, ಅನಗತ್ಯ ವಿಳಂಬಗಳನ್ನು ಕಡಿಮೆ ಮಾಡುತ್ತದೆ ಮತ್ತು ಪಾರದರ್ಶಕತೆಯನ್ನು ಸುಧಾರಿಸುತ್ತದೆ. ಸ್ವಯಂಚಾಲಿತ ವಿಚಾರಣಾ ಪಟ್ಟಿಗಳು, ಆನ್‌ಲೈನ್ ಡ್ಯಾಶ್‌ಬೋರ್ಡ್‌ಗಳು ಮತ್ತು ತಕ್ಷಣದ ನೋಟಿಫಿಕೇಶನ್‌ಗಳು ದಾವೆದಾರರಿಗೆ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಯ ವೇಳೆಯಲ್ಲಿ ಮಾಹಿತಿ ಸಿಗುವಂತೆ ನೋಡಿಕೊಳ್ಳುತ್ತವೆ. ಇದು ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತದೆ. ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಸಿಗುವಂತೆ ಮಾಡಲು, ಈ ಪ್ಲಾಟ್‌ಫಾರ್ಮ್ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಪ್ರಕರಣ ವಿಶ್ಲೇಷಣೆ, ಧ್ವನಿಯಿಂದ ಪಠ್ಯಕ್ಕೆ ಬದಲಾಯಿಸುವ ಸೌಲಭ್ಯ, ಪಠ್ಯದಿಂದ ಧ್ವನಿಗೆ ಬದಲಾಯಿಸುವ ಸೌಲಭ್ಯ, ಬಹುಭಾಷಾ ಇಂಟರ್‌ಫೇಸ್‌, ಸುಧಾರಿತ ಸಂಶೋಧನಾ ಆಯ್ಕೆಗಳು ಮತ್ತು ಸುಲಭ ಲಭ್ಯತೆಯ ಪರಿಕರಗಳು ಸಮಾಜದ ವಿವಿಧ ವರ್ಗಗಳ ಜನರು ಇದರಲ್ಲಿ ವ್ಯಾಪಕವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತವೆ. ಅಷ್ಟೇ ಪ್ರಮುಖವಾಗಿ, ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಮತ್ತು ರಾಜ್ಯ ಗ್ರಾಹಕ ಆಯೋಗಗಳಾದ್ಯಂತ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ, ಇದು ವರ್ಚುವಲ್ ವಿಚಾರಣೆಗಳನ್ನು ಗ್ರಾಹಕ ನ್ಯಾಯ ವಿತರಣೆಯ ಅತ್ಯಗತ್ಯ ಭಾಗವಾಗಿಸಿದೆ. ದೂರದ ಜಿಲ್ಲೆಗಳಲ್ಲಿ ಅಥವಾ ವಿದೇಶಗಳಲ್ಲಿ ವಾಸಿಸುವ ನಾಗರಿಕರಿಗೆ, ಇದು ಮೊಕದ್ದಮೆಗಳ ಆರ್ಥಿಕ ಮತ್ತು ಪ್ರಯಾಣದ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ.

ಸಂಸ್ಥೆಗಳ ಸ್ಪಂದನೆ ಅಗತ್ಯ: 

ಆದರೂ, ಈ ಪ್ರಮಾಣದ ತಾಂತ್ರಿಕ ಬದಲಾವಣೆಯು ಸವಾಲುಗಳಿಲ್ಲದೆ ಬರುವುದಿಲ್ಲ. ಡಿಜಿಟಲ್ ಸುಧಾರಣೆಗಳು, ಸಂಸ್ಥೆಗಳು ತಮ್ಮ ಹಳೆಯ ಅಭ್ಯಾಸಗಳನ್ನು ಮರುಪರಿಶೀಲಿಸುವಂತೆ ಕೇಳುತ್ತವೆ ಮತ್ತು ಬಳಕೆದಾರರನ್ನು ಹೊಸ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತವೆ. ಇ-ಜಾಗೃತಿಯ ಅನುಷ್ಠಾನದ ಸಮಯದಲ್ಲಿ, ದತ್ತಾಂಶ ಮಾರ್ಪಾಡು, ಪಾವತಿ ಗೇಟ್‌ವೇ ಸಂಯೋಜನೆ, ಇಂಟರ್‌ಫೇಸ್ ಬಳಕೆ ಮತ್ತು ದೀರ್ಘಕಾಲದ ಮ್ಯಾನುಯಲ್ ಪ್ರಕ್ರಿಯೆಗಳಿಂದ ಬದಲಾಗುವ ಬಗ್ಗೆ ಆತಂಕಗಳು ಉದ್ಭವಿಸಿದವು. ಕಾನೂನು ವಲಯದ ಕೆಲವು ವಿಭಾಗಗಳು ಮತ್ತು ಇತರ ಪಾಲುದಾರರು ಹೊಸ ಡಿಜಿಟಲ್ ಪರಿಸರಕ್ಕೆ ಹೊಂದಿಕೊಳ್ಳುವಾಗ ಕೆಲವು ಹಿಂಜರಿಕೆಗಳನ್ನು ವ್ಯಕ್ತಪಡಿಸಿದರು. ಈ ಕಳವಳಗಳನ್ನು ಅಡೆತಡೆಗಳು ಎಂದು ನೋಡುವ ಬದಲಿಗೆ, ಅನುಷ್ಠಾನ ಪ್ರಕ್ರಿಯೆಯಲ್ಲಿ ಅವುಗಳನ್ನು ನಿರಂತರ ಸುಧಾರಣೆಗೆ ಸಿಕ್ಕ ಅವಕಾಶಗಳಾಗಿ ಪರಿಗಣಿಸಲಾಯಿತು. ಗ್ರಾಹಕ ಆಯೋಗಗಳು, ಕಾನೂನು ತಜ್ಞರು, ತಾಂತ್ರಿಕ ಪರಿಣತರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ಮೂಲಕ ಪ್ಲಾಟ್‌ಫಾರ್ಮ್ ಅನ್ನು ಇನ್ನಷ್ಟು ಉತ್ತಮಗೊಳಿಸಲಾಯಿತು. ನಿಯಮಿತ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು, ಪ್ರಾದೇಶಿಕ ಕಾರ್ಯಾಗಾರಗಳು, ವರ್ಚುವಲ್ ತರಬೇತಿಗಳು, ವಾರಕ್ಕೊಮ್ಮೆ ನಡೆಯುವ ಕುಂದುಕೊರತೆ ನಿವಾರಣಾ ಸಂವಾದಗಳು ಮತ್ತು ನಿರಂತರ ತಾಂತ್ರಿಕ ಬೆಂಬಲವು ಪಾಲುದಾರರು ಹೊಸ ವ್ಯವಸ್ಥೆಯಲ್ಲಿ ಕ್ರಮೇಣ ವಿಶ್ವಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿತು. ಈ ಅನುಭವವು ಒಂದು ಪ್ರಮುಖ ಪಾಠವನ್ನು ಗಟ್ಟಿಗೊಳಿಸಿತು. ಡಿಜಿಟಲ್ ಬದಲಾವಣೆಯು ಕೇವಲ ತಂತ್ರಜ್ಞಾನವನ್ನು ತಂದ ತಕ್ಷಣ ಯಶಸ್ವಿಯಾಗುವುದಿಲ್ಲ, ಬದಲಿಗೆ ಸಂಸ್ಥೆಗಳು ಬಳಕೆದಾರರ ಪ್ರತಿಕ್ರಿಯೆಗಳಿಗೆ ಸ್ಪಂದಿಸಿದಾಗ ಮತ್ತು ನಿರಂತರ ಸುಧಾರಣೆಗೆ ಬದ್ಧವಾಗಿದ್ದಾಗ ಮಾತ್ರ ಯಶಸ್ವಿಯಾಗುತ್ತದೆ.

ಆರಂಭಿಕ ಫಲಿತಾಂಶಗಳು ಆಶಾದಾಯಕವಾಗಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ, ಇ-ಜಾಗೃತಿಯು ಲಕ್ಷಾಂತರ ಗ್ರಾಹಕರನ್ನು ಒಂದೇ ಡಿಜಿಟಲ್ ವೇದಿಕೆಗೆ ತಂದಿದೆ. 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಸಲ್ಲಿಕೆಯನ್ನು ಸುಗಮಗೊಳಿಸಿದೆ, ಹೆಚ್ಚಿನ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಮತ್ತು 60ಕ್ಕೂ ಹೆಚ್ಚು ದೇಶಗಳ ಗ್ರಾಹಕರು ಭಾರತದ ಗ್ರಾಹಕ ವಿವಾದ ನಿವಾರಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಒಂದೇ ಮಾದರಿಯ ಡಿಜಿಟಲ್ ಕೆಲಸದ ಹರಿವು ದಕ್ಷತೆಯನ್ನು ಸುಧಾರಿಸಿದೆ ಮತ್ತು ಹಿಂದೆ ವ್ಯವಸ್ಥೆಯಲ್ಲಿದ್ದ ಕಾರ್ಯವಿಧಾನದ ಅಡೆತಡೆಗಳನ್ನು ಕಡಿಮೆ ಮಾಡಿದೆ. ಆದ್ದರಿಂದ, ಇ-ಆಡಳಿತದ ರಾಷ್ಟ್ರೀಯ ಪ್ರಶಸ್ತಿಗಳು 2026ರಲ್ಲಿ \B‘ರಜತ ಪ್ರಶಸ್ತಿ''ಯ\B ಮೂಲಕ ಸಿಕ್ಕ ಮನ್ನಣೆಯು ಕೇವಲ ಒಂದು ಸಾಂಸ್ಥಿಕ ಸಾಧನೆಯಾಗಿ ಮಾತ್ರವಲ್ಲದೆ, ಸರ್ಕಾರದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮರುರೂಪಿಸಿರುವುದಕ್ಕೆ ಸಿಕ್ಕ ಗೌರವವಾಗಿದೆ. ಅರ್ಥಪೂರ್ಣ ಡಿಜಿಟಲ್ ಆಡಳಿತ ಎಂದರೆ ಇರುವ ಪ್ರಕ್ರಿಯೆಗಳನ್ನು ಕಂಪ್ಯೂಟರೀಕರಣ ಮಾಡುವುದಲ್ಲ, ಬದಲಿಗೆ ಅವುಗಳನ್ನು ಸರಳ, ವೇಗ ಮತ್ತು ನಾಗರಿಕ-ಕೇಂದ್ರಿತವಾಗಿರುವಂತೆ ಮರುರೂಪಿಸುವುದು ಎಂಬುದನ್ನು ಈ ಪ್ರಶಸ್ತಿಯು ಗುರುತಿಸುತ್ತದೆ.

ಪಾರದರ್ಶಕತೆ, ದಕ್ಷತೆಗೆ ಆದ್ಯತೆ ಬೇಕು:

ತಂತ್ರಜ್ಞಾನದ ಹಿಂದೆ ಬಲವಾದ ಸಾಂಸ್ಥಿಕ ಬದ್ಧತೆ ಇದ್ದಾಗ ಅದು ಸಾರ್ವಜನಿಕ ಸೇವಾ ವಿತರಣೆಯನ್ನು ಬದಲಾಯಿಸಬಲ್ಲದು ಎಂಬುದನ್ನು ಭಾರತದ ವಿಶಾಲವಾದ ಡಿಜಿಟಲ್ ಇಂಡಿಯಾ ಪಯಣವು ತೋರಿಸಿಕೊಟ್ಟಿದೆ. ಆಧಾರ್ ಸಂಖ್ಯೆ ಮತ್ತು ನೇರ ನಗದು ವರ್ಗಾವಣೆಯಿಂದ ಹಿಡಿದು ಆನ್‌ಲೈನ್ ತೆರಿಗೆ ಮತ್ತು ಆರೋಗ್ಯ ರಕ್ಷಣಾ ಪ್ಲಾಟ್‌ಫಾರ್ಮ್‌ಗಳವರೆಗೆ, ದೇಶವು ಆಡಳಿತದಲ್ಲಿ ತಂತ್ರಜ್ಞಾನದ ಪಾತ್ರವನ್ನು ಸ್ಥಿರವಾಗಿ ವಿಸ್ತರಿಸಿದೆ. ಗ್ರಾಹಕ ನ್ಯಾಯವು ಈಗ ರಚನಾತ್ಮಕ ಡಿಜಿಟಲ್ ಸುಧಾರಣೆಗೆ ಒಳಗಾಗುತ್ತಿರುವ ವಲಯಗಳ ಬೆಳೆಯುತ್ತಿರುವ ಪಟ್ಟಿಗೆ ಸೇರಿದೆ. ಇ-ಜಾಗೃತಿಯ ಯಶಸ್ಸು ಭವಿಷ್ಯದ ಆಡಳಿತ ಸುಧಾರಣೆಗಳಿಗೆ ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಸಂಸ್ಥೆಗಳ ಬದಲಿಗೆ ನಾಗರಿಕರನ್ನು ಕೇಂದ್ರವಾಗಿಟ್ಟುಕೊಂಡು ವಿನ್ಯಾಸಗೊಳಿಸಬೇಕು. ಸುಲಭ ಲಭ್ಯತೆಯನ್ನು ಕೇವಲ ಕೊನೆಯ ಆಯ್ಕೆಯಾಗಿ ನೋಡದೆ ಒಂದು ಪ್ರಮುಖ ತತ್ವವಾಗಿ ಪರಿಗಣಿಸಬೇಕು. ಕೃತಕ ಬುದ್ಧಿಮತ್ತೆಯು ನ್ಯಾಯಸಮ್ಮತೆಗೆ ಧಕ್ಕೆ ತರದೇ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ತಂತ್ರಜ್ಞಾನವು ಹೊಸ ಸಂಕೀರ್ಣತೆಗಳನ್ನು ಸೃಷ್ಟಿಸುವ ಬದಲು ನ್ಯಾಯವನ್ನು ಸರಳಗೊಳಿಸಬೇಕು.

‘ಗ್ರಾಹಕ ದೇವೋ ಭವ’ ಆಶಯ:

ಭಾರತದ ಡಿಜಿಟಲ್ ಆರ್ಥಿಕತೆಯು ವಿಸ್ತರಿಸುತ್ತಾ ಹೋದಂತೆ, ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಸಂಸ್ಥೆಗಳ ವಿಶ್ವಾಸಾರ್ಹತೆಯ ಮೇಲೆಯೇ ಗ್ರಾಹಕರ ನಂಬಿಕೆ ಹೆಚ್ಚು ಅವಲಂಬಿತವಾಗಿರುತ್ತದೆ. ದಕ್ಷ ವಿವಾದ ಪರಿಹಾರವು ಇನ್ನು ಮುಂದೆ ಕೇವಲ ಆಡಳಿತಾತ್ಮಕ ಉದ್ದೇಶವಾಗಿ ಉಳಿದಿಲ್ಲ. ಇದು ಮಾರುಕಟ್ಟೆಗಳಲ್ಲಿ ನಂಬಿಕೆಯನ್ನು ಬಲಪಡಿಸುವ ಮತ್ತು ಜವಾಬ್ದಾರಿಯುತ ವ್ಯಾಪಾರ ಪದ್ಧತಿಗಳನ್ನು ಪ್ರೋತ್ಸಾಹಿಸುವ ಒಂದು ಆರ್ಥಿಕ ಅಗತ್ಯತೆಯಾಗಿದೆ. ಡಿಜಿಟಲ್ ಬದಲಾವಣೆಯು ಕಾನೂನಿನ ಆಶಯ ಮತ್ತು ನಾಗರಿಕರ ಅನುಭವದ ನಡುವಿನ ಅಂತರವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ಇ-ಜಾಗೃತಿ ತೋರಿಸಿಕೊಡುತ್ತದೆ. ಗ್ರಾಹಕ ನ್ಯಾಯವನ್ನು ವೇಗವಾಗಿ, ಹೆಚ್ಚು ಪಾರದರ್ಶಕವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಮೂಲಕ, ಇದು ಒಂದು ಸರಳ ಮಾದರಿಯಾಗಿದ್ದು, ಶಕ್ತಿಯುತ ತತ್ವವಾಗಿದೆ. ಡಿಜಿಟಲ್ ಪ್ರಜಾಪ್ರಭುತ್ವದಲ್ಲಿ ನ್ಯಾಯದ ಲಭ್ಯತೆಯು ಸೇವೆಗಳ ಲಭ್ಯತೆಯಷ್ಟೇ ಸುಲಭವಾಗಿರಬೇಕು. 21ನೇ ಶತಮಾನದಲ್ಲಿ ‘ಗ್ರಾಹಕ ದೇವೋ ಭವ’ಎಂಬ ಆಶಯಕ್ಕೆ ಇದು ಅತ್ಯಂತ ಅರ್ಥಪೂರ್ಣ ರೂಪವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಹೈದರ್‌ ಅಲಿ, ಟಿಪ್ಪು ಪರೋಕ್ಷ ಕೊಡುಗೆ ನೀಡಿದ್ದು ಹೇಗೆ?
ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1 ಯಾರ್‍ಯಾರಿದ್ದಾರೆ ಲಿಸ್ಟ್‌ನಲ್ಲಿ?