
ನವದೆಹಲಿ: ಸಂಸದೀಯ ಕಲಾಪದ ವೇಳೆ ಉತ್ತಮ ಪರಿಪಾಠಕ್ಕಾಗಿ ಹಿರಿಯ ಸದಸ್ಯರನ್ನು ನೋಡಿ ಕಲಿತುಕೊಳ್ಳಿ, ಸದನದಲ್ಲಿ ಸಂಸದೀಯ ನಿಯಮಗಳನ್ನು ಸರಿಯಾಗಿ ಪಾಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಸಂಸದರಿಗೆ ತಿಳಿ ಹೇಳಿದ್ದಾರೆ. ಈ ಮೂಲಕ ಸೋಮವಾರ ಲೋಕಸಭೆಯಲ್ಲಿ ಸದನ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದರು ಎಂಬ ಟೀಕೆಗೆ ಗುರಿಯಾದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಸಂಸತ್ ಕಲಾಪಕ್ಕೂ ಮುನ್ನ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮೊದಲ ಬಾರಿಗೆ ಕಾಂಗ್ರೆಸ್ಸೇತರ ನಾಯಕರೊಬ್ಬರು, ಅದರಲ್ಲೂ ಚಾಯ್‌ವಾಲಾ ಒಬ್ಬರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಕ್ಕೆ ವಿಪಕ್ಷಗಳು ಅಸಮಾಧಾನಗೊಂಡಿವೆ. ಗಾಂಧೀ ನೆಹರೂ ಕುಟುಂಬ ಕೇವಲ ಪ್ರಧಾನಿ ಹುದ್ದೆ ಏರುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿತು. ತಮ್ಮ ಕುಟುಂಬದಿಂದ ಹೊರತಾದವರಿಗೆ ಮಾನ್ಯತೆ ನೀಡಲು ನಿರಾಕರಿಸಿತು ಎಂದು ಟೀಕಿಸಿದರು.
ತನ್ನ ವಿರುದ್ಧವೇ ಕಿರುಚಿ ಕಿರುಚಿ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷದವರಿಗೆ ನೀರು ಕೊಟ್ಟ ಪ್ರಧಾನಿ: ವೀಡಿಯೋ ವೈರಲ್
ಇದೇ ವೇಳೆ, ನಿಮ್ಮ ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದನ್ನು ಸದನದಲ್ಲಿ ಪ್ರಸ್ತಾಪಿಸಿ. ನಿಯಮಿತವಾಗಿ ಕಲಾಪಕ್ಕೆ ಹಾಜರಾಗಿ. ಯಾವುದೇ ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ಮುನ್ನ ಆ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಿ. ನಿಮ್ಮ ನಿಮ್ಮ ಕ್ಷೇತ್ರದ ಮತದಾರರ ಜೊತೆಗೆ ನಿರಂತರಾಗಿ ಸಂಪರ್ಕ ಇಟ್ಟುಕೊಳ್ಳಿ, ನಿಮ್ಮನ್ನು ಗೆಲ್ಲಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಿ ಎಂದು ಮೋದಿ ಸಂಸದರಿಗೆ ಸಲಹೆ ನೀಡಿದರು ಎಂದು ಸಭೆಯ ಬಳಿಕ ಸಂಸದೀಯ ಖಾತೆ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದರು.
ಈ ನಡುವೆ ಪ್ರಧಾನಿ ಮೋದಿ ಸಭೆಯಲ್ಲಿ ರಾಹುಲ್ ಗಾಂಧಿ ಬಗ್ಗೆ ನೇರವಾಗಿ ಪ್ರಸ್ತಾಪ ಮಾಡಿದರೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಅವರ ಯಾರು ಹೆಸರನ್ನೂ ನೇರವಾಗಿ ಪ್ರಸ್ತಾಪ ಮಾಡಲಿಲ್ಲ. ಆದರೆ ದೇಶದ ಪ್ರದಾನಿ ಮಾತನಾಡಿದರೆ ಆ ಸಂದೇಶ ಎಲ್ಲರಿಗೂ ಅನ್ವಯವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ರಾಹುಲ್‌ಗೆ ಟಾಂಗ್ ನೀಡಿದರು ಎಂಬುದನ್ನು ಸೂಚ್ಯವಾಗಿ ಹೇಳಿದರು.
ಕಾಂಗ್ರೆಸ್ ಗೆದ್ದಿದ್ದು 543ಕ್ಕೆ 99 ವರ್ತನೆ ಮಾತ್ರ 100 ಕ್ಕೆ 99 ಗೆದ್ದಂತೆ: ರಾಹುಲ್ ಬಗ್ಗೆ ಮೋದಿ ವ್ಯಂಗ್ಯ
ನೀಟ್ ಚರ್ಚೆಗೆ ಅವಕಾಶ ಕೊಡಿ: ಮೋದಿಗೆ ರಾಗಾ ಆಗ್ರಹ
ನವದೆಹಲಿ: ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆ ನೀಟ್ ಕುರಿತು ಚರ್ಚಿಸಲು ಬುಧವಾರ ಲೋಕಸಭೆಯಲ್ಲಿ ಅವಕಾಶ ಕೊಡಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ‘ದೇಶದ 24 ಲಕ್ಷ ನೀಟ್ ಆಕಾಂಕ್ಷಿಗಳ ಒಳಿತೇ ನಮ್ಮ ಕಾಳಜಿಯಾಗಿದೆ. ಕಳೆದ 7 ವರ್ಷಗಳಲ್ಲಿ 70 ಬಾರಿ ಪ್ರಶ್ನೆಪತ್ರಿಕೆ ಸೊರಿಕೆಯಾಗಿದ್ದು 2 ಕೋಟಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈಕುರಿತು ಸಂಸತ್ತಿನಲ್ಲಿ ಚರ್ಚಿಸಿ ವಿದ್ಯಾರ್ಥಿಗಳಿಗೆ ಉತ್ತರ ನೀಡಿ ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದು, ನೀವೇ ಇದರ ಮುಂದಾಳತ್ವ ವಹಿಸಿ ಎದು ಪ್ರಧಾನಿಗೆ ಆಗ್ರಹ ಮಾಡಿದ್ದಾರೆ. ಈ ಮುನ್ನ ಜೂ.28 ಹಾಗೂ ಸೋಮವಾರ ವಿಪಕ್ಷಗಳ ಮನವಿಯನ್ನು ಸಭಾಧ್ಯಕ್ಷರು ತಳ್ಳಿಹಾಕಿದ್ದು, ಸರ್ಕಾರದೊಂದಿಗೆ ಈ ಕುರಿತು ಚರ್ಚಿಸುವುದಾಗಿ ಭರವಸೆಯಿತ್ತಿದ್ದರು. ಅದರ ಬೆನ್ನಲ್ಲೇ ಮೋದಿಗೆ ರಾಹುಲ್ ಪತ್ರ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ