ಇದು ಕೊನೆಯ ಗುಡ್ ಮಾರ್ನಿಂಗ್; ಮನಕಲುಕುತ್ತಿದೆ ಕೊರೋನಾಗೆ ಬಲಿಯಾದ ವೈದ್ಯೆಯ ಪೋಸ್ಟ್!

By Suvarna NewsFirst Published Apr 21, 2021, 8:05 PM IST
Highlights

ಕೊರೋನಾ ಸೋಂಕಿತರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಕೊರೋನಾಗೆ ಬಲಿಯಾದವರು ಸೇರಿದಂತೆ ಕೊರೋನಾ ಕಾರಣ ಒಬ್ಬೊಬ್ಬರ ಕಣ್ಣೀರ ಕತೆ ಮನಕಲುಕುವಂತಿದೆ. ಹೀಗೆ ಸೋಂಕಿಗೆ ಗುರಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯೆಯ ಕೊನೆಯ ಗುಡ್‌ಮಾರ್ನಿಂಗ್ ಕಣ್ಣೀರ ಕತೆ ಇಲ್ಲಿದೆ.

ಮುಂಬೈ(ಏ.21): ಆಕೆ 51 ವರ್ಷದ ವೈದ್ಯೆ ಮನೀಶಾ ಜಾಧವ್ ಮುಂಬೈನ ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಮುಖ್ಯ ವೈಧ್ಯಾಧಿಕಾರಿ. ಕೊರೋನಾ ಸೋಂಕು ತಗುಲಿದ ಕಾರಣ ಹರಸಾಹಸ ಪಟ್ಟು ಆಸ್ಪತ್ರೆ ಸೇರಿಕೊಂಡಿದ್ದಾರೆ. ಬೆಡ್‌ಗಳಿಲ್ಲದ, ಆಕ್ಸಿಜನ್ ಕೊರತೆಯ ನಡುವೆ ಮನೀಶಾ ಜಾಧವ್‌ಗೆ ಆಸ್ಪತ್ರೆ ದಾಖಲಾಗಿದ್ದಾರೆ. ಆದರೆ ಕರೋನಾ ಮಹಾಮಾರಿ ವೈದ್ಯಯನ್ನು ಬಲಿತೆಗೆದುಕೊಂಡಿದೆ. ಸಾವಿಗೂ ಮೊದಲು ವೈದ್ಯೆ ಹಾಕಿದ ಪೋಸ್ಟ್ ಇದೀಗ ಎಲ್ಲರ ಕಣ್ಣೀರಿಗೆ ಕಾರಣವಾಗುತ್ತಿದೆ.

ವೆಂಟಿಲೇಟರ್ ಕೊರತೆ, ಬೆಡ್ ಸಿಗ್ತಿಲ್ಲ, ಸ್ಮಶಾನದಲ್ಲಿ ಕ್ಯೂ; ಎಲ್ಲಿಗೆ ಬಂತು ಕೊರೊನಾ ಆರ್ಭಟ

ಕೊರೋನಾ ಅದೆಷ್ಟೆರ ಮಟ್ಟಿಗೆ ಭೀಕರವಾಗಿದೆ ಅನ್ನೋದಕ್ಕೆ ಈ ವೈದ್ಯೆ ಮನೀಶಾ ಜಾಧವ್ ಪ್ರಕರಣವೇ ಸಾಕ್ಷಿ..ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಮನೀಶಾ ಜಾಧವ್ ಆರೋಗ್ಯ ಕ್ಷೀಣಿಸಿದೆ. ಇತ್ತ ಬೆಳಗ್ಗೆ ಮನೀಶಾ ಜಾಧವ್ ಫೇಸ್‌ಬುಕ್ ಪೋಸ್ಟ್ ಒಂದನ್ನೂ ಹಾಕಿದ್ದರು. ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಎಂದೆನಿಸುತ್ತಿದೆ. ನನಗೆ ಈ ತಾಣದ ಮೂಲಕ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ ಅನ್ನೋ ಭರವಸೆ ಇಲ್ಲ. ಎಲ್ಲರು ಸುರಕ್ಷಿತವಾಗಿರಿ. ದೇಹ ಸಾಯುತ್ತೆ. ಆದರೆ ಆತ್ಮ ಸಾಯಲ್ಲ. ಆತ್ಮ ಅಮರ ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಮಾಡಿದ 36 ಗಂಟೆಗಳ ಬಳಿಕ ವೈದ್ಯೆ ಮನೀಶಾ ಜಾಧವ್ ಕೊರೋನಾಗೆ ಬಲಿಯಾಗಿದ್ದಾರೆ. ಇದೀಗ ಮನೀಶಾ ಜಾಧವ್ ಸಾವು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕೊರೋನಾ ಇಲ್ಲ ಎಂದು ತಿರುಗಾಡುತ್ತಿರುವವರಿಗೆ ಇದು ಎಚ್ಚರಿಕೆ ಕರೆಗಂಟೆ ಎಂದು ಹಲವರು ಪೋಸ್ಟ್ ಮಾಡಿದ್ದಾರೆ. 

ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ. ಸುಮಾರು 18,000 ವೈದ್ಯರಲ್ಲಿ ಕೊರೋನಾ ಸೋಂಕು ಕಾಣಸಿಕೊಂಡಿದೆ. ಇನ್ನು 168 ವೈದ್ಯರು ಕೊರೋನಾಗೆ ಬಲಿಯಾಗಿದ್ದಾರೆ. 

ಮುಂಬೈನಲ್ಲಿಂದು 7,214 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. 35 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.  ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಒಂದೇ ದಿನ 67,468 ಕೊರೋನಾ ಕೇಸ್ ಪತ್ತೆಯಾಗಿದೆ. ಇನ್ನು 568 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 

click me!