50 ದಿನ ಪೂರೈಸಿದ ರೈತ ಪ್ರತಿಭಟನೆ: ಇಲ್ಲಿತನಕ 50 ರೈತರ ಸಾವು

By Kannadaprabha NewsFirst Published Jan 15, 2021, 8:44 AM IST
Highlights

50 ದಿನ ಪೂರೈಸಿದ ರೈತ ಪ್ರತಿಭಟನೆ | ಭಾರೀ ಚಳಿ ಸೇರಿ ಇನ್ನಿತರ ಘಟನೆಗಳಲ್ಲಿ 50 ರೈತರ ಸಾವು

ನವದೆಹಲಿ(ಜ.15): ಕೇಂದ್ರದ ಕೃಷಿ ಕಾಯ್ದೆಗಳನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದ್ದಾಗ್ಯೂ, ಬಿಗಿಪಟ್ಟು ಸಡಿಲಿಸದೆ ದಿಲ್ಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಭಾರೀ ಪ್ರತಿಭಟನೆಯು ಗುರುವಾರ 50ನೇ ದಿನಕ್ಕೆ ಕಾಲಿಟ್ಟಿದೆ. ಜೊತೆಗೆ ಜನವರಿ 26ರ ಗಣರಾಜ್ಯೋತ್ಸವ ಪರೇಡ್‌ಗೆ ಪರಾರ‍ಯಯವಾಗಿ ತಾವು ಟ್ರಾಕ್ಟರ್‌, ಟ್ರಾಲಿ ಪರೇಡ್‌ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ರೈತರು ಎಚ್ಚರಿಸಿದ್ದಾರೆ.

ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್‌ ಒಕ್ಕೂಟ(ಬಿಕೆಯು) ಮುಖಂಡ ಪಾಲ್‌ ಮಜ್ರಾ, ರೈತ ವಿರೋಧಿ ಕಾನೂನುಗಳ ಹಿಂಪಡೆತಕ್ಕೆ ಆಗ್ರಹಿಸಿ ದಿಲ್ಲಿ ಗಡಿಗಳಲ್ಲಿ ಮೈಕೊರೆಯುವ ಚಳಿ, ಗಾಳಿ, ಮಳೆ ಹಾಗೂ ರಾತ್ರಿ-ಹಗಲು ಎನ್ನದೆ ಕಳೆದ ಒಂದುವರೆ ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದೇವೆ.

 

ಈ ಹೋರಾಟದಲ್ಲಿ ಭೀಕರ ಚಳಿ ಸೇರಿದಂತೆ ಇನ್ನಿತರ ಕಾರಣಗಳಿಂದ 50ಕ್ಕೂ ಹೆಚ್ಚು ಅನ್ನದಾತರು ಮೃತಪಟ್ಟಿದ್ದಾರೆ. ಈ ಕಾಯ್ದೆಗಳ ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದಿದ್ದಾರೆ.

ಕಾಯ್ದೆಗಳಲ್ಲಿರುವ ಕೆಲವು ಅಂಶಗಳ ತಿದ್ದುಪಡಿಗೆ ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಈ ಕಾಯ್ದೆಗಳನ್ನು ಹಿಂಪಡೆಯಲೇಬೇಕು ಎಂಬುದು ರೈತರ ಪಟ್ಟು. ರೈತರ ಮನವೊಲಿಕೆಗಾಗಿ ಕೇಂದ್ರ ಸರ್ಕಾರ 8 ಸಂಧಾನ ಸಭೆಗಳನ್ನು ನಡೆಸಿದೆ. ಆದರೆ ರೈತರ ಬಿಕ್ಕಟ್ಟು ಮಾತ್ರ ಶಮನವಾಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.

click me!