
ನವದೆಹಲಿ: ‘ನಾಯಿಗಳಿಗೆ ಬೀದಿಗಳಲ್ಲಿ ಸಿಕ್ಕಸಿಕ್ಕಲ್ಲಿ ಆಹಾರ ಹಾಕಬಾರದು’ ಎಂದು ಕಟ್ಟೆಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, ಅದಕ್ಕಾಗಿ ಮೀಸಲು ಸ್ಥಳಗಳನ್ನು ಸ್ಥಾಪಿಸುವಂತೆ ನಗರಪಾಲಿಕೆಗಳಿಗೆ ಸೂಚಿಸಿದೆ.
‘ನಾಯಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಅನುಗುಣವಾಗಿ ಪ್ರತಿ ಪುರಸಭೆಯ ವಾರ್ಡ್‌ಗಳಲ್ಲಿ ನಾಯಿಗಳಿಗೆ ಆಹಾರ ಹಾಕುವ ಜಾಗಗಳನ್ನು ನಿರ್ಮಿಸಬೇಕು. ಜತೆಗೆ, ಸೂಚನಾ ಫಲಕವನ್ನೂ ಅಳವಡಿಸಬೇಕು’ ಎಂದು ಹೇಳಿದೆ.
ಜತೆಗೆ, ‘ಕಂಡಕಂಡಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವುದರಿಂದ ಅನೇಕ ಅನಿತಕರ ಘಟನೆಗಳು ಸಂಭವಿಸಿರುವ ಅನೇಕ ವರದಿಗಳಿವೆ. ರಸ್ತೆಯಲ್ಲಿ ತಮ್ಮಷ್ಟಕ್ಕೆ ನಡೆದುಕೊಂಡು ಹೋಗುವವರಿಗೂ ಭಾರೀ ತೊಂದರೆಯಾಗುತ್ತದೆ. ಹಾಗಾಗಿ ಆದೇಶ ಮೀರಿ ಯಾರಾದರೂ ಬೀದಿಯಲ್ಲಿ ನಾಯಿಗಳಿಗೆ ಆಹಾರ ಕೊಡುವುದು ಪತ್ತೆಯಾದರೆ, ಅಂತಹವರ ವಿರುದ್ಧ ಸಂಬಂಧಿತ ಕಾನೂನು ಚೌಕಟ್ಟಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪೀಠ ಹೇಳಿದೆ.
ಅಂತಹ ಘಟನೆಗಳು ಕಂಡುಬಂದಲ್ಲಿ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆ ಸ್ಥಾಪಿಸಲೂ ಸೂಚಿಸಿದೆ.
ಶ್ವಾನ ಪ್ರಿಯರೇ, ನಾಯಿಗಾಗಿ ಠೇವಣಿ ಇಡಿ: ಸುಪ್ರೀಂ ಆದೇಶ
‘ಬೀದಿ ನಾಯಿಗಳ ವಿಚಾರದಲ್ಲಿ ಕೋರ್ಟ್ ಬಾಗಿಲು ತಟ್ಟಿದ್ದ ಎಲ್ಲಾ ಶ್ವಾನಪ್ರಿಯರು ಮತ್ತು ನಾಯಿಗಳ ಬಗ್ಗೆ ಕಾಳಜಿ ಹೊಂದಿರುವ ಎನ್‌ಜಿಒಗಳು ಕ್ರಮವಾಗಿ 25,000 ರು. ಮತ್ತು 2 ಲಕ್ಷ ರು. ಠೇವಣಿ ಇಡಬೇಕು. ಆ ಮೊತ್ತವನ್ನು ನಾಯಿಗಳಿಗಾಗಿ ಮೂಲಸೌಕರ್ಯ ನಿರ್ಮಾಣಕ್ಕೆ ಬಳಸಲಾಗುವುದು. ಹಣ ಜಮೆ ಮಾಡದೇ ಇದ್ದರೆ ಈ ವಿಷಯದಲ್ಲಿ ವಾದಿಸುವ ಯಾವುದೇ ಅಧಿಕಾರ ಇರುವುದಿಲ್ಲ’ ಎಂದು ತ್ರಿಸದಸ್ಯ ಪೀಠ ಸ್ಪಷ್ಟವಾಗಿ ಹೇಳಿತು.
ಪ್ರಾಣಿ ಪ್ರಿಯರು ಇಚ್ಛಿಸಿದರೆ ಬೀದಿನಾಯಿಗಳನ್ನು ದತ್ತು ಪಡೆಯಬಹುದು ಎಂದ ಕೋರ್ಟ್, ‘ಅಂತಹವರು ಸಂಬಂಧಪಟ್ಟ ಸ್ಥಳೀಯ ಆಡಳಿತಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಒಮ್ಮೆ ದತ್ತು ಪಡೆದ ನಾಯಿಗಳು ಬೀದಿಗಳಿಗೆ ಹಿಂತಿರುಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾ’ ಎಂದು ಹೇಳಿತು.
‘ನಮ್ಮಆದೇಶದಂತೆ, ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಯಾರಾದರು ಅಡ್ಡಿ ಮಾಡಿದಲ್ಲಿ, ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದೂ ಪೀಠ ಎಚ್ಚರಿಸಿತು.
ಬೀದಿನಾಯಿಗೆ ಸಂಬಂಧಿಸಿದ ದೇಶದ ಎಲ್ಲ ಕೇಸು ಸುಪ್ರೀಂಗೆ
ನವದೆಹಲಿ : ಬೀದಿನಾಯಿಗಳ ಸಮಸ್ಯೆ ಪ್ರಕರಣಗಳನ್ನು ಇಡೀ ದೇಶಕ್ಕೆ ಅನ್ವಯವಾಗುವಂತೆ ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಈ ಮೂಲಕ, ಸಮಸ್ಯೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಅನ್ವಯಿಸುವಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.
ಬೀದಿ ನಾಯಿಗಳು ಮತ್ತು ಅವುಗಳಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಹಾಗೂ ವಿಚಾರಣೆ ಬಾಕಿ ಇರುವ ದೂರುಗಳನ್ನು ಸುಪ್ರೀಂ ಕೋರ್ಟ್‌ಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಶುಕ್ರವಾರ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ