ಅಡಿಕೆ ಕೃಷಿಕರಿಗೆ ಗುಡ್‌ನ್ಯೂಸ್‌ ನೀಡಿದ DRI, 2500 ಕೋಟಿ ರೂಪಾಯಿ ಅಕ್ರಮ ಬಯಲು!

Published : Aug 17, 2026, 04:19 PM IST
Areca Nut Scam

ಸಾರಾಂಶ

ಆಗ್ನೇಯ ಏಷ್ಯಾದಿಂದ ಅಡಿಕೆ ಆಮದು ಮಾಡಿಕೊಂಡು, 'ಸಾಫ್ಟಾ' ಒಪ್ಪಂದವನ್ನು ದುರ್ಬಳಕೆ ಮಾಡಿ ಭಾರತ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂ. ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದೆ.

ನವದೆಹಲಿ (ಅ.17): ಆಗ್ನೇಯ ಏಷ್ಯಾ ದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಂಡು ಭಾರತ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡುತ್ತಿದ್ದ ಬೃಹತ್ ದಂಧೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಭೇದಿಸಿದ್ದಾರೆ. ತಿಂಗಳುಗಟ್ಟಲೆ ನಡೆಸಿದ ಚುರುಕಿನ ಕಾರ್ಯಾಚರಣೆಯ ವರದಿಯನ್ನು 16 ಆಗಸ್ಟ್ 2026 ರಂದು ಬಿಡುಗಡೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್‌ಮೈಂಡ್‌ಗಳು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.

ಏನಿದು 'ಸಾಫ್ಟಾ' (SAFTA) ದುರ್ಬಳಕೆ ಅಕ್ರಮ ದಂಧೆ?

ಭಾರತಕ್ಕೆ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಂಡರೆ ಶೇಕಡಾ 100 ರಷ್ಟು ಮೂಲ ಕಸ್ಟಮ್ಸ್ ಸುಂಕ (Basic Customs Duty - BCD) ಪಾವತಿಸಬೇಕಾಗುತ್ತದೆ. ಆದರೆ 'ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ' (SAFTA) ನಿಯಮಗಳ ಪ್ರಕಾರ, ಬಾಂಗ್ಲಾದೇಶದಲ್ಲೇ ಬೆಳೆದ ಅಡಿಕೆಯನ್ನು ಭಾರತಕ್ಕೆ ಆಮದು ಮಾಡಿಕೊಂಡರೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ.

ಇದನ್ನೇ ಅಸ್ತ್ರವಾಗಿಸಿಕೊಂಡ ಸಿಂಡಿಕೇಟ್ ಮುಖಂಡರು, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಮಲೇಷ್ಯಾದಂತಹ ದೇಶಗಳಿಂದ ಕಡಿಮೆ ಬೆಲೆಗೆ ಅಡಿಕೆ ಖರೀದಿಸುತ್ತಿದ್ದರು. ಬಳಿಕ ಅದನ್ನು ಬಾಂಗ್ಲಾದೇಶದ ರಫ್ತು ಸಂಸ್ಕರಣಾ ವಲಯಕ್ಕೆ (EPZ) ತಂದು, ಅಲ್ಲಿ ಚೀಲ ಮತ್ತು ಕಂಟೇನರ್‌ಗಳನ್ನು ಬದಲಾಯಿಸುತ್ತಿದ್ದರು. 'ಸಾಫ್ಟಾ' ನಿಯಮಾವಳಿಗಳ ಅಡಿಯಲ್ಲಿ ಸುಳ್ಳು 'ಉತ್ಪತ್ತಿ ಪ್ರಮಾಣಪತ್ರ' (Certificate of Origin) ಪಡೆದುಕೊಂಡು, ಆ ಅಡಿಕೆಯನ್ನು ಬಾಂಗ್ಲಾದೇಶದಲ್ಲೇ ಬೆಳೆದದ್ದು ಎಂದು ಬಿಂಬಿಸಿ ತೆರಿಗೆ ವಿನಾಯಿತಿಯೊಂದಿಗೆ ಭಾರತಕ್ಕೆ ತರುತ್ತಿದ್ದರು.

ಕೋಲ್ಕತ್ತಾ, ವಿಶಾಖಪಟ್ಟಣಂನಲ್ಲಿ ಏಕಕಾಲಕ್ಕೆ ದಾಳಿ

ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ಕೋಲ್ಕತ್ತಾ ಮತ್ತು ವಿಶಾಖಪಟ್ಟಣಂನಲ್ಲಿರುವ ಆಮದುದಾರರು, ಕಸ್ಟಮ್ಸ್ ಬ್ರೋಕರ್‌ಗಳು ಹಾಗೂ ಐಇಸಿ (IEC) ಧಾರಿಗಳ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 75 ಲಕ್ಷ ರೂಪಾಯಿ ನಗದು ಮತ್ತು 160 ಮೆಟ್ರಿಕ್ ಟನ್ ಲೈವ್ ಅಡಿಕೆ ರವಾನೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬೃಹತ್ ಅಕ್ರಮಕ್ಕೆ ಪ್ರಮುಖವಾಗಿ ಸಹಕರಿಸುತ್ತಿದ್ದ ಕಸ್ಟಮ್ಸ್ ಬ್ರೋಕರ್ ಸಂಸ್ಥೆಯ ಪರವಾನಗಿಯನ್ನು (Licence) ಸಕ್ಷಮ ಪ್ರಾಧಿಕಾರವು ಅಮಾನತುಗೊಳಿಸಿದೆ. ಈ ಅಕ್ರಮ ಹಣದ ವಹಿವಾಟಿಗೆ ಹವಾಲಾ ಮಾರ್ಗಗಳು ಹಾಗೂ ನಕಲಿ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ದೇಶದ ಅಡಿಕೆ ಬೆಳೆಗಾರರಿಗೆ ಸಿಗಲಿದೆ ಆಸರೆ

ವಿದೇಶಿ ಅಡಿಕೆಯ ಅಕ್ರಮ ಆಮದಿನಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಕೃತಕ ಬೆಲೆ ಕುಸಿತ ಉಂಟಾಗುತ್ತಿತ್ತು. ಇದರಿಂದ ಕರ್ನಾಟಕ ಸೇರಿದಂತೆ ಭಾರತದ ಸ್ಥಳೀಯ ಅಡಿಕೆ ಬೆಳೆಗಾರರಿಗೆ ಮತ್ತು ಪ್ರಾಮಾಣಿಕ ವ್ಯಾಪಾರಿಗಳಿಗೆ ಭಾರಿ ನಷ್ಟವಾಗುತ್ತಿತ್ತು. ಇದೀಗ ಡಿಆರ್‌ಐ ಈ ಜಾಲವನ್ನು ಧ್ವಂಸಗೊಳಿಸಿರುವುದರಿಂದ ದೇಶೀಯ ರೈತರಿಗೆ ಮತ್ತು ಆರ್ಥಿಕ ಭದ್ರತೆಗೆ ಆಗುತ್ತಿದ್ದ ದೊಡ್ಡ ಮಟ್ಟದ ಧಕ್ಕೆಯನ್ನು ತಡೆಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

CJPಯಂತೆ ಶುರುವಾದ ದಿಮಾಗಿ ನಕ್ಸಲ್ ಜನತಾ ಪಾರ್ಟಿ; ಇನ್‌ಸ್ಟಾಗ್ರಾಂನಿಂದ ಕಣ್ಮರೆಯಾದ ಖಾತೆ
Shehzad Poonawalla: ಕಮಲ ಪಾಳಯಕ್ಕೆ ಶಹಜಾದ್ ಪೂನಾವಾಲಾ ರಾಜೀನಾಮೆ; ಭಾವುಕ ವಿದಾಯ