
ರಾಯಸೇನ್ : ಭಾರತದ ಆರ್ಥಿಕತೆ ಜಗತ್ತಿನಲ್ಲಿಯೇ ಅತ್ಯಂತ ಚುರುಕಾದ ಮತ್ತು ಕ್ರಿಯಾತ್ಮಕವಾದ ಆರ್ಥಿಕತೆಯಾಗಿದೆ. ಸಬ್ ಕಾ ಬಾಸ್ (ತಾವೇ ಎಲ್ಲರ ಬಾಸ್) ಎಂದು ಭಾವಿಸುವವರಿಂದ ಭಾರತದ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಮೂಲಕ ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿ ಅಸಹಿಷ್ಣುತೆ ತೋರುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಮಧ್ಯಪ್ರದೇಶದ ರಾಯಸೇನ್‌ನಲ್ಲಿ ಭಾರತ್ ಅರ್ಥ್ ಮೂವರ್ಸ್ ಲಿ.ನ ರೈಲ್ವೆ ಬೋಗಿ ತಯಾರಿಕಾ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಿಂಗ್, ‘ಯಾವುದೇ ದೇಶ ಚುರುಕಾದ ಮತ್ತು ಕ್ರಿಯಾತ್ಮಕವಾದ ಆರ್ಥಿಕತೆ ಹೊಂದಿದ್ದರೆ ಅದು ಭಾರತ ಮಾತ್ರ. ಆದರೆ ಭಾರತದ ತ್ವರಿತ ಬೆಳವಣಿಗೆಯನ್ನು ಕೆಲವರು ಇಷ್ಟಪಡುತ್ತಿಲ್ಲ. ಅವರಿಗೆ ಅದನ್ನು ಜೀರ್ಣಪಡಿಸಿಕೊಳ್ಳಲು ಸಹ ಆಗುತ್ತಿಲ್ಲ. ತಾವೇ ಎಲ್ಲ ‘ಬಾಸ್’ ಎಂದು ಅವರು ಭಾವಿಸಿದ್ದಾರೆ. ಭಾರತ ಇಷ್ಟು ವೇಗವಾಗಿ ಹೇಗೆ ಬೆಳೆಯುತ್ತಿದೆ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಆದರೆ ನಿಜವಾಗಿ ಹೇಳಬೇಕು ಎಂದರೆ ಎಲ್ಲರ ಬಾಸ್ ನಾವು. ಹೀಗಾಗಿ ಅವರಿಂದ ಭಾರತದ ಏಳಿಗೆಯನ್ನು ತಡೆಗಟ್ಟಲು ಸಾಧ್ಯವಿಲ್ಲ’ ಎಂದರು.
ಟ್ರಂಪ್‌ಗೆ ಗಡ್ಕರಿ ‘ದಾದಾಗಿರಿ’ ಟಾಂಗ್
ನಾಗ್ಪುರ; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ.50 ತೆರಿಗೆ ಹೇರಿರುವುದನ್ನು ‘ದಾದಾಗಿರಿ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದ್ದಾರೆ.
ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ದಾದಾಗಿರಿಯಲ್ಲಿ ತೊಡಗಿರುವವರು ಹಾಗೆ ಮಾಡುತ್ತಿದ್ದಾರೆ. ಏಕೆಂದರೆ ಅವರು ಆರ್ಥಿಕವಾಗಿ ಬಲಶಾಲಿಯಾಗಿದ್ದಾರೆ ಮತ್ತು ಅವರ ಬಳಿ ತಂತ್ರಜ್ಞಾನವಿದೆ. ಆದರೆ ನಾವು ಉತ್ತಮ ತಂತ್ರಜ್ಞಾನ ಮತ್ತು ಸಂಪನ್ಮೂಲಗಳನ್ನು ಪಡೆದರೆ, ನಾವು ಯಾರನ್ನೂ ಬೆದರಿಸುವುದಿಲ್ಲ, ಏಕೆಂದರೆ ನಮ್ಮ ಸಂಸ್ಕೃತಿಯು ಪ್ರಪಂಚದ ಕಲ್ಯಾಣವೇ ಹೊರತು ಮತ್ತೇನೂ ಅಲ್ಲ’ ಎಂದರು.
ಇಂಡಿಯಾ ಕೂಟದಿಂದ ಜಂಟಿ ಉಪರಾಷ್ಟ್ರಪತಿ ಅಭ್ಯರ್ಥಿ ಕಣಕ್ಕೆ?
ನವದೆಹಲಿ: ಜಗದೀಪ್ ಧನಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ ನಡೆಯಲಿದ್ದು, ವಿಪಕ್ಷ ಇಂಡಿಯಾ ಒಕ್ಕೂಟ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕಿಳಿಸಲಿದೆ. ಈ ಹಿನ್ನೆಲೆ ಕೂಟದ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಯಾವುದೇ ರಚನಾತ್ಮಕ ಚರ್ಚೆ ನಡೆಯದಿದ್ದರೂ, ಇಂಡಿಯಾ ಕೂಟದ ನಾಯಕರ ನಡುವೆ ಗೌಪ್ಯ ಮಾತುಕತೆಗಳು ನಡೆಯುತ್ತಿವೆ. ಈ ವಿಚಾರವಾಗಿ ಎಲ್ಲಾ ಪಕ್ಷಗಳಲ್ಲಿ ಒಮ್ಮತ ಮೂಡಿಸಲು ಖರ್ಗೆ ಪ್ರಯತ್ನಿಸುತ್ತಿದ್ದಾರೆ. ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಇಂಡಿಯಾ ಕೂಟದ ಪಕ್ಷಗಳಲ್ಲಿ ಸಾಕಷ್ಟು ಒಮ್ಮತವಿದೆ. ಆದರೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ, ತಮ್ಮ ಅಭ್ಯರ್ಥಿಯನ್ನು ಘೋಷಿಸಲು ಚಿಂತನೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ