
ನಿವೃತ್ತ ವೈದ್ಯೆಯ ಹೆದರಿಸಿಯೇ ಕೊಂದ ಡಿಜಿಟಲ್ ವಂಚಕರು
ಹೈದರಾಬಾದ್: ಬೆಂಗಳೂರು ಪೊಲೀಸರು ಹೆಸರಿನಲ್ಲಿ ಡಿಜಿಟಲ್ ವಂಚಕರು ಸ್ಥಳೀಯ ನಿವೃತ್ತ ಸರ್ಕಾರಿ ವೈದ್ಯೆಯನ್ನು ಮೂರು ದಿನಗಳ ಕಾಲ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ ಕಾರಣ ಅವರು ಒತ್ತಡ ತಾಳಲಾಗದೇ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಏನಾಯ್ತು?:
ಸೆ.5ರಂದು ವಂಚಕರು ನಿವೃತ್ತ ವೈದ್ಯೆಗೆ ಬೆಂಗಳೂರು ಪೊಲೀಸರ ಹೆಸರಲ್ಲಿ ಕರೆ ಮಾಡಿದ್ದಾರೆ. ನೀವು ಅಕ್ರಮ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಾಗಿದೆ ಎಂದು ಆರೋಪಿಸಿದ್ದಾರೆ. ಮೊದಲಿಗೆ ವೈದ್ಯೆ ಈ ಕುರಿತು ಒಪ್ಪದೇ ಹೋದರೂ ಆಕೆಗೆ ಪದೇ ಪದೇ ಮೂರು ದಿನಗಳ ಕಾಲ ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ಮತ್ತು ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.
ವಂಚಕರ ಖಾತೆಗೆ ಪಿಂಚಣಿ ಖಾತೆಯಲ್ಲಿದ್ದ 6.5 ಲಕ್ಷ ರೂ ವರ್ಗಾಯಿಸಿದ್ದ ವೈದ್ಯೆ:
ಜೊತೆಗೆ ವಂಚಕರ ತಂಡ ಕರ್ನಾಟಕ ಪೊಲೀಸ್, ಜಾರಿ ನಿರ್ದೇಶನಾಲಯ, ಭಾರತೀಯ ರಿಸರ್ವ ಬ್ಯಾಂಕ್ ಮತ್ತು ನ್ಯಾಯಾಲಯದ ಹೆಸರಿನಲ್ಲಿ ಸೃಷ್ಟಿಸಿದ ನಕಲಿ ದಾಖಲೆಗಳನ್ನು ತೋರಿಸಿ ವೈದ್ಯೆಯನ್ನು ಹೆದರಿಸಿದ್ದಾರೆ. ಇದರಿಂದ ಬೆದರಿದ ವೈದ್ಯೆ, ಮನೆಯಲ್ಲಿ ಯಾರಿಗೂ ತಿಳಿಸದೇ ತನ್ನ ಪಿಂಚಣಿ ಖಾತೆಯಲ್ಲಿದ್ದ 6.5 ಲಕ್ಷ ರು. ಹಣವನ್ನು ವಂಚಕರ ಬ್ಯಾಂಕ್ ಖಾತೆಗೆ ವರ್ಗ ಮಾಡಿದ್ದಾರೆ. ಜೊತೆಗೆ ಹಣ ವರ್ಗ ಮಾಡಿದ ಸ್ಲಿಪ್ ಅನ್ನು ಕೂಡಾ ಅಪ್‌ಲೋಡ್ ಮಾಡಿಸಿದ್ದಾರೆ.
ಇಷ್ಟೆಲ್ಲಾ ಆದರೂ ಮನೆಯವರಿಗೆ ಒಂದು ಮಾತು ಹೇಳದ ವೈದ್ಯೆ ಒತ್ತಡ ತಡೆಯಲಾಗದೇ ಹೃದಯಾಘಾತಕ್ಕೆ ಬಲಿ
ಸತತ ಮೂರು ದಿನ ಡಿಜಿಟಲ್ ಅರೆಸ್ಟ್ ನಡೆದರೂ ವೈದ್ಯೆ ಮನೆಯಲ್ಲಿ ಈ ವಿಷಯ ತಿಳಿಸಿಲ್ಲ. ಅಂತಿಮವಾಗಿ ಸೆ.8ರಂದು ಬೆಳಗ್ಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಅವರ ಪುತ್ರ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ ಫಲಿಸದೇ ಆವರು ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ತಮ್ಮ ತಾಯಿಯ ಮೊಬೈಲ್ ಕರೆಗಳನ್ನು ಅವರ ಪುತ್ರ ಪರಿಶೀಲಿಸಿದ ವೇಳೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ವೈದ್ಯೆಯ ದೂರವಾಣಿ ಕರೆಗಳನ್ನು ಪರಿಶೀಲಿಸಿ ಪುತ್ರ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
ಈ ನಡುವೆ ಮಹಿಳೆ ಸಾವಿನ ಸುದ್ದಿ ತಿಳಿಯದ ವಂಚಕರು, ಆಕೆಯ ಮೊಬೈಲ್‌ಗೆ ಸಾವಿನ ಬಳಿಕವೂ ಕರೆ ಮಾಡಿದ್ದ ವಿಷಯವೂ ಪತ್ತೆಯಾಗಿದೆ.
ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥನ ಮಾತಿನಂತೆ ಉಗ್ರರ ಅಂತ್ಯಸಂಸ್ಕಾರಕ್ಕೆ ಪಾಕ್‌ನಿಂದ ಸೇನಾಗೌರವ: ಜೈಷ್ ಕಮಾಂಡರ್
ಇದನ್ನೂ ಓದಿ: ಜೈಷ್ ಹೇಳಿಕೆಯಿಂದ ಪಾಕ್ ಬಣ್ಣ ಬಯಲು: ಕಣ್ಣು ಮಿಟುಕಿಸುವಷ್ಟರಲ್ಲಿ ಪಾಕ್ ಸೇನೆ ಮಂಡಿಯೂರಿತ್ತು: ಪ್ರಧಾನಿ ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ