
ದೆಹಲಿ(ಜು.21) ಸಂಬಳಕ್ಕಾಗಿ ದುಡಿದರೆ ಜೀವನ ಆರಕ್ಕೆರಲ್ಲ ಮೂರಕ್ಕಿಳಿಯಲ್ಲ, ಸ್ವಂತ ಏನಾದರು ಮಾಡಬೇಕು ಅನ್ನೋದು ಹಲವರ ಕನಸು. ಈ ಪೈಕಿ ಕೆಲವರು ಧೈರ್ಯ ಮಾಡುತ್ತಾರೆ, ಮತ್ತೆ ಕೆಲವರು ಯಶಸ್ಸ ಸಾಧಿಸುತ್ತಾರೆ. ಹೀಗೆ ಬೇರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾಕೆಗೆ ತಾನು ಯಾಕೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಬಾರದು, ಪ್ರಚಾರ, ಸ್ಟಾರ್ ಪಟ್ಟದ ಜೊತೆಗೆ ಕೈತುಂಬ ಹಣ ಎಣಿಸಬಾರದು ಅನ್ನೋ ಆಲೋಚನೆ ಬಂದಿದೆ. ಈ ಆಲೋಚನೆ ವರೆಗೂ ಎಲ್ಲವೂ ಸರಿ ಇದೆ. ಆದರೆ ಇದಕ್ಕಾಗಿ ಇಟ್ಟ ಮೊದಲ ಹೆಜ್ಜೆಯೆ ಮುಳ್ಳಾಗಿದೆ. ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಲು ಒಂದೊಳ್ಳೆ ಕ್ಯಾಮೆರಾ ಬೇಕು. ಇದಕ್ಕೆ ಲಕ್ಷ ರೂಪಾಯಿಯ ಅವಶ್ಯಕತೆ ಇದೆ. ಈ ಹಣಕ್ಕಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.
ದ್ವಾರಕದಲ್ಲಿ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಈ ನೀತು ಯಾದವ್, ತಾನು ಈ ಸಂಬಳದ ದುಡಿಮೆಯಲ್ಲಿದ್ದರೆ ಈ ಜನ್ಮದಲ್ಲಿ ಹೆಸರು ಮಾಡಲು ಸಾಧ್ಯವಿಲ್ಲ ಎಂದು ಅರಿತಿದ್ದಾಳೆ. ಇದು ಸೋಶಿಯಲ್ ಮೀಡಿಯಾ ಜಮಾನ. ರೀಲ್ಸ್ ಮಾಡಿ ಹಲವರು ಸ್ಟಾರ್ ಆಗಿದ್ದಾರೆ. ನಾನೇಕೆ ಆಗಬಾರದು, ನನ್ನಲ್ಲಿ ಸೌಂದರ್ಯವಿಲ್ಲವೇ? ಪ್ರತಿಭೆ ಇಲ್ಲವೇ? ಎಂದು ತನ್ನನ್ನು ತಾನು ಹುರಿದುಂಬಿಸುತ್ತಾ ರೀಲ್ಸ್ ಸ್ಟಾರ್ ಆಗಲು ಹೊರಟಿದ್ದಾಳೆ.
ಫೋಟೋಶೂಟ್ ವೇಳೆ ರೈಲಿನಿಂದ ಪ್ರಾಣಉಳಿಸಲು 90 ಅಡಿ ಎತ್ತರದ ಹಳಿಯಿಂದ ಹಾರಿದ ಜೋಡಿ!
ತನ್ನಲ್ಲಿರುವ ಮೊಬೈಲ್‌ನಲ್ಲಿ ಕ್ಯಾಮೆರಾ ಕ್ವಾಲಿಟಿ ಕಡಿಮೆ ಇದೆ. ಇದರಿಂದ ತನ್ನ ನೈಜ ಸೌಂದರ್ಯ ಜನರಿಗೆ ತಲುಪದೇ ಇರಬಹುದು. ಕ್ವಾಲಿಟಿಯಲ್ಲಿ ಕಾಂಪ್ರೈಸ್ ಇಲ್ಲವೇ ಇಲ್ಲ. ಹೀಗಾಗಿ ಡಿಎಸ್ಎಲ್ಆರ್ ಕ್ಯಾಮೆರಾ ಸೂಕ್ತ ಎಂದು ಅಂತಿಮ ನಿರ್ಧಾರಕ್ಕೆ ಬಂದಿದ್ದಾಳೆ. ಕ್ಯಾಮೆರಾ ಬೆಲೆ ಕೇಳಿದರೆ ಎಲ್ಲವೂ 1 ಲಕ್ಷ ರೂಪಾಯಿಗಿಂತ ಮೇಲಿದೆ. ಇಷ್ಟೊಂದು ಮೊತ್ತ ಹೊಂದಿಸಲು ಒಂದೇ ಮಾರ್ಗ. ಅದು ಕಳ್ಳತನ. ಹೇಗೂ ನಕಲಿ ವಿಳಾಸ ನೀಡಿ ಕೆಲಸ ಗಿಟ್ಟಿಸಿಕೊಂಡ ನೀತು ಯಾದವ್‌ಗೆ ಕಳ್ಳತನ ಹೊಸದೇನಲ್ಲ. ಆದರೆ ಇಷ್ಟು ಮೊತ್ತ ಮಾತ್ರ ಹೊಸದು.
ತಾನು ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಒಡವೆ, ನಗದು ಎಲ್ಲಿದೆ, ಎಲ್ಲಿಂದ ಕಳ್ಳತನ ಮಾಡಬೇಕು ಅನ್ನೋದನ್ನು ಪಕ್ಕಾ ತಿಳಿದುಕೊಂಡಿದ್ದಾಳೆ. ಜುಲೈ 15 ರಂದು ಮಾಲೀಕರ ಮನೆಯಿಂದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾಳೆ. ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗುತ್ತಿದ್ದಂತೆ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಷ್ಟೇ ಅಲ್ಲ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಿಚ್ ಆಫ್ ಆಗಿದ್ದ ನೀತು ಯಾದವ್ ಫೋನ್ ಟ್ರೇಸ್ ಮಾಡಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆಕೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತಳಿಂದ ನಗದು, ಒಡವೆ ವಶಪಡಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಕೊಂಡಿದ್ದ 4 ತಿಂಗಳ ಗರ್ಭಿಣಿ ಮಹಿಳೆ ಅನುಮಾನಾಸ್ಪದ ಸಾವು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ