* ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ
* ವಕೀಲರು ‘ಕೀಳು’ ಪದ ಬಳಸಿದರೆ ಬಾರ್ ಕೌನ್ಸಿಲ್‌ನಿಂದ ಸಸ್ಪೆಂಡ್
* ಜಡ್ಜ್, ಕೋರ್ಟ್, ನ್ಯಾಯಾಂಗದ ಬಗ್ಗೆ ಕೀಳು ಹೇಳಿಕೆ ನೀಡುವಂತಿಲ್ಲ
ನವದೆಹಲಿ(ಜೂ.28): ವಕೀಲರು ಇನ್ನುಮುಂದೆ ಮಾತನಾಡುವಾಗ ಅಥವಾ ಬರೆಯುವಾಗ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಕೇಂದ್ರ ಸರ್ಕಾರವು ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ವಕೀಲರು ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧೀಶರು ಅಥವಾ ನ್ಯಾಯಾಂಗದ ಯಾವುದೇ ಸದಸ್ಯ ಅಥವಾ ಬಾರ್ ಕೌನ್ಸಿಲ್ ಬಗ್ಗೆ ‘ಕೀಳು’ ಪದ ಬಳಕೆ ಮಾಡಿದರೆ ಅವರನ್ನು ಅಮಾನತು ಮಾಡಲು ಅಥವಾ ಸದಸ್ಯತ್ವದಿಂದ ವಜಾಗೊಳಿಸಲು ಇದರಡಿ ಅವಕಾಶ ಕಲ್ಪಿಸಲಾಗಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಿಗೆ ‘ಡ್ಯೂಟೀಸ್ ಟುವಾರ್ಡ್ಸ್ ಸೊಸೈಟಿ ಅಂಡ್ ಬಾರ್’ ಎಂಬ ಸೆಕ್ಷನ್ 5ನ್ನು ಹೊಸತಾಗಿ ಸೇರಿಸಿ ಶುಕ್ರವಾರ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ‘ವಕೀಲರು ಆರೋಗ್ಯಕರ ಅಥವಾ ಉತ್ತಮ ಉದ್ದೇಶದಿಂದ ಮಾಡುವ ಟೀಕೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆದರೆ, ವಕೀಲರು ಯಾವುದೇ ಕೋರ್ಟ್, ಜಡ್ಜ್, ನ್ಯಾಯಾಂಗದ ಸದಸ್ಯ ಅಥವಾ ಬಾರ್ ಕೌನ್ಸಿಲ್ ವಿರುದ್ಧ ಮುದ್ರಣ, ಎಲೆಕ್ಟ್ರಾನಿಕ್ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಕೀಳು ಹೇಳಿಕೆ ನೀಡಿದರೆ ಅವರನ್ನು ಬಾರ್ ಕೌನ್ಸಿಲ್‌ನ ಸದಸ್ಯತ್ವದಿಂದ ಅಮಾನತು ಮಾಡಬಹುದು ಅಥವಾ ವಜಾಗೊಳಿಸಬಹುದು.
ವಕೀಲರು ತಮ್ಮ ದೈನಂದಿನ ಬದುಕಿನಲ್ಲಿ ಉತ್ತಮ ನಡತೆಯನ್ನು ಹೊಂದಿರಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು. ಮುದ್ರಣ, ಎಲೆಕ್ಟ್ರಾನಿಕ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಕೋರ್ಟ್ ಅಥವಾ ಜಡ್ಜ್ ವಿರುದ್ಧ ಅವಾಚ್ಯ, ಕೀಳು, ಮಾನಹಾನಿಕರ, ದುರುದ್ದೇಶಪೂರಿತ ಅಥವಾ ಕಿಡಿಗೇಡಿತನದ ಹೇಳಿಕೆ ನೀಡಬಾರದು’ ಎಂದು ನಿಯಮದಲ್ಲಿ ತಿಳಿಸಲಾಗಿದೆ.