
ನವದೆಹಲಿ (ನ. 07): ದಿಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಸಂಘರ್ಷ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಕೀಲರು ನಡೆಸುತ್ತಿರುವ ಮುಷ್ಕರ 3 ನೇ ದಿನ ಪೂರೈಸಿದೆ. ತಮ್ಮ ಮೇಲೆ ಗುಂಡು ಹಾರಿಸಿದ ಹಾಗೂ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಬಂಧಿಸಬೇಕು ಎಂದು ವಕೀಲರು ಪ್ರತಿಭಟಿಸುತ್ತಿದ್ದಾರೆ. ಎಲ್ಲಿಯವರೆಗೆ ಆರೋಪಿ ಪೊಲೀಸರ ಬಂಧನ ಆಗುವುದಿಲ್ಲವೋ ಅಲ್ಲಿಯವರೆಗೆ ತಾವು ಕೆಲಸಕ್ಕೆ ಮರಳಲ್ಲ ಎಂದು ವಕೀಲರು ಹೇಳಿದ್ದಾರೆ.
ಈ ನಡುವೆ, ದಿಲ್ಲಿಯ ಎಲ್ಲ 6 ಜಿಲ್ಲಾ ಕೋರ್ಟುಗಳ ವಕೀಲರು ಪ್ರತಿಭಟನೆ ನಡೆಸುತ್ತಿರುವ ಕಾರಣ ಕಲಾಪಗಳು ವ್ಯತ್ಯಯಗೊಂಡಿವೆ. ಪಟಿಯಾಲಾ ಹೌಸ್ ಕೋರ್ಟ್ ಹಾಗೂ ಸಾಕೇತ್ ಕೋರ್ಟ್‌ಗಳ ಒಳಗೆ ಕಕ್ಷಿದಾರರನ್ನು ಒಳಬಿಡಲು ವಕೀಲರು ನಿರಾಕರಿಸಿದರು. ಇದರಿಂದ ಕಕ್ಷಿದಾರರಿಗೆ ತೊಂದರೆ ಆಯಿತು.
ಮಹಾ ಸರ್ಕಾರ ರಚನೆ ನಾಟಕ ಇಂದು ಅಂತ್ಯ?
ಬಾರ್ ಕೌನ್ಸಿಲ್ ಆಗ್ರಹ:
ಈ ನಡುವೆ, ದಿಲ್ಲಿ ಪೊಲೀಸರ ಪ್ರತಿಭಟನೆ ಭಾರತೀಯ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಬಣ್ಣಿಸಿದೆ. ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥ ಪೊಲೀಸರನ್ನು ಒಂದು ವಾರದಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದೆ. ಇದೇ ವೇಳೆ ಹಿಂಸೆ ನಡೆಸಿದ ವಕೀಲರ ವಿರುದ್ಧವೂ ಪುನಃ ಆಕ್ರೋಶ ವ್ಯಕ್ತಪಡಿಸಿದೆ.
ಈ ನಡುವೆ, ಹಲ್ಲೆ ಮಾಡಿದ್ದ ವಕೀಲರ ಮೇಲೆ ಯಾವುದೇ ಕ್ರಮ ಜರುಗಿಸಬಾರದು ಎಂಬ ತನ್ನ ಆದೇಶವನ್ನು ‘ನಿಮ್ಮ ವಿವೇಚನೆಗೆ ತಕ್ಕಂತೆ ಅರ್ಥೈಸಬಹುದು’ ಎಂದು ದಿಲ್ಲಿ ಹೈಕೋರ್ಟು, ಕೇಂದ್ರ ಸರ್ಕಾರಕ್ಕೆ ಹೇಳಿದೆ. ವಕೀಲರ ಮೇಲೆ ಕ್ರಮ ಜರುಗಿಸಬಾರದು ಎಂಬ ದಿಲ್ಲಿ ಹೈಕೋರ್ಟ್ ಆದೇಶ ಸರಿಯಿಲ್ಲ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್‌ನಲ್ಲೇ ಪ್ರಶ್ನಿಸಿತ್ತು.
ಇಬ್ಬರು ವಕೀಲರಿಂದ ಆತ್ಮಹತ್ಯೆ ಯತ್ನ
ದಿಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಕೀಲರಿಬ್ಬರು ರೋಹಿಣಿ ಕೋರ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡ ಇಬ್ಬರು ವಕೀಲರು ಆತ್ಮಾಹುತಿಗೆ ಯತ್ನಿಸಿದರು. ಆಗ ಸಹೋದ್ಯೋಗಿಗಳು ಅವರನ್ನು ತಡೆದರು. ಏತನ್ಮಧ್ಯೆ ಇದೇ ಕೋರ್ಟ್ ಆವರಣದಲ್ಲಿ ವಕೀಲರೊಬ್ಬರು ಕಟ್ಟಡದ ಮೇಲೆ ಹತ್ತಿ ಜಿಗಿಯಲು ಮುಂದಾಗಿದ್ದರು. ಆದರೆ ಬಳಿಕ ಅವರೇ ಕೆಳಗಿಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ