
ಸಾಮಾನ್ಯವಾಗಿ 59ನೇ ವಯಸ್ಸಿನಲ್ಲಿ ಬಹುತೇಕರು ವಿಶ್ರಾಂತಿಯ ಜೀವನದ ಬಗ್ಗೆ ಯೋಚಿಸುತ್ತಾರೆ. ಆದರೆ ಪಶ್ಚಿಮ ಬಂಗಾಳದ ಹೌರಾದ ಡಾಲಿ ರಾಣಾ ಮಾತ್ರ ಪ್ರತಿದಿನ ಬೆಳಗ್ಗೆ ಬಸ್ ಹತ್ತಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಾ, ನಿಲ್ದಾಣಗಳ ಹೆಸರನ್ನು ಕೂಗುತ್ತಾ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಪಾಲಿಗೆ ಇದು ಕೇವಲ ಉದ್ಯೋಗವಲ್ಲ. ಅಪ್ಪನ ಬಹುದಿನಗಳ ಕನಸನ್ನು ನನಸು ಮಾಡಲು ಆರಂಭಿಸಿದ ಪ್ರಯಾಣವನ್ನು ಮುಂದುವರಿಸುವ ಹೋರಾಟ. ಜೀವನದಲ್ಲಿ ಎದುರಾದ ಕಷ್ಟಗಳು, ಸಾಲದ ಹೊರೆ, ಕೊರೊನಾ ಸಂಕಷ್ಟ ಯಾವುದಕ್ಕೂ ಜಗ್ಗದೆ ಅವರು ತೋರಿದ ಧೈರ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಅಪ್ಪನ ಕನಸಿಗಾಗಿ ಸಾಲ ಮಾಡಿ ಬಸ್ ಖರೀದಿಸಿದ ಮಗಳು
ಡಾಲಿ ರಾಣಾ ಅವರ ತಂದೆಗೆ ಸ್ವಂತ ಬಸ್ ಖರೀದಿಸಿ ಸಾರಿಗೆ ಉದ್ಯಮ ಆರಂಭಿಸಬೇಕೆಂಬ ದೊಡ್ಡ ಆಸೆಯಿತ್ತು. ಆದರೆ ಅವರ ತಂದೆ ಬದುಕಿದ್ದಾಗ ಆ ಕನಸು ನನಸಾಗಲಿಲ್ಲ. ತಂದೆಯ ನಿಧನದ ಬಳಿಕ ಅವರ ಆಸೆಯನ್ನು ಈಡೇರಿಸಲು ಡಾಲಿ ನಿರ್ಧರಿಸಿದರು. 2017ರಲ್ಲಿ ಸಾಲ ಪಡೆದು ಸ್ವಂತ ಬಸ್ ಖರೀದಿಸಿದರು. ಆರಂಭದಲ್ಲಿ ಚಾಲಕ ಮತ್ತು ಕಂಡಕ್ಟರ್‌ಗಳನ್ನು ನೇಮಿಸಿ ತಾವೇ ಬಸ್ ವ್ಯವಹಾರವನ್ನು ನಿರ್ವಹಿಸುತ್ತಿದ್ದರು. ತಂದೆಯ ಕನಸನ್ನು ನನಸು ಮಾಡಿದ ಖುಷಿಯಿದ್ದರೂ, ಬಸ್ ನಿರ್ವಹಣೆ ಮತ್ತು ಸಾಲ ಮರುಪಾವತಿಯ ಜವಾಬ್ದಾರಿಯೂ ಅವರ ಮೇಲಿತ್ತು.
ಆದರೆ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ಕೊರೊನಾ ಸಾಂಕ್ರಾಮಿಕ ಸಾರಿಗೆ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿತು. ಪ್ರಯಾಣಿಕರ ಸಂಖ್ಯೆ ಕುಸಿದು ಆದಾಯ ಕಡಿಮೆಯಾಯಿತು. ಇದರ ನಡುವೆ 2021ರಲ್ಲಿ ಬಸ್‌ನ ಕಂಡಕ್ಟರ್ ಕೆಲಸ ಬಿಟ್ಟರು. ನಷ್ಟ ಹೆಚ್ಚಾಗುತ್ತಿದ್ದಂತೆ ಬಸ್ ವ್ಯವಹಾರವನ್ನು ಮುಂದುವರಿಸುವುದೇ ಕಷ್ಟವಾಯಿತು.
54ನೇ ವಯಸ್ಸಿನಲ್ಲಿ ತಾವೇ ಕಂಡಕ್ಟರ್ ಆದರು!
ಈ ಸಂದರ್ಭದಲ್ಲಿ ಡಾಲಿ ರಾಣಾ ಅವರ ಮುಂದೆ ಎರಡು ಆಯ್ಕೆಗಳಿದ್ದವು. ಬಸ್ ವ್ಯವಹಾರವನ್ನು ನಿಲ್ಲಿಸುವುದು ಅಥವಾ ತಾವೇ ಕಂಡಕ್ಟರ್ ಆಗಿ ಕೆಲಸ ಆರಂಭಿಸಿ ಬಸ್ ಉಳಿಸಿಕೊಳ್ಳುವುದು. ಅವರು ಎರಡನೇ ಆಯ್ಕೆಯನ್ನು ಆರಿಸಿಕೊಂಡರು. 54ನೇ ವಯಸ್ಸಿನಲ್ಲಿ ಬಸ್ ಹತ್ತಿ ಕಂಡಕ್ಟರ್ ಕೆಲಸ ಆರಂಭಿಸಿದರು. ಆರಂಭದಲ್ಲಿ ಅವರ ಬಳಿ ಕಂಡಕ್ಟರ್ ಬ್ಯಾಗ್ ಕೂಡ ಇರಲಿಲ್ಲ.
ಪ್ರತಿದಿನ ಜನದಟ್ಟಣೆಯ ಬಸ್‌ನಲ್ಲಿ ನಿಂತು ಟಿಕೆಟ್ ನೀಡುವುದು, ಪ್ರಯಾಣಿಕರಿಂದ ಹಣ ಪಡೆಯುವುದು, ಬಸ್ ಹತ್ತಿ ಇಳಿಯುವುದು, ಪ್ರಯಾಣಿಕರ ಸಮಸ್ಯೆಗಳನ್ನು ನಿಭಾಯಿಸುವುದು ಹೀಗೆ ಹಲವು ಕೆಲಸಗಳನ್ನು ಅವರು ಮಾಡಬೇಕಾಯಿತು. ಪುರುಷರ ಪ್ರಾಬಲ್ಯವಿರುವ ಈ ವೃತ್ತಿಯಲ್ಲಿ ಮಹಿಳೆಯಾಗಿ ಕೆಲಸ ಮಾಡುವುದು ಸುಲಭವಾಗಿರಲಿಲ್ಲ.
ಕೆಲವರು ಮಹಿಳೆಯರು ದುರ್ಬಲರು ಎಂಬ ಮನೋಭಾವದಿಂದ ತಮ್ಮನ್ನು ಪ್ರಶ್ನಿಸುತ್ತಿದ್ದರು. ಕೆಲವೊಮ್ಮೆ ಕಿರುಕುಳವನ್ನೂ ಎದುರಿಸಬೇಕಾಯಿತು ಎಂದು ಡಾಲಿ ರಾಣಾ ಹೇಳಿದ್ದಾರೆ. ಆದರೂ ಅವರು ತಮ್ಮ ಕೆಲಸವನ್ನು ನಿಲ್ಲಿಸಲಿಲ್ಲ. ಹೌರಾದ ಬೆಲ್ಗಾಚಿಯಾ ಮತ್ತು ಹೌರಾ ನಡುವೆ ಸಂಚರಿಸುವ 57ನೇ ನಂಬರ್ ಬಸ್‌ನಲ್ಲಿ ಅವರು ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿನ ಪ್ರಯಾಣಿಕರು ಅವರನ್ನು ಪ್ರೀತಿಯಿಂದ 'ಡಾಲಿ ದೀದಿ' ಎಂದು ಕರೆಯುತ್ತಾರೆ.
ಬಸ್ ಉಳಿಸಿಕೊಳ್ಳಲು ಎದುರಾದ ಸವಾಲುಗಳು ಒಂದೆರಡಲ್ಲ!
ಸ್ವಂತ ಬಸ್ ಹೊಂದಿದ್ದರೂ ಡಾಲಿ ರಾಣಾ ಅವರ ಬದುಕು ಸುಲಭವಾಗಿರಲಿಲ್ಲ. ಬಸ್‌ನ ನಿರ್ವಹಣೆ, ದುರಸ್ತಿ ವೆಚ್ಚ, ಸಾಲದ ಕಂತುಗಳು ಹೀಗೆ ಆರ್ಥಿಕ ಒತ್ತಡ ಹೆಚ್ಚುತ್ತಲೇ ಹೋಯಿತು. ಇದರ ಜೊತೆಗೆ ಕೆಲವು ಮಾರ್ಗಗಳಲ್ಲಿ ಇ-ರಿಕ್ಷಾಗಳ ಸಂಖ್ಯೆ ಹೆಚ್ಚಾದ ಕಾರಣ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕಡಿಮೆಯಾಯಿತು. ಇದರಿಂದ ಆದಾಯಕ್ಕೆ ಮತ್ತಷ್ಟು ಹೊಡೆತ ಬಿತ್ತು. ಆದರೆ ಬಸ್ ಮಾರಾಟ ಮಾಡಿ ಅಥವಾ ವ್ಯವಹಾರ ನಿಲ್ಲಿಸಿ ಹಿಂದೆ ಸರಿಯಲು ಅವರು ಸಿದ್ಧರಿರಲಿಲ್ಲ. ಏಕೆಂದರೆ ಆ ಬಸ್ ಅವರಿಗೆ ಕೇವಲ ಆದಾಯದ ಮೂಲವಾಗಿರಲಿಲ್ಲ. ಅದು ತಂದೆಯ ಕನಸಿನ ಸಂಕೇತವಾಗಿತ್ತು. ಹೀಗಾಗಿ ವ್ಯವಹಾರವನ್ನು ಉಳಿಸಿಕೊಳ್ಳಲು ಹೊಸ ಮಾರ್ಗದ ಪರವಾನಗಿ ಪಡೆಯಲು ಪ್ರಯತ್ನಿಸಿದರು.
ವೈರಲ್ ಆದ ಕಥೆ, ನೆರವಿಗೆ ಬಂದ ಸಾರಿಗೆ ಇಲಾಖೆ!
ವರದಿಯ ಪ್ರಕಾರ, ರಾಜ್ಯದ ಸಾರಿಗೆ ಕಾರ್ಯದರ್ಶಿಯೇ ಡಾಲಿ ರಾಣಾ ಅವರನ್ನು ಸಂಪರ್ಕಿಸಿ, ಅವರು ಕೇಳಿದ್ದ ಹೊಸ ಮಾರ್ಗದ ಪರವಾನಗಿಗೆ ಅನುಮೋದನೆ ದೊರೆತಿರುವುದಾಗಿ ತಿಳಿಸಿದರು. ಈ ಹೊಸ ಮಾರ್ಗದಿಂದ ಇ-ರಿಕ್ಷಾಗಳ ಸ್ಪರ್ಧೆ ಕಡಿಮೆಯಾಗುವ ಸಾಧ್ಯತೆಯಿದ್ದು, ಬಸ್ ವ್ಯವಹಾರವನ್ನು ಮುಂದುವರಿಸಲು ನೆರವಾಗಲಿದೆ ಎಂಬ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ