ರಾಜಧಾನಿ ಆಡಳಿತದಿಂದ ಆಪ್‌ಗೆ ‘ಎಕ್ಸಿಟ್‌’ ಪೋಲ್‌: ಬಿಜೆಪಿಗೆ ದಿಲ್ಲಿ ಗದ್ದುಗೆ?

Published : Feb 06, 2025, 05:47 AM IST
ರಾಜಧಾನಿ ಆಡಳಿತದಿಂದ ಆಪ್‌ಗೆ ‘ಎಕ್ಸಿಟ್‌’ ಪೋಲ್‌: ಬಿಜೆಪಿಗೆ ದಿಲ್ಲಿ ಗದ್ದುಗೆ?

ಸಾರಾಂಶ

ಕಳೆದ 27 ವರ್ಷಗಳಿಂದ ರಾಜಧಾನಿ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದ್ದ ಭಾರತೀಯ ಜನತಾ ಪಕ್ಷಕ್ಕೆ ಕೊನೆಗೂ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ ಎಂದು ಬುಧವಾರ ಪ್ರಕಟವಾದ ದೆಹಲಿ ಚುನಾವಣೆ ಕುರಿತಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. 

ನವದೆಹಲಿ (ಫೆ.06): ಕಳೆದ 27 ವರ್ಷಗಳಿಂದ ರಾಜಧಾನಿ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದ್ದ ಭಾರತೀಯ ಜನತಾ ಪಕ್ಷಕ್ಕೆ ಕೊನೆಗೂ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ ಎಂದು ಬುಧವಾರ ಪ್ರಕಟವಾದ ದೆಹಲಿ ಚುನಾವಣೆ ಕುರಿತಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ದೆಹಲಿಯಲ್ಲಿ ಬುಧವಾರ ಮತದಾನ ಮುಕ್ತಾಯವಾದ ಬೆನ್ನಲ್ಲೇ 10 ಪ್ರತ್ಯೇಕ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಟಿಸಿದ್ದು, ಈ ಪೈಕಿ 8 ಸಮೀಕ್ಷೆಗಳು ಬಿಜೆಪಿ ಪರ ಗೆಲುವಿನ ಭವಿಷ್ಯ ನುಡಿದಿವೆ.

ಎರಡು ಸಮೀಕ್ಷೆ ಮಾತ್ರ ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್‌ಆದ್ಮಿ ಪಕ್ಷ ಮತ್ತೆ ಗೆಲ್ಲುವ ಸುಳಿವು ನೀಡಿವೆ. ಇನ್ನೊಂದೆಡೆ 12 ವರ್ಷಗಳ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವ ಆಶಾಭಾವನೆಯೊಂದಿಗೆ ಕರ್ನಾಟಕ ಮಾದರಿ ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್‌ಗೆ ಮತ್ತೆ ಭಾರೀ ಹಿನ್ನಡೆಯಾಗಿದೆ. ಯಾವುದೇ ಸಮೀಕ್ಷೆಗಳು ಕಾಂಗ್ರೆಸ್‌ಗೆ 3ಕ್ಕಿಂತ ಹೆಚ್ಚು ಸ್ಥಾನ ನೀಡಿಲ್ಲ. ಒಂದು ವೇಳೆ ಸಮೀಕ್ಷೆಗಳು ಖಚಿತವಾದರೆ 1998ರ ಬಳಿಕ ಮೊದಲ ಬಾರಿಗೆ ಅಂದರೆ 27 ವರ್ಷಗಳ ಬಳಿಕ ಬಿಜೆಪಿಗೆ ದೆಹಲಿ ಚುಕ್ಕಾಣಿ ಸಿಗಲಿದೆ. ಮತ್ತೊಂದೆಡೆ 10 ವರ್ಷದಿಂದ ಅಧಿಕಾರದಲ್ಲಿದ್ದ ಆಪ್‌ ಅಧಿಕಾರ ವಂಚಿತವಾಗಲಿದೆ. ಅದರ ಆಡಳಿತ ಇನ್ನು ಪಂಜಾಬ್‌ಗೆ ಮಾತ್ರ ಸೀಮಿತವಾಗಲಿದೆ.

ಸಮೀಕ್ಷಾ ವರದಿಗಳನ್ನು ಆಪ್‌ ತಿರಸ್ಕರಿಸಿದ್ದು, ಮೊದಲಿನಿಂದಲೂ ಚುನಾವಣೆ ಕುರಿತು ಭವಿಷ್ಯ ನುಡಿಯುವವರು ಆಪ್‌ನ ಸಾಧನೆ ಕಡೆಗಣಿಸುತ್ತಲೇ ಬಂದಿದ್ದಾರೆ ಎಂದಿದ್ದರೆ, ಇದು ಬದಲಾವಣೆ ಕುರಿತ ಜನರ ಆಶಾಭಾವನೆಯ ಪ್ರತೀಕ ಎಂದು ಬಿಜೆಪಿ ಹೇಳಿದೆ. 2020ರಲ್ಲಿ ಕೂಡ ಬಹುತೇಕ ಸಮೀಕ್ಷೆಗಳು ಉಲ್ಟಾ ಆಗಿದ್ದವು. ಹೀಗಾಗಿ ಈ ಬಾರಿಯೂ ಸಮೀಕ್ಷಾ ಸಂಸ್ಥೆಗಳ ಭವಿಷ್ಯದ ಕುರಿತು ಕುತೂಹಲ ಮೂಡಿದ್ದು, ಅದಕ್ಕೆ ಫೆ.8ರಂದು ಪ್ರಕಟವಾಗುವ ಫಲಿತಾಂಶ ಉತ್ತರ ನೀಡಲಿದೆ. 70 ಸ್ಥಾನಬಲ ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಹಾಲಿ ಆಮ್‌ಆದ್ಮಿ ಪಕ್ಷದ 62 ಮತ್ತು ಬಿಜೆಪಿ 8 ಸ್ಥಾನ ಹೊಂದಿವೆ. ಕಾಂಗ್ರೆಸ್‌ ತನ್ನ ಯಾವುದೇ ಶಾಸಕರನ್ನು ಹೊಂದಿಲ್ಲ.

ದೆಹಲಿ ಚುನಾವಣೆ Exit Polls ಫಲಿತಾಂಶ, ಬಿಜೆಪಿಗೆ ಅಧಿಕಾರ, ಆಪ್‌‌ಗೆ ಬೇಸರ, ಕಾಂಗ್ರೆಸ್ ತಿರಸ್ಕಾರ

ಯಾರಿಗೆ ಎಷ್ಟು ಸ್ಥಾನ?: ಮ್ಯಾಟ್ರೈಜ್‌ ಸಮೀಕ್ಷೆಯಲ್ಲಿ ಎನ್‌ಡಿಎ 3-40, ಆಪ್‌ 32-37, ಕಾಂಗ್ರೆಸ್‌ 0-1 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿದೆ. ಪೀಪಲ್ಸ್‌ ಪಲ್ಸ್‌ ಎನ್‌ಡಿಎಗೆ 51-60, ಆಪ್‌ಗೆ 10-19, ಕಾಂಗ್ರೆಸ್‌ 0 ಸ್ಥಾನದ ಭವಿಷ್ಯ ನುಡಿದಿದೆ. ಚಾಣಕ್ಯ ಬಿಜೆಪಿಗೆ 39-44, ಆಪ್‌ಗೆ 25-28, ಕಾಂಗ್ರೆಸ್‌ಗೆ 2-3 ಸ್ಥಾನ ನೀಡಿದೆ. ಪೀಪಲ್ಸ್‌ ಇನ್‌ಸೈಟ್‌ ಬಿಜೆಪಿಗೆ 40-44, ಆಪ್‌ಗೆ 25-29, ಕಾಂಗ್ರೆಸ್‌ಗೆ 0-1 ಸ್ಥಾನ ನೀಡಿದೆ. ಪಿ- ಮಾರ್ಕ್‌ ಬಿಜೆಪಿಗೆ 39-49, ಆಪ್‌ಗೆ 21-31, ಕಾಂಗ್ರೆಸ್‌ಗೆ 0-1 ಸ್ಥಾನ ನೀಡಿದೆ. ಜೆವಿಸಿ ಬಿಜೆಪಿಗೆ 39-45, ಆಪ್‌ಗೆ 22-31 ಮತ್ತು ಕಾಂಗ್ರೆಸ್‌ಗೆ 0-2 ಸ್ಥಾನ ನೀಡಿದೆ. ಡಿವಿ ರಿಸರ್ಚ್‌ ಬಿಜೆಪಿ 36-44, ಆಪ್‌ 26-34 ಮತ್ತು ಕಾಂಗ್ರೆಸ್‌ಗೆ ಶೂನ್ಯ ಸ್ಥಾನ ನೀಡಿದೆ. ಪೋಲ್‌ ಡೈರಿ ಸಂಸ್ಥೆ ಬಿಜೆಪಿ 42-50 ಸ್ಥಾನ, ಆಪ್‌ 18-25, ಕಾಂಗ್ರೆಸ್‌ 0-2 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಇನ್ನು ವೀ ಪ್ರಿಸೈಡ್‌ ಸಮೀಕ್ಷೆಯು ಆಪ್‌ಗೆ 46-52, ಬಿಜೆಪಿಗೆ 18-23, ಕಾಂಗ್ರೆಸ್‌ಗೆ 0-1 ಸ್ಥಾನ, ಮೈಂಡ್‌ ಬ್ರಿಂಕ್‌ ಮೀಡಿಯಾ ಸಂಸ್ಥೆ ಆಪ್‌ಗೆ 44-49, ಆಪ್‌ಗೆ 21-25 ಮತ್ತು ಕಾಂಗ್ರೆಸ್‌ಗೆ 0-1 ಸ್ಥಾನ ನೀಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ