* ಡೆಲ್ಟಾ ಪ್ಲಸ್ ರೂಪಾಂತರಿಗೆ ಶ್ವಾಸಕೋಶದ ಜೊತೆಗೆ ಸಂಬಂಧ ಹೆಚ್ಚು!
* ಡೆಲ್ಟಾ+ ಸೋಂಕಿನ ತೀವ್ರತೆ, ಹರಡುವಿಕೆ ಹೆಚ್ಚು ಎಂಬುದಕ್ಕೆ ಸಾಕ್ಷ್ಯವಿಲ್ಲ
* ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಅರೋರಾ ಹೇಳಿಕೆ
ನವದೆಹಲಿ(ಜೂ.28): ದೇಶಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ವೈರಸ್‌ಗೆ ಇನ್ನಿತರ ಎಲ್ಲಾ ರೂಪಾಂತರಿಗಳಿಗಿಂತ ನಮ್ಮ ಶ್ವಾಸಕೋಶದ ಜೊತೆಗೆ ಸಂಬಂಧ ಹೆಚ್ಚು ಎಂಬ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಸಮಾಧಾನಕರ ಸಂಗತಿಯೆಂದರೆ ಡೆಲ್ಟಾ ಪ್ಲಸ್‌ನಿಂದ ಸೋಂಕಿನ ತೀವ್ರತೆ ಹೆಚ್ಚುತ್ತದೆ ಅಥವಾ ಈ ತಳಿ ಬೇರೆಲ್ಲ ರೂಪಾಂತರಿಗಿಂತ ವೇಗವಾಗಿ ಹರಡುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭಿಸಿಲ್ಲ.
ಈ ಕುರಿತು ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ಕುರಿತ ತಾಂತ್ರಿಕ ಸಲಹಾ ಸಮಿತಿ ಚೇರ್ಮನ್ ಡಾ.ಎನ್.ಕೆ.ಅರೋರಾ ಮಾಹಿತಿ ನೀಡಿದ್ದು, ‘ಶ್ವಾಸಕೋಶದ ಟಿಶ್ಯೂಗಳ ಜೊತೆಗೆ ಡೆಲ್ಟಾಪ್ಲಸ್ ವೈರಸ್ ಬೇರೆಲ್ಲಾ ಕೊರೋನಾ ವೈರಸ್‌ಗಳಿಗಿಂತ ಹೆಚ್ಚು ಸಂಬಂಧ ಹೊಂದಿದೆ ಎಂಬುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಆದರೆ, ಇದರರ್ಥ ಈ ವೈರಸ್‌ನಿಂದ ರೋಗ ತೀವ್ರಗೊಳ್ಳುತ್ತದೆ ಅಥವಾ ಸೋಂಕು ಹೆಚ್ಚು ವೇಗವಾಗಿ ಹರಡುತ್ತದೆ ಎಂದಲ್ಲ. ಅದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ’ ಎಂದು ಹೇಳಿದ್ದಾರೆ.
undefined
ದೇಶದ ಮೇಲೆ ಡೆಲ್ಟಾ ಪ್ಲಸ್‌ನ ಪರಿಣಾಮ ಏನೆಂಬುದು ತಿಳಿಯಲು ಇನ್ನೂ ಹೆಚ್ಚು ಜನರಲ್ಲಿ ಈ ಸೋಂಕಿರುವುದು ಪತ್ತೆಯಾಗಬೇಕು. ಸದ್ಯಕ್ಕೆ ಸಿಂಗಲ್ ಅಥವಾ ಡಬಲ್ ಡೋಸ್ ಲಸಿಕೆ ಪಡೆದವರಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದ್ದರೆ ರೋಗ ಲಕ್ಷಣಗಳು ಬಹಳ ಕಡಿಮೆ ಕಾಣಿಸುತ್ತಿವೆ. ಹೀಗಾಗಿ ಈ ರೂಪಾಂತರಿಯ ಬಗ್ಗೆ ಇನ್ನಷ್ಟು ಸೂಕ್ಷ್ಮವಾಗಿ ಪ್ರಯೋಗಗಳು ನಡೆಯಬೇಕು. ಸದ್ಯ ದೇಶದಲ್ಲಿ ಮೇಲ್ನೋಟಕ್ಕೆ ಪತ್ತೆಯಾಗಿರುವುದಕ್ಕಿಂತ ಹೆಚ್ಚು ಡೆಲ್ಟಾ ಪ್ಲಸ್ ಪ್ರಕರಣಗಳು ಇರಬಹುದು. ಅವು ನಮಗೆ ಗೊತ್ತಿಲ್ಲದೆಯೇ ಹರಡುತ್ತಿರಬಹುದು. ಆದರೆ ಜೀನೋಮಿಕ್ ಸೀಕ್ವೆನ್ಸಿಂಗ್‌ನಲ್ಲಿ ಬಹಳ ಬೇಗ ಈ ರೂಪಾಂತರಿಯನ್ನು ಪತ್ತೆಹಚ್ಚಿರುವುದರಿಂದ ಇದರ ಪ್ರಸರಣವನ್ನು ತಡೆಯಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಇನ್ನು, ಡೆಲ್ಟಾ ಪ್ಲಸ್‌ನಿಂದ ದೇಶದಲ್ಲಿ 3ನೇ ಕೊರೋನಾ ಅಲೆ ಏಳುತ್ತದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
2ನೇ ಅಲೆ ಇನ್ನೂ ಮುಗಿದಿಲ್ಲ
ದೇಶದಲ್ಲಿ ನಿರಂತರವಾಗಿ ಕೊರೋನಾ ಇಳಿಮುಖವಾಗುತ್ತಿದ್ದರೂ 2ನೇ ಅಲೆ ಇನ್ನೂ ಮುಗಿದಿಲ್ಲ ಎಂದು ಕೇಂದ್ರ ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯ ಚೇರ್ಮನ್ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ. ಕಳೆದ 8-10 ದಿನದಿಂದ ದೇಶದಲ್ಲಿ ನಿತ್ಯ ಸುಮಾರು 50 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಕೆಲ ಪ್ರದೇಶಗಳಲ್ಲಿ ಈಗಲೂ ಹೆಚ್ಚು ಕೇಸುಗಳು ಬರುತ್ತಿವೆ. ಹೀಗಾಗಿ 2ನೇ ಅಲೆ ಇನ್ನೂ ಹೋಗಿಲ್ಲ ಎಂದು ತಿಳಿಸಿದ್ದಾರೆ.