
ನವದೆಹಲಿ (ಮಾ.8): ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯ ನಡುವೆ ನಮಾಜ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗಳನ್ನು ಒದ್ದು ಕಳಿಸಿರುವ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ, ತನಿಖೆಗೆ ಆದೇಶ ನೀಡಲಾಗಿದೆ. ನವದೆಹಲಿಯ ಇಂದರ್‌ಲೋಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಕುರಿತಾಗಿ ತನಿಖೆಗೆ ಆದೇಶ ನೀಡಲಾಗಿದ್ದು, ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ದೆಹಲಿಯ ಉತ್ತರ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ರಾಜಕೀಯ ನಾಯಕರು ಹಾಗೂ ವಿವಿಧ ಗಣ್ಯರು ವ್ಯಾಪಕವಾಗಿ ಹಂಚಿಕೊಂಡಿರುವ ವೈರಲ್ ವಿಡಿಯೋದಲ್ಲಿ ಕೆಲವು ಮುಸ್ಲಿಂ ವ್ಯಕ್ತಿಗಳು ನಡುರಸ್ತೆಯಲ್ಲೇ ನಮಾಜ್ ಮಾಡಲು ಆರಂಭಿಸಿದ್ದಾರೆ. ಈ ಹಂತದಲ್ಲಿ ಅಲ್ಲಿಗೆ ಬರುವ ಪೊಲೀಸ್ ಅಧಿಕಾರಿ, ನಮಾಜ್ ಮಾಡುತ್ತಿದ್ದ ವ್ಯಕ್ತಿಗಳನ್ನು ಕಾಲಿನಿಂದ ಒದ್ದಿದ್ದಾರೆ. ಕೆಲವೊಬ್ಬರನ್ನು ಗುದ್ದಿದ ಅವರು ಅಲ್ಲಿಂದ ಮೇಲೇಳುವಂತೆ ಹೇಳಿದ್ದಾರೆ. ಈ ವೇಲೆ ಅಲ್ಲಿದ್ದ ಒಬ್ಬ ವ್ಯಕ್ತಿ ಇಡೀ ಘಟನೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವೇಳೆ ಸಾಕಷ್ಟು ಮಂದಿ ಪೊಲೀಸ್ ಅಧಿಕಾರಿಯ ದರ್ಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬೆನ್ನಲ್ಲಿಯೇ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ವ್ಯಕ್ತಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಪ್ರಾರ್ಥನೆಯ ಸಮಯದಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಘಟನೆಯ ವೀಡಿಯೊದಲ್ಲಿ ಅವರಲ್ಲಿ ಒಬ್ಬರು ಪ್ರಾರ್ಥನೆಗಾಗಿ ಮಂಡಿಯೂರಿ ಕುಳಿತಿದ್ದ ಮುಸ್ಲಿಂ ವ್ಯಕ್ತಿಗಳನ್ನು ಕಾಲಿನಿಂದ ಒದ್ದಿದ್ದಲ್ಲದೆ, ಅವರ ಮೇಲೆ ಹಲ್ಲೆ ಮಾಡಿರುವುದು ಕಂಡಿದೆ. ಘಟನೆಗೆ ಪ್ರತಿಕ್ರಿಯೆಯಾಗಿ ಉತ್ತರ ಡಿಸಿಪಿ ಮನೋಜ್ ಮೀನಾ ಅವರು ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಕಾಲೇಜಿನಲ್ಲಿ ನಮಾಜ್‌ಗೆ ಅನುಮತಿ ನಿರಾಕರಣೆ, ಮುಸ್ಲಿಮ್ ವಿದ್ಯಾರ್ಥಿನಿಯರ ಪ್ರತಿಭಟನೆ!
ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪಘರ್ಹಿ ಅವರು ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ, "ಈ ದಿಲ್ಲಿ ಪೊಲೀಸ್ ಸೈನಿಕ ನಮಾಜ್ ಮಾಡುವಾಗ ಒಬ್ಬ ವ್ಯಕ್ತಿಯನ್ನು ಒದೆಯುವುದು ಬಹುಶಃ ಮಾನವೀಯತೆಯ ಮೂಲ ತತ್ವಗಳನ್ನು ಅರ್ಥಮಾಡಿಕೊಂಡಿಲ್ಲ ಎನ್ನುವುದು ಕಂಡಿದೆ. ಈ ಯೋಧನ ಹೃದಯದಲ್ಲಿ ತುಂಬಿರುವ ಈ ದ್ವೇಷ ಏನು? ದೆಹಲಿ ಈ ಅಧಿಕಾರಿ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರ ಸೇವೆಯನ್ನು ವಜಾಗೊಳಿಸುವಂತೆ ಪೊಲೀಸರಿಗೆ ವಿನಂತಿಸಲಾಗಿದೆ' ಎಂದು ಬರೆದಿದ್ದಾರೆ.
ಶುಕ್ರವಾರದ ನಮಾಜ್ ಬೆನ್ನಲ್ಲೇ, ಜ್ಞಾನವಾಪಿ ವಿಚಾರದಲ್ಲಿ ಜೈಲ್ ಭರೋಗೆ ಕರೆ ನೀಡಿದ ಮುಸ್ಲಿಂ ಧರ್ಮಗುರು!
ಘಟನೆಯ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ (ಉತ್ತರ) ಎಂಕೆ ಮೀನಾ, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ. ಏತನ್ಮಧ್ಯೆ, ಘಟನೆಯ ನಂತರ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಂದರ್‌ಲೋಕ್ ಪ್ರದೇಶದ ವಿಡಿಯೋ ಕಾರಣದಿಂದಾಗಿ ಜನರು ರಸ್ತೆಗೆ ಇಳಿಸಿದ್ದಾರೆ. ಇದರಿಂದಾಗಿ ಸಾಕಷ್ಟು ಪೊಲೀಸ್ ಪಡೆಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ