ಬಂದಿದೆ ಸಮುದ್ರಕ್ಕೆ ಬಣ್ಣ ‘ಹಚ್ಚುವ’ ದೇಸಿ ಮಾರ್ಕರ್‌

By Kannadaprabha NewsFirst Published Feb 5, 2021, 8:41 AM IST
Highlights

ಅಪಘಾತ ಅಥವಾ ಅಪಾಯಕ್ಕೆ ಸಿಲುಕಿದ ಯುದ್ಧ ವಿಮಾನ, ಹಡಗುಗಳನ್ನು ಪತ್ತೆ ಹಚ್ಚಿ ಸೈನಿಕರನ್ನು ರಕ್ಷಿಸಲು ಅನುವಾಗುವಂತೆ ಸಮುದ್ರಕ್ಕೇ ಬಣ್ಣ ಹಚ್ಚುವ ಮೊಟ್ಟಮೊದಲ ಸ್ವದೇಶಿ ‘ಸೀ ಡೈ ಮಾರ್ಕರ್‌’ ಆವಿಷ್ಕಾರ ಮಾಡಲಾಗಿದೆ. 

ವರದಿ :  ಶ್ರೀಕಾಂತ್‌ ಎನ್‌.ಗೌಡಸಂದ್ರ

 ಬೆಂಗಳೂರು (ಫೆ.05): ಸಮುದ್ರದಲ್ಲಿ ಅಪಘಾತ ಅಥವಾ ಅಪಾಯಕ್ಕೆ ಸಿಲುಕಿದ ಯುದ್ಧ ವಿಮಾನ, ಹಡಗುಗಳನ್ನು ಪತ್ತೆ ಹಚ್ಚಿ ಸೈನಿಕರನ್ನು ರಕ್ಷಿಸಲು ಅನುವಾಗುವಂತೆ ಸಮುದ್ರಕ್ಕೇ ಬಣ್ಣ ಹಚ್ಚುವ ಮೊಟ್ಟಮೊದಲ ಸ್ವದೇಶಿ ‘ಸೀ ಡೈ ಮಾರ್ಕರ್‌’ ಅನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಸಮುದ್ರ ಗಡಿಯೇ ಹೆಚ್ಚಿರುವ ಭಾರತದಲ್ಲಿ ಭಾರತೀಯ ವಾಯು ಸೇನೆ ಹಾಗೂ ನೌಕಾಸೇನೆ ಕಾರ್ಯಾಚರಣೆ ವೇಳೆ ಸಮುದ್ರದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ವೇಳೆಯಲ್ಲಿ ಸಮುದ್ರದಲ್ಲಿ ಮುಳುಗಿರುವ ಹಡಗು, ವಿಮಾನ ಪತ್ತೆಹಚ್ಚಿ ತಕ್ಷಣ ರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ.

ಹೀಗಾಗಿ ಅಪಾಯ ಉಂಟಾದ ಕೂಡಲೇ ಸೈನಿಕರು ಅಥವಾ ಅಪಾಯಕ್ಕೆ ಒಳಗಾದವರು ‘ಸೀ ಡೈ ಮಾರ್ಕರ್‌’ ಪ್ಯಾಕೆಟ್‌ಗಿರುವ ದಾರವನ್ನು ಎಳೆದರೆ ಸುತ್ತಲಿನ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಫ್ಲೋರೋಸೆಂಟ್‌ ಹಸಿರು ಬಣ್ಣವಾಗಿರುವುದರಿಂದ ಆ ಭಾಗದ ನೀರು ಹಸಿರು ಬಣ್ಣದ ಜೊತೆಗೆ ಹೊಳಪಿನಿಂದ ಕೂಡಿರುತ್ತದೆ. ಸುಮಾರು 5 ಕಿ.ಮೀ. ದೂರದಲ್ಲಿರುವ ಹೆಲಿಕಾಪ್ಟರ್‌, ಯುದ್ಧ ವಿಮಾನವೂ ಸಹ ಅಪಘಾತ ನಡೆದ ಸ್ಥಳವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ‘ಸೀ ಡೈ ಮಾರ್ಕರ್‌’ ಪ್ಯಾಕೆಟ್‌ ಮೇಲೆ ಸರಳವಾಗಿ ಎಳೆಯಬಲ್ಲ ದಾರವಿರುತ್ತದೆ. ಒಮ್ಮೆ ದಾರ ಎಳೆದು ನೀರು ಸ್ಪರ್ಶಿಸಿದರೆ ಸಾಕು ಸುತ್ತಲೂ ನೀರು ಹಸಿರುಮಯವಾಗುತ್ತದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದರು.

ಮೈಸೂರಿನಲ್ಲಿ ಉತ್ಪಾದನೆ:  ಈವರೆಗೆ ರಕ್ಷಣಾ ಕಾರ್ಯಾಚರಣೆಗಳ ವೇಳೆ ಬಳಸಲು ಭಾರತೀಯ ವಾಯುಸೇನೆಯು ಸೀ ಡೈ ಮಾರ್ಕರ್‌ರನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಡಿಆರ್‌ಡಿಒ ಅಂಗ ಸಂಸ್ಥೆಯಾದ ಮೈಸೂರಿನಲ್ಲಿರುವ ಡಿಫೆನ್ಸ್‌ ಫುಡ್‌ ರೀಸರ್ಚ್ ಲ್ಯಾಬೊರೇಟರಿಯಿಂದಲೇ ಮೊಟ್ಟಮೊದಲ ಸ್ವದೇಶಿ ಸೀ ಡೈ ಮಾರ್ಕರನ್ನು ಆವಿಷ್ಕರಿಸಲಾಗಿದೆ. ಅಲ್ಲದೆ ಭಾರತೀಯ ವಾಯುಸೇನೆಗೆ ಪೂರೈಸಲು ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸೇನೆಗೆ ಮತ್ತಷ್ಟು ಬಲ ಕೊಟ್ಟ ಬಜೆಟ್, ಸತತ 7 ವರ್ಷ ರಕ್ಷಣಾ ವಲಯಕ್ಕೆ ಹೆಚ್ಚಿದ ಅನುದಾನ! .

ಸೂರ್ಯನ ಕಿರಣ ಬಿದ್ದರೆ ಪ್ರತಿಫಲಿಸುತ್ತದೆ:  ಡೈ ಮಾರ್ಕರ್‌ನಲ್ಲಿ ಫ್ಲೋರೋಸೆಂಟ್‌ ರಸಾಯನ ಬಳಸಲಾಗುತ್ತದೆ. ಹೀಗಾಗಿ ಹಸಿರು ಬಣ್ಣಕ್ಕೆ ತಿರುಗಿದ ನೀರಿನ ಮೇಲೆ ಸೂರ್ಯನ ಕಿರಣಗಳು ಬಿದ್ದರೆ ವಿಶೇಷವಾಗಿ ಪ್ರತಿಫಲಿಸುತ್ತವೆ. ಹೀಗಾಗಿ ಇನ್ನೂ ಸುಲಭವಾಗಿ ಅಪಘಾತದ ಸ್ಥಳವನ್ನು ಪತ್ತೆ ಹಚ್ಚಬಹುದು. ಕತ್ತಲಲ್ಲಿ ಕಾರ್ಯಾಚರಣೆ ನಡೆಸಿದರೂ ಬೆಳಕು ಇದ್ದರೆ ಅಪಾಯ ನಡೆದ ಸ್ಥಳವನ್ನು ಗುರುತಿಸಲು ಅನುಕೂಲವಾಗುತ್ತದೆ ಎಂದರು.

click me!