Rajnath Singh : ಕರ್ನಲ್ ಹೋಶಿಯಾರ್ ಸಿಂಗ್ ಪತ್ನಿಯ ಕಾಲಿಗೆ ನಮಸ್ಕರಿಸಿದ ರಕ್ಷಣಾ ಮಂತ್ರಿ!

By Suvarna News  |  First Published Dec 15, 2021, 12:00 PM IST

1971ರ ಭಾರತ-ಪಾಕಿಸ್ತಾನ ಯುದ್ಧದ ವಿಜಯಕ್ಕೆ 50 ವರ್ಷ
ಈ ಯುದ್ಧದಲ್ಲಿ ಸಾಹಸ ಮೆರೆದಿದ್ದ ಕರ್ನಲ್ ಹೋಶಿಯಾರ್ ಸಿಂಗ್
ಗೌರವಪೂರ್ವಕವಾಗಿ ಹೋಶಿಯಾರ್ ಸಿಂಗ್ ಪತ್ನಿಯ ಕಾಲಿಗೆ ನಮಸ್ಕರಿಸಿದ ರಾಜನಾಥ್ ಸಿಂಗ್


ನವದೆಹಲಿ (ಡಿ.15): ನೆರೆಯ ಪಾಕಿಸ್ತಾನ ವಿರುದ್ಧ 1971ರಲ್ಲಿ (1971 War)ನಡೆದ ಯುದ್ಧದ ಸ್ಮರಣೀಯ ಗೆಲುವಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಎರಡು ದಿನಗಳ ಸಂಭ್ರಮಾಚರಣೆಯ ಕೊನೆಯ ಹಂತದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯುದ್ಧದಲ್ಲಿ ಹೋರಾಡಿದ್ದ ಸೈನಿಕರು ಹಾಗೂ ಯುದ್ಧದ ಬಳಿಕ ಶೌರ್ಯ ಪದಕ ವಿಜೇತರಾದ ಸೈನಿಕರ ಕುಟುಂಬದವರನ್ನೂ ಭೇಟಿ ಮಾಡಿದರು. 1971ರ ಯುದ್ಧದಲ್ಲಿ ತಮ್ಮ ಅಪರಿಮಿತ ಶೌರ್ಯದ ಕಾರಣದಿಂದಾಗಿ ಪರಮವೀರ ಚಕ್ರ (Param Vir Chakra)ಪುರಸ್ಕಾರ ಪಡೆದಿದ್ದ ಕರ್ನಲ್ ಹೋಶಿಯಾರ್ ಸಿಂಗ್  (Col Hoshiar Singh ) ಅವರ ಪತ್ನಿ ಧನ್ನೋ ದೇವಿ  (Dhanno Devi) ಅವರನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್ (Rajnath Singh), ಅವರ ಕಾಲಿಗೆ ನಮಸ್ಕರಿಸುವ ಮೂಲಕ ಗೌರವ ತೋರಿದರು. ಇತರ ಮಾಜಿ ಸೈನಿಕರ ಕುಟುಂಬದವರೂ ಮಾತ್ರವಲ್ಲದೆ, ಬಾಂಗ್ಲಾದೇಶದ 30 ಮುಕ್ತಿ ಜೋಧಾಸ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಯುದ್ಧದಲ್ಲಿ ಪಾಕಿಸ್ತಾನ (Pakistan) ವಿರುದ್ಧದ ಗೆಲುವಿನೊಂದಿಗೆ ಹೊಸ ರಾಷ್ಟ್ರವಾಗಿ ಬಾಂಗ್ಲಾದೇಶ ಉದಯವಾಗಿತ್ತು. "1971ರ ಯುದ್ಧದಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ ಭಾರತೀಯ ಸೇನೆಯ ಯೋಧರು ಹಾಗೂ ಬಾಂಗ್ಲಾದೇಶದ (Bangladesh) ಮುಕ್ತಿಜೋಧಾಸ್ ಅವರೊಂದಿಗೆ ಒಳ್ಳೆಯ ಕೆಲ ಕ್ಷಣಗಳನ್ನು ಕಳೆದೆ. ಭಾರತೀಯ ಸಶಸ್ತ್ರ ಪಡೆಗಳು ತಮ್ಮ ವೀರಾವೇಶದ ಹೋರಾಟದಲ್ಲಿ ಧೈರ್ಯಶಾಲಿ ಮುಕ್ತಿಜೋದ್ಧರೊಂದಿಗೆ ಒಟ್ಟಾಗಿ ಕೆಲಸ ಮಾಡಿದವು" ಎಂದು ರಾಜನಾಥ್ ಸಿಂಗ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಭಾಷಣದಲ್ಲಿ ಸೇನೆಯ ಯೋಧರ ಸಾಹಸಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ರಾಜನಾಥ್ ಸಿಂಗ್, ನೌಕಾಪಡೆ ಹಾಗೂ ವಾಯುಪಡೆಯ ಸೈನಿಕರ ಸಾಹಸಗಳನ್ನು ನೆನೆಸಿಕೊಂಡರು. ದೇಶದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಇವರೆಲ್ಲ ಅಪ್ರತಿಮ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
 

Defence Minister Rajnath Singh touched the feet of wife of Colonel Hoshiar Singh who was decorated with Param Vir Chakra for exhibiting exemplary courage in the 1971 war. The Defence Minister met her at Vijay Parv Samapan Samaroh in New Delhi today. pic.twitter.com/tjm9oakyKm

— ANI (@ANI)


ಇದೇ ಯುದ್ಧದ ಹೀರೋಗಳಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ (Field Marshal Sam Manekshaw), ಲೆಫ್ಟಿನೆಂಟ್ ಜನರಲ್ ಜಗಜೀತ್ ಸಿಂಗ್ ಅರೋರಾ (Lt Gen Jagjit Singh Aurora) (ಅಂದು ಈಸ್ಟರ್ನ್ ಕಮಾಂಡ್ ನ ಕಮಾಂಡಿಂಗ್ ಇನ್ ಚೀಫ್ ಜನರಲ್ ಆಫೀಸರ್), ಲೆಫ್ಟಿನೆಂಟ್ ಜನರಲ್ ಜೆಎಫ್ ಆರ್ ಜಾಕೋಬ್ (Lt Gen JFR Jacob) ಹಾಗೂ ಏರ್ ಮಾರ್ಷಲ್ ಇದ್ರಿಸ್ ಹಸನ್ ಲತೀಫ್ (Air Marshal Idris Hassan Latif) ಸೇರಿದಂತೆ ಹಲವರನ್ನು ಸ್ಮರಿಸಿದರು.

ಕರ್ನಲ್ ಹೋಶಿಯಾರ್ ಸಿಂಗ್ ಸಾಹಸವೇನು?
1971ರ ಡಿಸೆಂಬರ್ 15ರಂದು ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ನಡುವೆ ಹರಿಯುವ ಬಸಂತರ್ (Basantar) ನದಿಗೆ ಅಡ್ಡಲಾಗಿ ಬ್ರಿಜ್ ಹೆಡ್ ಅನ್ನು ಸ್ಥಾಪಿಸುವ ಗುರಿಯನ್ನು ಕರ್ನಲ್ ಹೋಶಿಯಾರ್ ಸಿಂಗ್ ನೇತೃತ್ವದ 3 ಗ್ರೆನೇಡಿಯರ್ಸ್ (3 Grenadiers ) ಬೆಟಾಲಿಯನ್ ಗೆ ನೀಡಲಾಗಿರುತ್ತದೆ. ವೈರಿ ಸೈನಿಕರ ಜಮಾವಣೆ ಈ ಪ್ರದೇಶದಲ್ಲಿ ಅಧಿಕವಾಗಿದ್ದ ಸಮಯ. ಕಮಾಂಡಿಗ್ ಆಫೀಸರ್ ಆಗಿದ್ದ ಹೋಶಿಯಾರ್ ಸಿಂಗ್ ಅವರ ಸಿ ಕಂಪನಿ ಜರ್ಪಾಲ್ ಪ್ರದೇಶದಲ್ಲಿ ಶತ್ರು ಸೈನಿಕರ ಮೇಲೆ ದಾಳಿ ನಡೆಸಲು ಆರಂಭಿಸುತ್ತದೆ.

IAF Chopper Crash: ಟೇಕಾಫ್‌ನಿಂದ ಪತನದವರೆಗೆ, ಸಂಸತ್‌ನಲ್ಲಿ ಸಂಪೂರ್ಣ ಮಾಹಿತಿ ಕೊಟ್ಟ ರಾಜನಾಥ್ ಸಿಂಗ್!
 ಶತ್ರುಗಳ ಕಡೆಯಿಂದಲೂ ಭೀಕರ ಶೆಲ್ಲಿಂಗ್ ಹಾಗೂ ಕ್ರಾಸ್ ಫೈರಿಂಗ್. ಇದರಲ್ಲಿ ಸಾಕಷ್ಟು ಭಾರತೀಯ ಸೈನಿಕರು ಸಾವನ್ನಪ್ಪಿದ್ದರೂ ಧೃತಿಗೆಡದೇ, ಎದುರಾಳಿ ಪಡೆಯ ಬಂಕರ್ ಗಳನ್ನು ನಾಶ ಮಾಡುವುದಲ್ಲದೆ ಎದುರಾಳಿ ಕಡೆಯಲ್ಲಿ ಸಾಕಷ್ಟು ಹಾನಿಗೆ ಬೆಟಾಲಿಯನ್ ಕಾರಣವಾಗುತ್ತದೆ. ಇದರಿಂದ ರೊಚ್ಚಿಗೆದ್ದ ಪಾಕಿಸ್ತಾನ ಡಿಸೆಂಬರ್ 17ಕ್ಕೆ ತನ್ನ ದಾಳಿಯನ್ನು ಇನ್ನಷ್ಟು ತೀವ್ರ ರೂಪಕ್ಕೆ ಕೊಂಡೊಯ್ಯುತ್ತದೆ. ಗಾಯಾಳುವಾಗಿದ್ದರೂ ಎದುರಾಳಿ ಪಡೆಯ ಫೈರಿಂಗ್, ಶೆಲ್ಲಿಂಗ್ ಅನ್ನು ಲೆಕ್ಕಿಸದೇ ತಮ್ಮ ಸೈನಿಕರನ್ನು ಹುರಿದುಂಬಿಸಲು ಹೋಶಿಯಾರ್ ಸಿಂಗ್ ಯಶಸ್ವಿಯಾಗಿದ್ದರಿಂದ ಎದುರಾಳಿ ಪಡೆಯ ಕಮಾಂಡಿಂಗ್ ಆಫೀಸರ್, ಮೂವರು ಪ್ರಮುಖ ಅಧಿಕಾರಿಗಳು ಸೇರಿದಂತೆ ಎದುರಾಳಿ ಪಡೆಯ 85 ಮಂದಿ ಸಾವಿಗೀಡಾಗುತ್ತಾರೆ. ಎದುರಾಳಿಯ ಪಡೆಯ ಶೆಲ್ ಅನ್ನು ಹೊರಹಾಕುವ ಯತ್ನದಲ್ಲಿ ತೀವ್ರ ರೂಪದಲ್ಲಿ ಗುಂಡೇಟು ತಿಂದಿದ್ದ ಹೋಶಿಯಾರ್ ಸಿಂಗ್, ಕದನ ವಿರಾಮ ಆಗುವವರೆಗೂ ತಮ್ಮನ್ನು ಆ ಸ್ಥಳದಿಂದ ಸ್ಥಳಾಂತರ ಮಾಡದೇ ಇರುವಂತೆ ಕೇಳಿಕೊಂಡಿದ್ದರು. ಒಟ್ಟಾರೆ ಈ ಆಪರೇಷನ್ ನಲ್ಲಿ ಹೋಶಿಯಾರ್ ಸಿಂಗ್ ಅವರ ಧೈರ್ಯ, ಶೌರ್ಯವನ್ನು ಮೆಚ್ಚಿ ಕೇಂದ್ರ ಸರ್ಕಾರ ಪರಮವೀರ ಚಕ್ರ ಪುರಸ್ಕಾರವನ್ನು ನೀಡಿತ್ತು.

Latest Videos

click me!