
ನವದೆಹಲಿ: ದೇಶ ಬಹುತೇಕ ಡಿಜಿಟಲ್ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿರುವ ಹೊತ್ತಿನಲ್ಲೇ, ಬಳಕೆದಾರರ ಖಾಸಗಿ ಮಾಹಿತಿ ರಕ್ಷಿಸುವ ಉದ್ದೇಶ ಹೊಂದಿರುವ ಮಹತ್ವದ ಡಿಜಿಟಲ್ ಮಾಹಿತಿ ರಕ್ಷಣಾ ಮಸೂದೆ, 2023 ಅನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಆದರೆ ಮಸೂದೆಯಲ್ಲಿನ ಕೆಲ ಅಂಶಗಳನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ನಡುವೆ ವಿರೋಧ ಪಕ್ಷಗಳ ಆತಂಕ ದೂರಮಾಡುವ ಯತ್ನ ಮಾಡಿರುವ ಕೇಂದ್ರ ಸರ್ಕಾರ, ಮಸೂದೆ ಕುರಿತು ವಿಸ್ತೃತ ಚರ್ಚೆ ಮತ್ತು ವಿಪಕ್ಷಗಳ ಕಳವಳ ನಿವಾರಿಸುವ ಭರವಸೆಯನ್ನು ನೀಡಿದೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಅಶ್ವಿನ್ ವೈಷ್ಣವ್ (Ashwin Vaishnav) ಗುರುವಾರ ವಿಪಕ್ಷಗಳ ಆಕ್ಷೇಪದ ನಡುವೆಯೇ ಮಸೂದೆ ಮಂಡಿಸಿದರು. ಈ ವೇಳೆ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕೆಂದು ವಿಪಕ್ಷಗಳು ಆಗ್ರಹಿಸಿದವು. ಅಲ್ಲದೆ ರಾಜ್ಯಸಭೆಯ ಪರಾಮರ್ಶೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹಣಕಾಸು ಮಸೂದೆ ರೂಪದಲ್ಲಿ ಇದನ್ನು ಮಂಡಿಸಲಾಗಿದೆ ಎಂದು ದೂರಿದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಲೋಕಾ ದಾಳಿಗೆ ಮುನ್ನ ಸರ್ಕಾರದಿಂದ ಮಾಹಿತಿ ಸೋರಿಕೆ!
ಮಸೂದೆಯಲ್ಲಿ ಏನಿದೆ?:
ಮಸೂದೆ ಅನ್ವಯ ಬಳಕೆದಾರರ ಹಿತ ಕಾಪಾಡಲು ಮಾಹಿತಿ ರಕ್ಷಣಾ ಮಂಡಳಿ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಯಾವುದೇ ಖಾಸಗಿ ಸಂಸ್ಥೆ ಮಸೂದೆಯಲ್ಲಿನ ಅಂಶಗಳನ್ನು ಉಲ್ಲಂಘಿಸಿದ್ದು ಸಾಬೀತಾದರೆ ಮಂಡಳಿಯು ಅಂಥ ಸಂಸ್ಥೆಗಳಿಗೆ ಕನಿಷ್ಠ 50 ಕೋಟಿ ರು.ನಿಂದ ಹಿಡಿದು ಗರಿಷ್ಠ 250 ಕೋಟಿ ರು.ವರೆಗೂ ದಂಡ ವಿಧಿಸಬಹುದಾಗಿದೆ.
ಬಳಕೆದಾರರ ಹಿತ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ, ಮಂಡಳಿ, ಮಂಡಳಿ ಅಧ್ಯಕ್ಷರು, ಸದಸ್ಯರು, ಅಧಿಕಾರಿ ಅಥವಾ ಸಿಬ್ಬಂದಿ ಕೈಗೊಂಡ ಯಾವುದೇ ನಿರ್ಧಾರ ವಿರುದ್ಧ ಕಾನೂನು ಹೋರಾಟಕ್ಕೆ ಅವಕಾಶ ಇರುವುದಿಲ್ಲ. ಮಂಡಳಿ ಲಿಖಿತ ಸ್ವರೂಪದಲ್ಲಿ ಪ್ರಸ್ತಾಪಿಸುವ ಯಾವುದೇ ಅಂಶಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನಿಷೇಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿರುತ್ತದೆ.
ಸಚಿವ ಆರ್‌ಸಿ ಭರವಸೆ:
ಈ ನಡುವೆ ಮಸೂದೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev chandrashekar), ‘ಮಸೂದೆ ಸಂಸತ್ತಿನ ಅನುಮೋದನೆ ಪಡೆದ ಬಳಿಕ ಎಲ್ಲಾ ನಾಗರಿಕರ ಹಕ್ಕು ರಕ್ಷಣೆ ಮಾಡಲಿದೆ, ನಾವೀನ್ಯತಾ ಆರ್ಥಿಕತೆ ವಿಸ್ತರಣೆಗೆ ನೆರವಾಗಲಿದೆ ಮತ್ತು ರಾಷ್ಟ್ರೀಯ ಭದ್ರತೆ, ಸಾಂಕ್ರಾಮಿಕದಂತ ತುರ್ತುಪರಿಸ್ಥಿತಿ, ಭೂಕಂಪದ ಪರಿಸ್ಥಿತಿಗಳಲ್ಲಿ ಸರ್ಕಾರಕ್ಕೆ ಕಾನೂನು ಬದ್ಧ ಮತ್ತು ನ್ಯಾಯಬದ್ಧ ಅವಕಾಶ ಕಲ್ಪಿಸಲಿದೆ. ಹಲವು ಆನ್‌ಲೈನ್ ವೇದಿಕೆಗಳು ಮಾಡುತ್ತಿರುವ ದುರುಪಯೋಗ ಮತ್ತು ಶೋಷಣೆಯನ್ನು ತಪ್ಪಿಸಲು ನೆರವಾಗಲಿದೆ’ ಎಂದು ಹೇಳಿದ್ದಾರೆ.
ಅಮೆರಿಕ ಫೇಸ್‌ಬುಕ್ ಗ್ರಾಹಕರಿಗೆ 6000 ಕೋಟಿ ಭರ್ಜರಿ ಪರಿಹಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ