
ಲಕ್ನೋ (ಅ.7): ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಎಷ್ಟು ಕಳಪೆಯಾಗಿ ಮಾಡಲಾಗಿದೆ ಎನ್ನುವುದು ಮಳೆಗಾಲದ ಋತುವಿನಲ್ಲಿ ಬಹಿರಂಗವಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಲಕ್ನೋದಿಂದ ಗಾಜಿಪುರಕ್ಕೆ ಸಂಪರ್ಕ ಕಲ್ಪಿಸುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮುಳುಗಡೆಯಾಗಿದೆ. ಇದರ ನಡುವೆ ರಸ್ತೆಯಲ್ಲಿಯೇ ಅಂದಾಜು 15 ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ತಡರಾತ್ರಿ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದ ಕಾರುಗಳು ಈ ಗುಂಡಿಗೆ ಬಿದ್ದು ಜಖಂಗೊಂಡಿವೆ ಎಂದು ವರದಿಯಾಗಿದೆ. ಸದ್ಯ ಯುಪಿಇಡಿಎ ವತಿಯಿಂದ ರಾತ್ರೋರಾತ್ರಿ ಹೊಂಡವನ್ನು ದುರಸ್ತಿ ಮಾಡಲಾಗಿದೆ. ಆದರೆ, ಈ ವಿಚಾರವನ್ನು ಇಟ್ಟುಕೊಂಡು ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷವು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದು, ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಏನು ಬೇಕಿದೆ ಎಂದು ಪ್ರಶ್ನೆ ಮಾಡಿದೆ. 22 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 340 ಕಿಮೀ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 16 ನವೆಂಬರ್ 2021 ರಂದು ಸುಲ್ತಾನ್‌ಪುರದ ಕುರೇಭಾರ್‌ನ ಅರ್ವಾಲ್ ಕಿರಿಯಲ್ಲಿ ಏರ್ ಸ್ಟ್ರಿಪ್‌ನಿಂದ ಉದ್ಘಾಟಿಸಿದರು. ಲಕ್ನೋ, ಬಾರಾಬಂಕಿ, ಅಮೇಥಿ, ಅಯೋಧ್ಯೆ, ಸುಲ್ತಾನ್‌ಪುರ, ಅಂಬೇಡ್ಕರ್ ನಗರ, ಅಜಂಗಢ, ಮೌ ಮತ್ತು ಗಾಜಿಪುರ ಜಿಲ್ಲೆಗಳು ಈ ಯೋಜನೆಯೊಂದಿಗೆ ಸಂಪರ್ಕ ಹೊಂದಿವೆ.
ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ತುರ್ತು ಸಂದರ್ಭದಲ್ಲಿ, ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಲ್ಯಾಂಡಿಂಗ್ / ಟೇಕ್‌ಆಫ್ ಅನ್ನು ಸಹ ಮಾಡಬಹುದು. ಆ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ ಇದಕ್ಕಾಗಿ ಸುಲ್ತಾನ್ ಪುರದಲ್ಲಿ 3.2 ಕಿ.ಮೀ ಉದ್ದದ ಏರ್ ಸ್ಟ್ರಿಪ್ ಕೂಡ ನಿರ್ಮಿಸಲಾಗಿದೆ. ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ ಹಳಿಯಾಪುರ ಬಳಿ ಏಕಾಏಕಿ ರಸ್ತೆ ಕುಸಿದು ಸುಮಾರು 15 ಅಡಿಯಷ್ಟು ಗುಂಡಿ ಉಂಟಾಗಿತ್ತು.
ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರದ (Uttar Pradesh Governament) ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಪೂರ್ವಾಂಚಲ ಎಕ್ಸ್‌ಪ್ರೆಸ್ ವೇ ಭಾರೀ ಮಳೆಗೆ ಹಾನಿಯಾಗಿದ್ದನ್ನು ವಿರೋಧ ಪಕ್ಷಗಳು ಟೀಕೆಗೆ ಬಳಸಿಕೊಳ್ಳಬಹುದು ಎನ್ನುವ ಎಚ್ಚರಿಕೆಯಲ್ಲಿ ಯುಪಿಇಡಿಎ ರಾತ್ರೋರಾತ್ರಿ ದುರಸ್ತಿ ಮಾಡಲಾಗಿದೆ. ರಸ್ತೆಯಲ್ಲಿ ನಿರ್ಮಾಣವಾದ ದೊಡ್ಡ ಗುಂಡಿಯ ಕಾರಣದಿಂದಾಗಿ ಸಾಕಷ್ಟು ಕಾರ್‌ಗಳು ಕೂಡ ಜಖಂ ಆಗಿದೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ. ಈ ವಿಚಾರದಲ್ಲಿ ಟೀಕೆ ಮಾಡಿರುವ ಕಾಂಗ್ರೆಸ್ (Congress) 'ಇತ್ತೀಚೆಗೆ ನಿರ್ಮಿಸಿದ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ (Purvanchal Expressway) ಎರಡು ಮಳೆಯನ್ನು ಕಾಣಲು ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ಕುಸಿದಿದೆ' ಎಂದು ಬರೆದುಕೊಂಡಿದೆ.
ಎಕ್ಸ್‌ಪ್ರೆಸ್ ವೇನಲ್ಲಿ ನಿಂತಿದ್ದ ಡಬಲ್ ಡೆಕರ್ ಬಸ್‌ಗೆ ಗುದ್ದಿದ ಇನ್ನೊಂದು ಬಸ್, 8 ಸಾವು!
ಗುರುವಾರ ರಾತ್ರಿಯೇ ಯುಪಿಇಡಿಎ (UPEDA) ಕ್ರೇನ್ ಮತ್ತು ಜೆಸಿಬಿ ಕಳುಹಿಸಿ ದುರಸ್ತಿ ಕಾರ್ಯ ಆರಂಭಿಸಿತು. ಅದೇ ಸಮಯದಲ್ಲಿ, ದೊಡ್ಡ ವಾಹನಗಳ ಸಂಚಾರವನ್ನು ನಿಲ್ಲಿಸಿ, ಸಣ್ಣ ವಾಹನಗಳನ್ನು ಎಚ್ಚರಿಕೆಯಿಂದ ಬದಿಯಿಂದ ಸಾಗಲು ಅವಕಾಶ ನೀಡಲಾಗಿತ್ತು. ಶುಕ್ರವಾರ ಬೆಳಗಿನ ಜಾವ ರಸ್ತೆಯ ಹೊಂಡವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹಳಿಯಾಪುರ ಪೊಲೀಸರು ಮತ್ತು ಯುಪಿಡಿಎ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದರು.
Purvanchal Expressway ಉದ್ಘಾಟಿಸಿದ ಪ್ರಧಾನಿ ಮೋದಿ, IAF ಏರ್‌ಕ್ರಾಫ್ಟ್ ವೈಮಾನಿಕ ಪ್ರದರ್ಶನ ವೀಕ್ಷಣೆ!
ಜನಸಾಮಾನ್ಯರ ಪ್ರಶ್ನೆ: ಪೂರ್ವಾಂಚಲ ಎಕ್ಸ್‌ಪ್ರೆಸ್ ವೇಯಲ್ಲಿ ಕುಸಿದು ಗುಂಡಿ (Carter) ನಿರ್ಮಾಣವಾದ ಬೆನ್ನಲ್ಲಿಯೇ ಜನಸಾಮಾನ್ಯರು ಸರ್ಕಾರ ಹಾಗೂ ಯುಪಿಇಡಿಎಅನ್ನು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಎಕ್ಸ್‌ಪ್ರೆಸ್ ವೇಅನ್ನು ಕಳಪೆಯಾಗಿ ನಿರ್ಮಾಣ ಮಾಡಲಾಗಿದೆ ಎಂದು ದೂರಿಸಿದ್ದಾರೆ. ತರಾತುರಿ ಕಾಮಗಾರಿಯಿಂದ ಮಳೆಯಲ್ಲೇ ಇಂತಹ ದುಸ್ಥಿತಿ ಎದುರಾಗಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಇದು ಒಣ ಭೂಮಿ, ಮಣ್ಣು ಅಷ್ಟಾಗಿ ಕೂಡಿಕೊಳ್ಳುವುದಿಲ್ಲ. ಈ ಪ್ರದೇಶದಲ್ಲಿ ಮಣ್ಣು ತುಂಬಿದಾಗ ಸಾಕಷ್ಟು ನೀರು ಹಾಯಿಸಿ ರೋಲರ್ ಓಡಿಸಬೇಕಿತ್ತು. ಆದರೆ, ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಈ ಕೆಲಸವನ್ನು ಸಸೂತ್ರವಾಗಿ ಮಾಡಿಲ್ಲ. ಹಾಗಾಗಿ ಮಳೆಗೆ ಸ್ಥಳ ಕುಸಿದಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ