
ನವದೆಹಲಿ: ಭಾರತದಲ್ಲಿ ಅತ್ಯಾಚಾರ ಸೇರಿದಂತೆ ನಾನಾ ಆರೋಪಗಳನ್ನು ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಬಿಡದಿಯ ವಿವಾದಾತ್ಮಕ ದೇವಮಾನವ ನಿತ್ಯಾನಂದ, ಕೈಲಾಸ ದೇಶದ ಇ-ಪೌರತ್ವ ಹಾಗೂ ಇ-ವೀಸಾಗೆ ಅರ್ಜಿ ಆಹ್ವಾನಿಸಿದ್ದಾನಂತೆ. ಹೌದು, ಈ ಕುರಿತು ಟ್ವೀಟ್ ಮಾಡಿರುವ ಆತ ತನ್ನದೇ ಆದ ದೇಶದಲ್ಲಿ ವಿವಿಧ ಸವಲತ್ತುಗಳನ್ನು ನೀಡಲಾಗುತ್ತದೆ ಎಂದು ಆಹ್ವಾನವನ್ನೂ ನೀಡಿದ್ದಾನೆ ಎಂದು ಸುದ್ದಿಯಾಗಿದೆ. ಕೈಲಾಸ ದೇಶ ಎಲ್ಲಿದೆ ಎಂಬುದು ನಿಗೂಢವಾಗಿದ್ದು ಈಕ್ವೆಡಾರ್ ಬಳಿ ಇರಬಹುದು ಎನ್ನಲಾಗಿದೆ. kailasa.org/e-citizen ಎಂಬ ವೆಬ್‌ಸೈಟ್‌ನಲ್ಲಿ ಆತ ಇ-ಪೌರತ್ವ ಹಾಗೂ ಇ-ವೀಸಾಗೆ ಆಹ್ವಾನಿಸಿದ ವಿವರಗಳಿವೆ.
ವಿಶೇಷ ಸವಲತ್ತುಗಳು ಸಿಗುತ್ತವಂತೆ
ಅಂದ ಹಾಗೆ ಇ-ಪೌರತ್ವ (E-citizenship) ಪಡೆದವರಿಗೆ ನಿತ್ಯಾನಂದನ (Nithyananda) ದೇಶದಲ್ಲಿ ವಿಶೇಷ ಸವಲತ್ತುಗಳು ಸಿಗುತ್ತವಂತೆ! ಹಾಗಂತ ಆತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾನೆ. ವಿಶೇಷ ಹೋಮ ಹಾಗೂ ಅಧ್ಯಾತ್ಮಿಕ ಸೇವೆಗಳು, ನಿತ್ಯಾನಂದನ ವಿಶೇಷ ದರ್ಶನ (Special Darshan) ಹಾಗೂ ಆಶೀರ್ವಾದ, ದೇಶದಲ್ಲಿ ಸಂಸ್ಕೃತ ಮಂತ್ರಗಳ ಕಲಿಕಾ ಸೌಲಭ್ಯ, ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಳ್ಳಲು ಪೂರಕ ವಾತಾವರಣ- ಇತ್ಯಾದಿಗಳು ಕೈಲಾಸ ದೇಶದಲ್ಲಿ ದೊರಕುತ್ತವಂತೆ. ಇತ್ತೀಚೆಗೆ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ನಿತ್ಯಾನಂದನ ಭಕ್ತರು ಎಂದು ಹೇಳಿಕೊಂಡ ಕೆಲವರು ಭಾಗವಹಿಸಿದ್ದರು. ಆಗ ತನ್ನ ಕೈಲಾಸ ದೇಶಕ್ಕೆ ಮಾನ್ಯತೆ ಸಿಕ್ಕಿದೆ ಎಂಬರ್ಥದಲ್ಲಿ ನಿತ್ಯಾನಂದ ಟ್ವೀಟ್ ಮಾಡಿದ್ದ. ಬಳಿಕ ಈತನ ಹೇಳಿಕೆಗಳನ್ನು ವಿಶ್ವಸಂಸ್ಥೆ ಸುಳ್ಳು ಎಂದು ತಳ್ಳಿಹಾಕಿತ್ತು.
ನಿತ್ಯಾನಂದನ ಕೈಲಾಸ ದೇಶದ ರಹಸ್ಯ, ವಿಶ್ವಸಂಸ್ಥೆಯ ಮಾನ್ಯತೆ ಪಡೆದಿದೆಯಾ USK?
ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ 19ನೇ ಸಮಾವೇಶದಲ್ಲಿ ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಪ್ರತಿನಿಧಿಯಾಗಿ ವಿಜಯಪ್ರಿಯಾ ನಿತ್ಯಾನಂದ ಎಂಬಾಕೆ ಭಾಗಿಯಾಗಿದ್ದಳು. ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'ವನ್ನು ಪ್ರತಿನಿಧಿಸಿದ ವಿಜಯಪ್ರಿಯಾ ನಿತ್ಯಾನಂದ 'ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಿಗೆ' ರಕ್ಷಣೆ ನೀಡಬೇಕು ಎಂದು ಈ ಸಭೆಯಲ್ಲಿ ಹೇಳಿದಳು.
ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಾದ ನಿತ್ಯಾನಂದ ಅವರು ಹಿಂದೂ ಧರ್ಮದ ಸ್ಥಳೀಯ ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ತೀವ್ರವಾದ ಕಿರುಕುಳ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮೂಲಕ ಹೋಗಿದ್ದಾರೆ. ಅವರು ಬೋಧನೆಯಿಂದ ನಿಷೇಧಿಸಲ್ಪಟ್ಟರು ಮತ್ತು ಅವರನ್ನು ಜನ್ಮ ದೇಶದಿಂದ ಗಡಿಪಾರು ಮಾಡಿಲಾಯಿತು' ಎಂದೀಕೆ ಸಭೆಯಲ್ಲಿ ದೂರಿದ್ದಾಳೆ. ವಿಜಯಪ್ರಿಯಾ ನಿತ್ಯಾನಂದ ಹೇಳುವ ಪ್ರಕಾರ ಆಕೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದಾಳೆ. ಆಕೆಯ ಫೇಸ್ಬುಕ್ ಅಕೌಂಟ್‌ನಲ್ಲಿ ಅವಳ ಬಗ್ಗೆ ಇದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲ.
ಸ್ವಿಡ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಫೆಬ್ರವರಿ 22ರಂದು ನಡೆದ ಸಂಯುಕ್ತ ರಾಷ್ಟ್ರಗಳ ಕಾರ್ಯಕ್ರಮದಲ್ಲಿ ಈಕೆ ಕೈಲಾಸದ ಪ್ರತಿನಿಧಿಯಾಗಿದ್ದಳು. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪ್ರತಿನಿಧಿಯು ಪ್ರತಿ ದೇಶದಲ್ಲೂ ಇದ್ದು, ಅವರೆಲ್ಲರೂ ವಿಶ್ವಸಂಸ್ಥೆಯ ಈ ಸಭೆಯಲ್ಲಿ ಭಾಗಿಯಾಗಿದ್ದರು. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪರವಾಗಿ ಈಕೆ ವಿದೇಶಾಂಗ ಸಚಿವೆಯಂತೆ ಕೆಲಸ ಮಾಡುತ್ತಾಳೆ.
ನಿತ್ಯಾನಂದನ 'ಕೈಲಾಸ'ದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ