ಕಳೆದ ನವೆಂಬರ್‌ನಲ್ಲಿ ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಹಿರಿಯ ಮಹಿಳೆಯ ಮೇಲೆ ಮೂತ್ರ ಮಾಡಿದ ಘಟನೆಯಲ್ಲಿ ಆರೋಪಿ ಶಂಕರ್ ಮಿಶ್ರಾಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ನವದೆಹಲಿ (ಜ.31): ನವೆಂಬರ್ ತಿಂಗಳಿನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಿರಿಯ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಉದ್ಯಮಿ ಶಂಕರ್ ಮಿಶ್ರಾಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಜನವರಿ 7 ರಂದು ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿದ್ದ ಮಿಶ್ರಾ ಅವರಿಗೆ ₹ 1 ಲಕ್ಷ ಬಾಂಡ್ ಮತ್ತು ಅಷ್ಟೇ ಮೊತ್ತದ ಒಂದು ಶ್ಯೂರಿಟಿ ಮೇಲೆ ಜಾಮೀನು ನೀಡಲಾಯಿತು. ನ್ಯಾಯಮೂರ್ತಿ ಹರ್‌ಜ್ಯೋತ್ ಸಿಂಗ್ ಭಲ್ಲಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಿದ್ದಾರೆ. ಪ್ರಕರಣದಲ್ಲಿ ಈವರೆಗೆ ವಿಮಾನದ ನಾಲ್ವರು ಏರ್ ಇಂಡಿಯಾ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಇನ್ನೂ ಐವರನ್ನು ತನಿಖೆಗೆ ಒಳಪಡಿಸಿದ್ದು, ಹೇಳಿಕೆಯನ್ನು ದಾಖಲಿಸುವಂತೆ ಕೇಳಿಕೊಳ್ಳಲಾಗಿದೆ. ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿಯ ಪಟಿಯಾಲ ಹೌಸ್ ಕೋರ್ಟ್, ಜಾಮೀನು ಕುರಿತಾದ ಆದೇಶವನ್ನು ಕಾಯ್ದಿರಿಸಿತ್ತು. ನವೆಂಬರ್ 26 ರ ಘಟನೆಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಅವಮಾನಕ್ಕೆ ಕಾರಣವಾಗಿದೆ ಎಂದು ವಾದಿಸಿದ ದೆಹಲಿ ಪೊಲೀಸರು ಆರೋಪಿಗಳಿಗೆ ಜಾಮೀನನ್ನು ವಿರೋಧಿಸಿದ್ದರು. ಮಿಶ್ರಾ ಅವರು ಮಾಡಿರುವುದು ಅಸಹ್ಯಕರವಾಗಿದ್ದರೂ, ಕಾನೂನಿನ ಪ್ರಕಾರ ವ್ಯವಹರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವ ಮೂಲಕ ಮಿಶ್ರಾ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದರು. ಪೊಲೀಸರು ಅವರ ವಿಳಾಸವನ್ನು ಕೇಳಿದಾಗ ಕಚೇರಿಯ ವಿಳಾಸವನ್ನು ನೀಡಿ ದಾರಿ ತಪ್ಪಿಸಿದ್ದರು ಎಂದು ದೆಹಲಿ ಪೊಲೀಸರು ವಾದಿಸಿದ್ದರು. ಅವರ ಮುಂಬೈ ನಿವಾಸವನ್ನು ಸಂಪರ್ಕಿಸಿದಾಗ ಅವರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆತನ ಫೋನ್‌ನ ಐಎಂಇಐ ನಂಬರ್ ಮೂಲಕ ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ನಂತರ ಬಂಧಿಸಲಾಯಿತು. ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಗಳು ಪರಸ್ಪರ ವಿರುದ್ಧವಾಗಿವೆ ಮತ್ತು ಸಾಕ್ಷಿಗಳು ದೆಹಲಿ ಪೊಲೀಸರ ಪರವಾಗಿ ಹೇಳಿಕೆ ನೀಡುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಿಶ್ರಾ ಅವರನ್ನು ಏರ್ ಇಂಡಿಯಾ ನಾಲ್ಕು ತಿಂಗಳ ಕಾಲ ವಿಮಾನಯಾನ ಮಾಡದಂತೆ ನಿಷೇಧಿಸಿದೆ. ಈ ಹಿಂದೆ, ಅಶಿಸ್ತಿನ ಪ್ರಯಾಣಿಕರನ್ನು ಕೇವಲ 30 ದಿನಗಳವರೆಗೆ ನಿಷೇಧಿಸಬಹುದು ಎಂದು ವಿಮಾನಯಾನ ಸಂಸ್ಥೆ ಹೇಳಿದ್ದರಿಂದ ಅವರನ್ನು ಕೇವಲ 30 ದಿನಗಳ ಅವಧಿಗೆ ನಿಷೇಧಿಸಲಾಗಿತ್ತು.
ಮೂತ್ರ ಮಾಡಿದ್ದು ಉದ್ಯಮಿ: 30 ಲಕ್ಷ ದಂಡ ಏರ್ ಇಂಡಿಯಾಗೆ
ಏರ್ ಇಂಡಿಯಾಗೆ 30 ಲಕ್ಷ ದಂಡ: ಈ ಘಟನೆಯ ನಂತರ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 30 ಲಕ್ಷ ದಂಡ ವಿಧಿಸಿದೆ. ಅಲ್ಲದೆ, ಪೈಲಟ್ ಪರವಾನಗಿಯನ್ನು 3 ತಿಂಗಳವರೆಗೆ ಅಮಾನತುಗೊಳಿಸಲಾಗಿದೆ. ಮತ್ತೊಂದೆಡೆ, ಏರ್‌ಲೈನ್ಸ್ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಜನವರಿ ಮೊದಲ ವಾರದಲ್ಲಿಯೇ 4 ಸಿಬ್ಬಂದಿ ಮತ್ತು ಪೈಲಟ್ ಅನ್ನು ಕರ್ತವ್ಯದಿಂದ ತೆಗೆದುಹಾಕಿದ್ದಾರೆ. ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ವಿಮಾನಯಾನ ಸಂಸ್ಥೆಗಳು ತಮ್ಮ ಆಲ್ಕೋಹಾಲ್ ಸೇವಾ ನೀತಿಗಳನ್ನು ಸಹ ಪರಿಶೀಲಿಸುತ್ತಿವೆ. ವಿಮಾನದಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ಈ ವಿಷಯಗಳನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಏರ್ ಇಂಡಿಯಾ ಒಪ್ಪಿಕೊಂಡಿದೆ.
ನಾನು ಮಾಡಿಲ್ಲ, ಮಹಿಳೆಯೇ ಆಕೆ ಮೇಲೆ ಮೂತ್ರ ಮಾಡಿಕೊಂಡಿದ್ದಾಳೆ, ಶಂಕರ್ ಮಿಶ್ರಾ ಟೂ ಟರ್ನ್!
ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಮೂತ್ರ ವಿಸರ್ಜನೆ ಘಟನೆ ಬಳಿಕ ಸಹ ಪ್ರಯಾಣಿಕರೊಬ್ಬರ ಹೇಳಿಕೆ ಕೂಡ ಮುನ್ನಲೆಗೆ ಬಂದಿತ್ತು. ಈ ಪ್ರಯಾಣಿಕ ಸುಗತ ಭಟ್ಟಾಚಾರ್ಜಿ. ಊಟದ ನಂತರ ಈ ಘಟನೆ ನಡೆದಿದೆ ಎಂದು ತಿಳಿಸಿದರು. ಆರೋಪಿ ಶಂಕರ್ ಮಿಶ್ರಾ 4 ಬಾರಿ ಮದ್ಯ ಸೇವನೆ ಮಾಡಿದ್ದ. ಆಗ ಅವರು ಪದೇ ಪದೇ ಭಟ್ಟಾಚಾರ್ಜಿಯವರಿಗೂ ಪ್ರಶ್ನೆಗಳನ್ನು ಕೇಳುತ್ತಿದ್ದರು. ಊಟ ಮುಗಿಸಿದ ಭಟ್ಟಾಚಾರ್ಯರು ವಿಮಾನದ ಸಿಬ್ಬಂದಿಯನ್ನು ಶಂಕರ್ ಮೇಲೆ ನಿಗಾ ಇಡುವಂತೆ ಹೇಳಿದರು.