ಜಮ್ಮು ಕಾಶ್ಮೀರದ ಒಂದು ಮೊಟ್ಟೆಯ ಕಥೆ, ಬರೋಬ್ಬರಿ 2.26 ಲಕ್ಷ ರೂಗೆ ಮಾರಾಟ!

By Suvarna NewsFirst Published Apr 16, 2024, 1:41 PM IST
Highlights

ಒಂದು ಮೊಟ್ಟೆಯ ಬೆಲೆ 2.26 ಲಕ್ಷ ರೂಪಾಯಿ? ಹೌದು, ಇದು ಸುಳ್ಳಲ್ಲ, ಒಂದು ಮೊಟ್ಟೆ ಮಾರಾಟವಾಗಿದ್ದು 2.26 ಲಕ್ಷ ರೂಪಾಯಿಗೆ. ಇದು ಜಮ್ಮು ಕಾಶ್ಮೀರದ ಬಾರಮುಲ್ಲಾದ ಸೋಪೋರ್ ಬಳಿ ಮಾರಾಟವಾದ ಮೊಟ್ಟೆ. ಇಷ್ಟು ದುಬಾರಿ ಮೊತ್ತಕ್ಕೆ ಮಾರಾಟವಾಗಲು ಈ ಮೊಟ್ಟೆಯಲ್ಲೇನಿದೆ? ಇಲ್ಲಿದೆ ವಿವರ
 

ಬಾರಮುಲ್ಲಾ(ಏ.16) ಒಂದೇ ಒಂದು ಮೊಟ್ಟೆಯ ಬೆಲೆ 2.26 ಲಕ್ಷ ರೂಪಾಯಿ. ಅಚ್ಚರಿಯಾದರೂ ಸತ್ಯ. ಜಮ್ಮು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಮಾರಾಟವಾದ ಈ ಮೊಟ್ಟೆ ಇದೀಗ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದೆ. ಅರೇ ಜಮ್ಮು ಕಾಶ್ಮೀರದಲ್ಲಿ ಮೊಟ್ಟೆ ಇಷ್ಟೊಂದು ದುಬಾರಿಯಾಗಿದೆಯಾ ಅನ್ನೋ ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ. ಆದರೆ ಈ ಮೊಟ್ಟಿಗೆ ಬೆಲೆ ಕಟ್ಟಿದ್ದು ದಾನಿಗಳು. ಮಸೀದಿ ನಿರ್ಮಾಣಕ್ಕಾಗಿ ದಾನಿಗಳು ನೀಡಿದ ವಸ್ತುಗಳನ್ನು ಹರಾಜು ಹಾಕಲಾಗಿತ್ತು. ಈ ಹರಾಜಿನಲ್ಲಿ ಒಂದು ಮೊಟ್ಟೆ ಬರೋಬ್ಬರಿ 2.26 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಇದು ಸೋಪೋರ್ ಬಳಿಯ ಮಲ್ಪೋರ್ ಗ್ರಾಮದ ಒಂದು ಮೊಟ್ಟೆಯ ಕಥೆ. ಮಲ್‌ಪೋರ್ ಮುಸ್ಲಿಂ ಪ್ರಾಬಲ್ಯದ ಪ್ರಾಂತ್ಯ. ಸೋಪೋರ್ ಬಳಿ ಮಸೀದಿಗಳು ಇವೆ. ಆದರೆ ಮಲ್‌ಪೋರ್‌ನಲ್ಲಿ ಮಸೀದಿ ಇಲ್ಲ. ಮುಸ್ಲಿಂ ಸಮುದಾಯ ಪ್ರಾರ್ಥನೆಗೆ ಸೋಪೋರ್‌ಗೆ ತೆರಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮಲ್‌ಪೋರ್‌ನಲ್ಲಿ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ನಿರ್ಧರಿಸಿದೆ. ಇದಕ್ಕಾಗಿ ಮಸೀದಿ ಸಮಿತಿ ದೇಣಿಗೆ ಸಂಗ್ರಹಿಸಲು ಮುಂದಾಗಿದೆ.

ಅಬ್ಬಬ್ಬಾ! ಬಂಜೆತನ ಗುಣಪಡಿಸುತ್ತೆಂದು ನಂಬಲಾದ 9 ನಿಂಬೆಹಣ್ಣುಗಳು 2.3 ಲಕ್ಷ ರೂ.ಗೆ ಹರಾಜು!

ಹಲವು ದಾನಿಗಳು ನಗದು ರೂಪದಲ್ಲಿ ನೆರವು ನೀಡಿದ್ದಾರೆ. ಆದರೆ ಎಲ್ಲರಿಗೂ ನಗದು ನೀಡಲು ಸಾಧ್ಯವಾಗಲ್ಲ. ಹೀಗಾಗಿ ಕುಟುಂಬಗಳು ತಮ್ಮ ಕೈಲಾದ ನೆರವು ನೀಡಿದೆ. ವಸ್ತುಗಳ ರೂಪದಲ್ಲಿ, ಶ್ರಮದಾನದ ರೂಪದಲ್ಲೂ ನೆರವು ನೀಡಿದ್ದಾರೆ. ಒರ್ವ ಮಹಿಳೆ ಒಂದು ಮೊಟ್ಟೆಯನ್ನು ದೇಣಿಗೆ ರೂಪದಲ್ಲಿ ಮಸೀದಿ ಸಮಿತಿಗೆ ನೀಡಿದ್ದಾರೆ.

ದಾನಿಗಳು ನೀಡಿದ ವಸ್ತುಗಳನ್ನು ಮಸೀದಿ ಸಮಿತಿ ಹರಾಜಿಗಿಟ್ಟಿತ್ತು. ದಿನಾಂಕ ಘೋಷಣೆ ಮಾಡಿತು. ಈ ವಸ್ತುಗಳ ಹರಾಜಿನಲ್ಲಿ ಬರವು ಹಣವನ್ನು ಮಸೀದಿ ನಿರ್ಮಾಣಕ್ಕೆ ಬಳಸಿಕೊಳ್ಳುವುದಾಗಿ ಘೋಷಿಸಿತು. ಹರಾಜಿನ ದಿನ ಅಚ್ಚರಿ ನಡೆದು ಹೋಗಿದೆ. ಹಲವು ವಸ್ತುಗಳು 10 ಪಟ್ಟು, 30 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾಗಿದೆ. ಇಧರ ನಡುವೆ ಮಹಿಳೆ ನೀಡಿದ ಒಂದು ಮೊಟ್ಟೆ ಊಹೆಗೂ ನಿಲುಕದ ಮೊತ್ತಕ್ಕೆ ಹರಾಜಾಗಿದೆ.

ಮೊಟ್ಟೆಯನ್ನು ಹರಾಜು ಕೂಗುತ್ತಿದ್ದಂತೆ ಸಾವಿರ ರೂಪಾಯಿಯಿಂದ ಹರಾಜು ಬೆಲೆ ಆರಂಭಗೊಂಡಿದೆ. ನೋಡ ನೋಡುತ್ತಿದ್ದಂತೆ ಲಕ್ಷ ರೂಪಾಯಿ ದಾಟಿದೆ. ಕೊನೆಗೆ 2.26 ಲಕ್ಷ ರೂಪಾಯಿಗೆ ಮೊಟ್ಟೆ ಹರಾಜಾಗಿದೆ.  ಉದ್ಯಮಿ ದಾನೀಶ್ ಅಹಮ್ಮದ್ ಈ ಮೊಟ್ಟೆ ಖರೀದಿಸಿದ್ದಾರೆ. ಅಂತಿಮವಾಗಿ ದಾನೀಶ್ ಅಹಮ್ಮದ್ 2,26,350 ರೂಪಾಯಿಗೆ ಹರಾಜಿನಲ್ಲಿ ಮೊಟ್ಟೆ ಖರೀದಿಸಿದ್ದಾರೆ.

ಬರೋಬ್ಬರಿ 35,000 ರೂಪಾಯಿಗೆ ಹರಾಜಾಯ್ತು ದೇವರ ಒಂದೇಒಂದು ನಿಂಬೆಹಣ್ಣು!

ಹರಾಜಿನ ಬಳಿಕ ಮಾತನಾಡಿದ ದಾನೀಶ್, ನಾನು ದುಬಾರಿ ಬೆಲೆಗೆ ಮೊಟ್ಟೆ ಖರೀದಿಸುವಷ್ಟು ಶ್ರೀಮಂತನಲ್ಲ. ಆದರೆ ಪವಿತ್ರ ಮಸೀದಿ ನಿರ್ಮಾಣಕ್ಕಾಗಿ ನಾನು ಈ ಮೊಟ್ಟೆ ಖರೀದಿಸಿದ್ದೇನೆ. ಪ್ರಾರ್ಥನೆಗಾಗಿ, ಸಮುದಾಯದ ಏಳಿಗೆಗಾಗಿ ಈ ಮೊಟ್ಟೆ ಖರೀದಿಸಲಾಗಿದೆ ಎಂದು ದಾನೀಶ್ ಅಹಮ್ಮದ್ ಹೇಳಿದ್ದಾರೆ. 

click me!