
ನವದೆಹಲಿ (ಮಾ.15): ತಾಯಿಯ ಗರ್ಭದಲ್ಲಿ ಒಂದು ಪುಟ್ಟ ದ್ರಾಕ್ಷಿಯಷ್ಟು (ಎರಡೂವರೆಯಿಂದ ಮೂರು ತಿಂಗಳು) ಚಿಕ್ಕದಾಗಿ ಬೆಳೆದಿದ್ದ ಮಗುವಿನ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಯನ್ನು ದೆಹಲಿಯ ಏಮ್ಸ್ ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ. ಬಲೂನ್ ಡೈಲೇಶನ್ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ಮಗುವಿನ ಹೃದಯದ ಮುಚ್ಚಿದ ಕವಾಟವನ್ನು ವೈದ್ಯರು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಅಪಾಯದ ಈ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಬರೀ 90 ಸೆಕೆಂಡ್‌ಗಳಲ್ಲಿ ಮಾಡಿದ್ದು, ತಾಯಿ ಹಾಗೂ ಮಗುವಿನ ಆರೋಗ ಕ್ಷೇಮವಾಗಿದೆ. ಎಐಐಎಂಎಸ್‌ನ ಕಾರ್ಡಿಯೊಥೊರಾಸಿಕ್ ಸೈನ್ಸ್ ಸೆಂಟರ್‌ನಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಏಮ್ಸ್‌ನ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದೆ. ಈಗ ಆಸ್ಪತ್ರೆಯ ವೈದ್ಯರ ತಂಡಗಳು ಮಗುವಿನ ಹೃದಯದ ಕವಾಟಗಳ ಬೆಳವಣಿಗೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದೆ. 28 ವರ್ಷದ ಮಹಿಳೆ ಇತ್ತೀಚೆಗೆ ಆಸ್ಪತ್ರೆಗೆ ಎಂದಿನ ಪರೀಕ್ಷೆಗೆ ದಾಖಲಾಗಿದ್ದಳು. ಈ ವೇಳೆ ವೈದ್ಯರು ಆಕೆಗೆ ಹೊಟ್ಟೆಯಲ್ಲಿರುವ ಮಗುವಿನ ಹೃದಯದ ಕವಾಟ ಮುಚ್ಚಿರುವುದನ್ನು ತಿಳಿಸಿದ್ದಾರೆ. ಈ ಹಿಂದೆ ಮೂರು ಗರ್ಭಪಾತವನ್ನು ಎದುರಿಸಿದ್ದ ಮಹಿಳೆ, ಈ ಬಾರಿ ಮಗುವನ್ನು ಉಳಿಸಿಕೊಳ್ಳಲೇಬೇಕು ಎಂದು ತೀರ್ಮಾನ ಮಾಡಿದ್ದಳು. ಆದರೆ, ಮಗುವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಗರ್ಭದಲ್ಲಿರುವ ಮಗುವಿಗೆ ಸಣ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ಆದರೆ, ಮಗು ಉಳಿಯುತ್ತದೆ ಎಂದಾದಲ್ಲಿ ಎಲ್ಲದಕ್ಕೂ ಸಿದ್ದ ಎಂದಿದ್ದ ಮಹಿಳೆ ಹಾಗೂ ಆಕೆಯ ಪತಿ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು.
ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೂ ಕೆಲವು ಗಂಭೀರ ಸ್ವರೂಪದ ಹೃದ್ರೋಗಗಳನ್ನು ಕಂಡುಹಿಡಿಯಬಹುದು ಎಂದು ವೈದ್ಯರ ತಂಡ ಹೇಳಿದೆ. ಗರ್ಭಾಶಯದಲ್ಲಿಯೇ ಇವುಗಳನ್ನು ಸರಿಪಡಿಸಿದರೆ, ಜನನದ ನಂತರ ಮಗುವಿನ ಉತ್ತಮ ಆರೋಗ್ಯ ಮತ್ತು ಮಗುವಿನ ಸಾಮಾನ್ಯ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
25 ವರ್ಷದ ಯುವಕನ ಹೊಟ್ಟೆಯಿಂದ 56 ಬ್ಲೇಡ್ ತುಂಡು ತೆಗೆದ ವೈದ್ಯರು
ಬಲೂನ್ ಡೈಲೇಷನ್ ಶಸ್ತ್ರಚಿಕಿತ್ಸೆ: ಮಗುವಿಗೆ ಮಾಡಿದ ಶಸ್ತ್ರಚಿಕಿತ್ಸೆಯ ಹೆಸರು ಬಲೂನ್ ಡೈಲೇಶನ್ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಈ ವಿಧಾನವನ್ನು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ ನಾವು ತಾಯಿಯ ಹೊಟ್ಟೆಯ ಮೂಲಕವಾಗಿ ಮಗುವಿನ ಹೃದಯಕ್ಕೆ ಸೂಜಿಯನ್ನು ಹಾಕಿದ್ದೆವು. ಬಲೂನ್ ಕ್ಯಾತಿಟರ್ ಸಹಾಯದಿಂದ, ನಾವು ಉತ್ತಮ ರಕ್ತದ ಹರಿವನ್ನು ಅನುಮತಿಸಲು ಮುಚ್ಚಿದ ಕವಾಟವನ್ನು ತೆರೆದಿದ್ದೆವು. ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಹೃದಯವು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ ಮತ್ತು ಜನನದ ಸಮಯದಲ್ಲಿ ಹೃದ್ರೋಗಗಳ ಅಪಾಯವು ಕಡಿಮೆಯಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದೇವೆ ಎಂದಿದ್ದಾರೆ.
ಗಡ್ಡೆಯಿದೆ ಎಂದು ರೋಗಿಯ ಗುಪ್ತಾಂಗ ಕತ್ತರಿಸಿದ ವೈದ್ಯ, ನಂತ್ರ ಹಾಗೇನೂ ಇರ್ಲಿಲ್ಲ Sorry ಅಂದ್ಬಿಟ್ಟ!
ಇಂಥ ಶಸ್ತ್ರಚಿಕಿತ್ಸೆ ಅಪಾಯಕಾರಿ: ತಂದೆ-ತಾಯಿ ಒಪ್ಪಿದ ಕಾರಣ ಇಂಥ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಬಹಳ ಎಚ್ಚರಿಕೆಯಿಂದ ಈ ಕಾರ್ಯ ಮಾಡಿದ್ದೇವೆ ಎಂದು ಹೃದ್ರೋಗ ವಿಜ್ಞಾನ ಕೇಂದ್ರದ ತಂಡದ ಹಿರಿಯ ವೈದ್ಯರು ತಿಳಿಸಿದ್ದಾರೆ. ಇವೆಲ್ಲವೂ ಆಂಜಿಯೋಪ್ಲ್ಯಾಸ್ಟಿ ಅಡಿಯಲ್ಲಿ ಬರುತ್ತದೆ. ಆದರೆ, ಇದನ್ನೂ ಸಂಪೂರ್ಣವಾಗಿ ಆಂಜಿಯೋಪ್ಲ್ಯಾಸ್ಟಿ ಅಡಿಯಲ್ಲಿ ಮಾಡಲಾಗುವುದಿಲ್ಲ. ಈ ಸಂಪೂರ್ಣ ವಿಧಾನವನ್ನು ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ ಮತ್ತು ಹೃದಯದ ಚೇಂಬರ್ ಪಂಕ್ಚರ್ ಆಗುವುದರಿಂದ ಇದನ್ನು ಬೇಗನೆ ಮಾಡಬೇಕು. ಇದರಲ್ಲಿ ಏನಾದರೂ ತಪ್ಪಾದರೆ ಅಥವಾ ಹೆಚ್ಚು ಸಮಯ ತೆಗೆದುಕೊಂಡರೆ ಮಗುವಿನ ಪ್ರಾಣವೂ ಹೋಗಬಹುದು. ಆದ್ದರಿಂದ ತ್ವರಿತವಾಗಿ ಮತ್ತು ನಿಖರವಾದ ಅಂದಾಜಿನೊಂದಿಗೆ ನಿರ್ವಹಿಸಲಾಗುತ್ತದೆ. ನಾವು ಈ ವಿಧಾನವನ್ನು 90 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ ದೆಹಲಿಯ ಏಮ್ಸ್ ವೈದ್ಯರಿಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಬರೀ 90 ಸೆಕೆಂಡ್‌ನಲ್ಲಿ ದ್ರಾಕ್ಷಿಯಷ್ಟು ಸಣ್ಣದಾದ ಭ್ರೂಣಕ್ಕೆ ಗರ್ಭದಲ್ಲಿಯೇ ತೀರಾ ಅಪರೂಪದ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿದ ದೆಹಲಿಯ ಏಮ್ಸ್ ವೈದ್ಯರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಆ ತಾಯಿ ಹಾಗೂ ಮಗು ಕ್ಷೇಮವಾಗಿರಲಿ' ಎಂದು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ