ಬೇಸಿಗೆ ಬಿಸಿಯ ಬೇಗೆಗೆ ಉತ್ತರ ಭಾರತ ತತ್ತರ| ದೆಹಲಿಯ ಸಫ್ದರ್‌ಜಂಗ್, ಲೋಧಿ ರಸ್ತೆಯಲ್ಲಿ 45 ಡಿಗ್ರಿ ತಾಪಮಾನ
ನವದೆಹಲಿ(ಮೇ.28): ಬೇಸಿಗೆಯ ಭಾರೀ ಬಿಸಿಲಿನ ತಾಪಮಾನಕ್ಕೆ ಭಾರತದ ಉತ್ತರ ಹಾಗೂ ಪಶ್ಚಿಮ ಭಾಗಗಳು ಅಕ್ಷರಶಃ ಕಂಗೆಟ್ಟಿವೆ. ರಾಜಸ್ಥಾನ ಮತ್ತು ರಾಷ್ಟ್ರ ರಾಜಧಾನಿ ದೆಹಲಿ ಭಾಗಗಳಲ್ಲಿ ಬುಧವಾರ ಭರ್ಜರಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ದೆಹಲಿಯ ಪಾಲಂನಲ್ಲಿ 47.2 ಡಿ.ಸೆ., ಸಫ್ದರ್‌ಜಂಗ್‌ನಲ್ಲಿ 45.9 ಡಿ.ಸೆ, ಲೋಧಿ ರಸ್ತೆ ಹಾಗೂ ಅಯಾನಗರದಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಸ್ಟೇಷನ್‌ಗಳಲ್ಲಿ ಕ್ರಮವಾಗಿ 45.1 ಹಾಗೂ 46.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸಫ್ದರ್‌ಜಂಗ್‌ನಲ್ಲಿ 1944ರ ಮೇ 29ರಂದು 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದುವರೆಗಿನ ಗರಿಷ್ಠ ತಾಪಮಾನವಾಗಿದೆ.
2100ರ ವೇಳೆಗೆ 1.2 ಶತಕೋಟಿ ಜನರನ್ನು ಕಾಡುತ್ತದಂತೆ #HeatStress
ಇನ್ನು ರಾಜಸ್ಥಾನದ ಚುರುವಿನಲ್ಲಿ 49.6 ಡಿಗ್ರಿ ದಾಖಲಾಗಿದೆ. ಮಂಗಳವಾರ ಚುರುವಿನಲ್ಲಿ 50 ಡಿಗ್ರಿ ತಾಪಮಾನ ದಾಖಲಾಗಿತ್ತು. ಮತ್ತೊಂದೆಡೆ ಗಂಗಾನಗರದಲ್ಲಿ 48.9 ಡಿಗ್ರಿ, ಕೋಟಾದಲ್ಲಿ 47.2 ಹಾಗೂ ಬಿಕನೇರ್‌ನಲ್ಲಿ 48 ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉಳಿದಂತೆ ಜಮ್ಮು, ಪಂಜಾಬ್, ಹರಾರಯಣ ಸೇರಿದಂತೆ ಇನ್ನಿತರ ಉತ್ತರದ ರಾಜ್ಯಗಳಲ್ಲಿ ಭಾರೀ 42 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಇದರ ನಡುವೆಯೇ, ಉತ್ತರ ಭಾರತ ಇನ್ನೂ ಕೆಲವು ದಿನಗಳ ಕಾಲ ಉಷ್ಣದ ಗಾಳಿಯಿಂದ ಮುಕ್ತವಾಗುವುದಿಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.