ದೆಹಲಿ ಅಬಕಾರಿ ಹಗರಣ ಇದೀಗ ಆಮ್ ಆದ್ಮಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಏನಿಲ್ಲ ಏನಿಲ್ಲ, ಎಲ್ಲಾ ಬಿಜೆಪಿ ರಾಜಕೀಯ ಎಂದಿದ್ದ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾಗೆ ಮತ್ತೆ ಚಿಂತೆ ಶುರುವಾಗಿದೆ. ಇದೀಗ ಸಿಸೋಡಿಯಾ ಪಿಎ ಮನೆ ಮೇಲೆ ಇಡಿ ದಾಳಿ ನಡೆಸಿ ಅರೆಸ್ಟ್ ಮಾಡಿದ್ದಾರೆ.
ನವದೆಹಲಿ(ನ.05): ದೆಹಲಿಯಲ್ಲಿ ಅಬಕಾರಿ ಲೈಸೆನ್ಸ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಇದೀಗ ಆಮ್ ಆದ್ಮಿ ಪಾರ್ಟಿಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ದೆಹಲಿ ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಇದೀಗ ಇಡಿ ಅಧಿಕಾರಿಗಳು ಈ ಪ್ರಕರ ಸಂಬಂಧ ಸಿಸೋಡಿಯಾ ಆಪ್ತ ಸಹಾಯಕ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇಷ್ಟೇ ಅಲ್ಲ ಸಿಸೋಡಿಯಾ ಪಿಎಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಮನೀಶ್ ಸಿಸೋಡಿಯಾ ಬಹಿರಂಗಪಡಿಸಿದ್ದಾರೆ. ಬಿಜೆಪಿಗೆ ಚುನಾವಣೆ ಸೋಲಿನ ಭಯ ಎದುರಾಗಿದೆ. ಹೀಗಾಗಿ ಆಮ್ ಆದ್ಮಿ ನಾಯಕರಿಗೆ ಇಡಿ, ಸಿಬಿಐ ಬಳಸಿಕೊಂಡು ಕಿರುಕುಳ ನೀಡುತ್ತಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಸುಳ್ಳು ಎಫ್ಐಆರ್ ನಡಿ ಇಡಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡಿದ್ದರು. ಬ್ಯಾಂಕ್ ಲಾಕರ್ಸ್ ಪರಿಶೀಲಿಸಿದ್ದರು. ನನ್ನ ಗ್ರಾಮದಲ್ಲೇ ತನಿಖೆ ನಡೆಸಿದ್ದರು. ಆದರೆ ಏನೂ ಸಿಗಲಿಲ್ಲ. ಇಂದು ನನ್ನ ಆಪ್ತ ಸಹಾಯಕನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ಹೀಗಾಗಿ ಆಪ್ತ ಸಹಾಯಕನನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ
ಇತ್ತ ಇಡಿ ಅಧಿಕಾರಿಗಳು ಮನೀಶ್ ಸಿಸೋಡಿಯಾ ಆಪ್ತರ ಕೆಲ ಮನೆಗಳ ಮೇಲೂ ದಾಳಿ ನಡೆಸಿದೆ. ಇದೀಗ ಆಮ್ ಆದ್ಮಿ ಪಾರ್ಟಿ ನಾಯಕರು ಇದು ಬಿಜೆಪಿ ಪಿತೂರಿ ಎಂದು ಆರೋಪಿಸಿದೆ. ಇತ್ತ ಬಿಜೆಪಿ ಕೂಡ ತಿರುಗೇಟು ನೀಡಿದೆ.
इन्होंने झूठी FIR कर मेरे घर रेड करवाई, बैंक लॉकर तलाश लिए, मेरे गाँव में जाँच कर ली लेकिन मेरे ख़िलाफ़ कहीं कुछ नहीं मिला
आज इन्होंने मेरे PA के घर पर ईडी की रेड करी वहाँ भी कुछ नहीं मिला तो अब उसको गिरफ़्तार कर के ले गये है.
भाजपा वालो! चुनाव में हार का इतना डर..
ಸಿಸೋಡಿಯಾ ಆಪ್ತ ನಾಯರ್ ಬಂಧನ
ದೆಹಲಿಯಲ್ಲಿ ಹಿಂಪಡೆಯಲಾದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂಬುದರ ಕುರಿತಾಗಿ ತನಿಖೆ ನಡೆಸುತ್ತಿರುವ ಸಿಬಿಐ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ, ಉದ್ಯಮಿ ವಿಜಯ್ ನಾಯರ್ ಎಂಬುವವರನ್ನು ಇತ್ತೀಚೆಗೆ ಬಂಧಿಸಿತ್ತು. ಈ ಅಕ್ರಮದಲ್ಲಿ ಸಿಸೋಡಿಯಾ, ನಾಯರ್ ಸೇರಿದಂತೆ 14 ಜನರ ಪಾತ್ರ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಅಲ್ಲದೇ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 15 ಜನರಿಗೆ ಸಂಬಂಧಿಸಿದ ಕಂಪನಿಗಳ ವ್ಯವಹಾರವನ್ನು ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ನಾಯರ್ ವಿಚಾರಣೆ ಎದುರಿಸದೇ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದನ್ನು ನಿರಾಕರಿಸಿದ್ದ ನಾಯರ್ ವಿಚಾರಣೆಗೆ ಹಾಜರಾಗಿದ್ದರು.
ದೆಹಲಿ ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಅಥವಾ ಕಿತ್ತೆಸೆಯಿರಿ, ಆಪ್ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ
ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಸಂಬಂಧ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 8 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಆಗಸ್ಟ್ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಅಬಕಾರಿ ಖಾತೆ ಸಚಿವರೂ ಆಗಿರುವ ಸಿಸೋಡಿಯಾ ಹಾಗೂ ಇತರೆ 14 ಜನರ ವಿರುದ್ಧ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇ.ಡಿ ಪ್ರಕರಣ ದಾಖಲಿಸಿಕೊಂಡಿದೆ. ಆ.19 ರಂದು ಸಿಬಿಐ ಈ ಪ್ರಕರಣದ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿತ್ತು.
ಕೋವಿಡ್ ನೆಪದಲ್ಲಿ ಅಬಕಾರಿ ಇಲಾಖೆ ಲೈಸನ್ಸ್‌ದಾರರಿಗೆ 144.36 ಕೋಟಿ ರು. ಲೈಸನ್ಸ್ ಶುಲ್ಕ ಮನ್ನಾ ಮಾಡಿದ ಆರೋಪದ ಬಗ್ಗೆ ಇ.ಡಿ. ತನಿಖೆ ನಡೆಸಲಿದೆ. ಅಲ್ಲದೇ ಅಬಕಾರಿ ನೀತಿಯಲ್ಲಿ ಬದಲಾವಣೆ ತರುವಲ್ಲಿ ಪಾಲ್ಗೊಂಡ ವ್ಯಕ್ತಿ ಅಥವಾ ಸಂಸ್ಥೆಗಳು ನೀತಿ ಅನುಷ್ಠಾನದಿಂದ ಅಕ್ರಮವಾಗಿ ಹಣ ಅಥವಾ ಬೇನಾಮಿ ಆಸ್ತಿಯನ್ನು ಗಳಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಿದೆ.