Emergency Landing ಯುಎಇ-ಬೆಂಗಳೂರು ವಿಮಾನದಲ್ಲಿ ಕುಡುಕ ಪ್ರಯಾಣಿಕನ ಗಲಾಟೆ, ಮುಂಬೈನಲ್ಲಿ ತುರ್ತು ಭೂಸ್ಪರ್ಶ!

Published : May 16, 2022, 07:55 PM IST
Emergency Landing  ಯುಎಇ-ಬೆಂಗಳೂರು ವಿಮಾನದಲ್ಲಿ ಕುಡುಕ ಪ್ರಯಾಣಿಕನ ಗಲಾಟೆ, ಮುಂಬೈನಲ್ಲಿ ತುರ್ತು ಭೂಸ್ಪರ್ಶ!

ಸಾರಾಂಶ

ದೋಹಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ವಿಮಾನ ಕೇರಳ ಮೂಲದ ಪ್ರಯಾಣಿಕನ ಅವಾಂತರ, ಪೊಲೀಸ್ ವಶಕ್ಕೆ ಅನಿವಾರ್ಯವಾಗಿ ಮುಂಬೈನಲ್ಲಿ ವಿಮಾನ ಭೂಸ್ಪರ್ಶ

ಮುಂಬೈ(ಮೇ.16): ಒಂದು ಪೆಗ್ ಹೇಳಿ ಮಿತಿ ಮೀರಿದೆ. ಮಾತು ಜೋರಾಗಿದೆ, ಪಿತ್ತ ನೆತ್ತಿಗೇರಿದೆ. ಗಗನ ಸಖಿಯರು ಮತ್ತೆ ಕುಡಿಯದಂತೆ ಆಜ್ಞಾಪಿಸಿದ್ದಾರೆ. ಸಹ ಪ್ರಯಾಣಿಕರ ಮೇಲೂ ರೇಗಾಟ. ಕೊನೆಗೆ ಕುಡುಕ ಪ್ರಯಾಣಿಕನ ಅಬ್ಬರ ಹೆಚ್ಚಾದಂತೆ ದೋಹಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಅಂತಾರಾಷ್ಟ್ರೀಯ ವಿಮಾನವನ್ನು ಮುಂಬೈನಲ್ಲಿ ತುರ್ತು ಭೂಸ್ವರ್ಶ ಮಾಡಬೇಕಾಗಿ ಬಂದಿದೆ.

ಶನಿವಾರ ರಾತ್ರಿ ದೋಹಾದಿಂದ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಕೇರಳ ಮೂಲದ ಪ್ರಯಾಣಿಕ ಸರ್ಫರುದ್ದೀನ್ ಉಲ್ವಾರ್ ಕಂಠಪೂರ್ತಿ ಕುಡಿದಿದ್ದಾನೆ. ಕುಡಿದು ಸುಮ್ಮನಿದ್ದರೆ ಬೆಂಗಳೂರು ತಲುಪುವುದೇ ಗೊತ್ತಾಗುತ್ತಿರಲಿಲ್ಲ. ಆದರೆ ಸರ್ಫರುದ್ದೀನ್ ಒಳಗೆ ಸೇರಿರುವ ನಶೆ ಕೇಳಬೇಕಲ್ಲ. ಶುರುವಾಗಿದೆ ರಂಪಾಟ. ಆರಂಭದಲ್ಲಿ ಗಗನಸಖಿಯರೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. 

ನಡು ಆಗಸದಲ್ಲಿ ಅಸ್ವಸ್ಥಗೊಂಡ ಪೈಲಟ್‌: ವಿಮಾನ ಕೆಳಗಿಳಿಸಿದ ಸಾಮಾನ್ಯ ಪ್ರಯಾಣಿಕ

ಸರ್ಫರುದ್ದೀನ್ ಅಬ್ಬರ ಹೆಚ್ಚಾಗುತ್ತಿದ್ದಂತೆ ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಗನಸಖಿಯರು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಇದ್ಯಾವುದನ್ನು ಕೇಳುವ ಪರಿಸ್ಥಿತಿಯಲ್ಲಿ ಸರ್ಫರುದ್ದೀನ್ ಇರಲಿಲ್ಲ.ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕ್ಯಾಪ್ಟನ್ ಬೆಂಗಳೂರಿನಲ್ಲಿ ಇಳಿಯಬೇಕಾದ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಲಾಗಿದೆ. 

ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗುತ್ತಿದ್ದಂತೆ ಪೊಲೀಸರು ಸರ್ಫರುದ್ದೀನ್ ವಶಕ್ಕೆ ಪಡೆದಿದ್ದಾರೆ. ಭಾರತೀಯ ಏರ್‌ಕ್ರಾಫ್ಟ್ ದಂಡ ಸಂಹಿತ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣ ಪೊಲೀಸರು ಭಾನುವಾರ ಸರ್ಫರುದ್ದೀನ್ ಉಲ್ವಾರನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಯಾಣಿಕೆಗೆ ಆರೋಗ್ಯ ಸಮಸ್ಯೆ: ವಿಮಾನ ತುರ್ತು ಭೂ ಸ್ಪರ್ಶ
ಕಣ್ಣೂರಿನಿಂದ ಶಾರ್ಜಾಕ್ಕೆ ಪ್ರಯಾಣಿಸುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಪ್ರಯಾಣಿಕೆಗೆ ಹೃದಯದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಿದ ಘಟನೆ ಶನಿವಾರ ನಡದಿದೆ. ಕಣ್ಣೂರಿನ 33ರ ಹರೆಯದ ಮೂರು ಮಕ್ಕಳ ತಾಯಿ ತನ್ನ ಮಕ್ಕಳು, ಪತಿಯಿಂದಿಗೆ ಶಾರ್ಜಾಕ್ಕೆ ಪ್ರಯಾಣಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ 9.20ರ ವೇಳೆ ಪ್ರಯಾಣದ ಮಧ್ಯೆ ಆಕೆಗೆ ಹೃದಯದ ತೊಂದರೆ ಕಾಣಿಸಿಕೊಂಡಿತು. ತಕ್ಷಣವೇ ಏರ್‌ಪೋರ್ಟ್‌ ಸಂಪರ್ಕಿಸಿದ ವಿಮಾನದ ಸಿಬ್ಬಂದಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಅನುಮತಿ ಪಡೆದುಕೊಂಡರು. ಮಹಿಳೆಯನ್ನು ಕುಟುಂಬ ಸಹಿತವಾಗಿ ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಿ ಪರಿಶೀಲನೆ ನಡೆಸಲಾಯಿತು. ಅಗತ್ಯವಾದ ಶುಶ್ರೂಷೆ ನೀಡಿ, ಆಕೆ ಮತ್ತೆ ಪ್ರಯಾಣ ಮುಂದುವರಿಸಬಹುದು ಎಂದು ವೈದ್ಯರು ದೃಢಪಡಿಸಿದ ಬಳಿಕ ಮತ್ತೆ ಶಾರ್ಜಾಕ್ಕೆ ಪಯಣಿಸುವುದಕ್ಕೆ ಅನುವು ಮಾಡಿಕೊಡಲಾಯಿತು.

ಒಟ್ಟಿಗೆ ವಿಮಾನ ಹಾರಿಸಿದ ಅಮ್ಮ ಮಗ ಪೈಲಟ್‌ ಜೋಡಿ : ವಿಡಿಯೋ ವೈರಲ್‌

ಅಗತ್ಯವಿರುವ ಕೋವಿಡ್‌ ಪರೀಕ್ಷೆ ಮತ್ತಿತರ ಪ್ರಕ್ರಿಯೆಗೊಳಪಟ್ಟಬಳಿಕ ರಾತ್ರಿ 11ರ ವಿಮಾನದಲ್ಲಿ ಮಹಿಳೆ ಕುಟುಂಬ ಸಹಿತ ಶಾರ್ಜಾಕ್ಕೆ ತೆರಳಿದರು.

ಕೊಚ್ಚಿಗೆ ತೆರಳುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ
ಪ್ರತಿಕೂಲ ಹವಾಮಾನದಿಂದಾಗಿ ಕೊಚ್ಚಿಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್‌ವೊಂದು ಚಾಮರಾಜನಗರ ಗಡಿ ಸತ್ಯಮಂಗಲಂನ ಕಡಂಬೂರ್‌ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸಿಎಸ್‌ ಏವಿಯೇಷನ್‌ ಎಂಬ ಕಂಪನಿಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ಭರತ್‌, ಶೀಲಾ ಭರತ್‌, ಹೆಲಿಕಾಪ್ಟರ್‌ ಎಂಜಿನಿಯರ್‌ ಅಂಕಿತ್‌ ಸಿಂಗ್‌, ಪೈಲಟ್‌- ಜಸ್ಪಾಲ್‌ ಎಂಬವರಿದ್ದರು. ಬೆಂಗಳೂರಿನಿಂದ ಕೊಚ್ಚಿ ಆಸ್ಪತ್ರೆವೊಂದಕ್ಕೆ ತೆರಳುವಾಗ ಪ್ರತಿಕೂಲ ಹವಾಮಾನದಿಂದಾಗಿ ಕಡಂಬೂರಿನ ಜಮೀನೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಹೆಲಿಕಾಪ್ಟರ್‌ ಇಳಿದಿದ್ದೇ ತಡ ಆತಂಕದಿಂದ ಸುತ್ತಮುತ್ತಲಿನ ರೈತರು ದೌಡಾಯಿಸಿ ಹೆಲಿಕಾಪ್ಟರ್‌ ಸುತ್ತ ಮುತ್ತಿಕೊಂಡ ಪ್ರಸಂಗವೂ ನಡೆಯಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್