ಎಲ್ಲ ಪ್ರತಿರೋಧ ಮೆಟ್ಟಿನಿಂತು ಪ್ರಮುಖ ವಿಪಕ್ಷವಾಗಿ ಎನ್‌ಸಿಪಿ ಉದಯ | ಪಕ್ಷಾಂತರ, ಭ್ರಷ್ಟಾಚಾರ ಆರೋಪಗಳನ್ನು ಮೆಟ್ಟಿನಿಂತ ಪವಾರ್ | ಮಳೆಯಲ್ಲಿ ಮಾಡಿದ ಭಾಷಣದಿಂದಲೂ ಅನುಕೂಲ!
ಮುಂಬೈ (ಅ. 25): ‘ಮಹಾರಾಷ್ಟ್ರದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ (ಎನ್‌ಸಿಪಿ) ಯುಗ ಮುಗಿದೇ ಹೋಯಿತು. ಅದು ಎರಡಂಕಿಯನ್ನೂ ತಲುಪಲ್ಲ’ ಎಂದು ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ನಾಯಕರು ಪ್ರಚಾರ ಮಾಡಿದರು. ಆದರೆ ಈಗ ಚುನಾವಣಾ ಫಲಿತಾಂಶದಲ್ಲಿ ಎನ್‌ಸಿಪಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ತಮ್ಮ ಯುಗ ಇನ್ನೂ ಅಂತ್ಯವಾಗಿಲ್ಲ ಎಂಬ ಸಂದೇಶವನ್ನು ವಿರೋಧಿಗಳಿಗೆ ಎನ್‌ಸಿಪಿ ನಾಯಕ ಶರದ್ ಪವಾರ್ ಸಂದೇಶ ರವಾನಿಸಿದ್ದಾರೆ.
ವಕೀಲಿಕೆ ಬಿಟ್ಟು ರಾಜಕೀಯ ಪ್ರವೇಶಿಸಿದ ಫಡ್ನವೀಸ್ ಯಶೋಗಾಥೆ
ಎನ್‌ಸಿಪಿ ನಾಯಕರಿಗೆ ಭೂಗತ ಲೋಕದ ನಂಟು, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆ, ಪ್ರಮುಖ ನಾಯಕರ ಪಕ್ಷಾಂತರ- ಈ ರೀತಿ ಅನೇಕ ಸಮಸ್ಯೆಗಳನ್ನು ಶರದ್ ಪವಾರ್ ಎದುರಿಸಿದರು. ಆದರೆ ಜನರು ಫಲಿತಾಂಶವನ್ನೇ ಬೇರೆ ರೀತಿ ನೀಡಿದ್ದು, ಮಿತ್ರಪಕ್ಷ ಕಾಂಗ್ರೆಸ್‌ಗಿಂತ ಎನ್‌ಸಿಪಿಗೆ ಹೆಚ್ಚು ಸ್ಥಾನ ಬಂದಿದ್ದು, ವಿಧಾನಸಭೆಯ ಮುಖ್ಯ ವಿಪಕ್ಷವಾಗಿ ಹೊರಹೊಮ್ಮಿದೆ.
ತಮ್ಮದೇ ಪಕ್ಷದ ಸಂಸದರಾಗಿದ್ದ ಶಿವಾಜಿ ಮಹಾರಾಜರ ವಂಶಜ ಉದಯನ್‌ರಾಜೇ ಭೋಂಸ್ಲೆ ಅವರು ಬಿಜೆಪಿ ಸೇರಿ ಸತಾರಾ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಭೋಂಸ್ಲೆ ಅವರನ್ನು ಎನ್‌ಸಿಪಿ ಅಭ್ಯರ್ಥಿ ಶ್ರೀನಿವಾಸ ಪಾಟೀಲ್ ಸೋಲಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಪವಾರ್ ಅವರು ಸುರಿವ ಮಳೆಯಲ್ಲೇ ಭಾಷಣ ಮಾಡಿ ಗಮನ ಸೆಳೆದಿದ್ದರು.
ಶರದ್ ಪವಾರ್ ಮಳೆಯಲ್ಲಿ ನೆನೆದು ಪ್ರಚಾರ ಮಾಡಿದರು!
ಎನ್‌ಸಿಪಿ ನಾಯಕ ಶರದ್ ಪವಾರ್ ಸುರಿಯುತ್ತಿರುವ ಮಳೆಯಲ್ಲೇ ಪ್ರಚಾರ ಮಾಡಿದ್ದ ಸತಾರಾ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿ ಶ್ರೀನಿವಾಸ್ ಪಾಟೀಲ್ ಗೆಲುವು ಸಾಧಿಸಿದ್ದಾರೆ.