ರಕ್ಷಣಾ ಪಡೆ ಅಧಿಕಾರಿಗಳ ನಿವೃತ್ತಿ ವಯೋಮಿತಿ ಹೆಚ್ಚಳ?

By Kannadaprabha News  |  First Published Nov 20, 2020, 9:11 AM IST

ರಕ್ಷಣಾ ಪಡೆಯ ಎಲ್ಲಾ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2021ರ ಏಪ್ರಿಲ್‌ನಿಂದ 1ರಿಂದ 3 ವರ್ಷಗಳವರೆಗೆ ವಿಸ್ತರಿಸಲು ರಕ್ಷಣಾ ಇಲಾಖೆ ಉದ್ದೇಶಿಸಿದೆ.


ನವದೆಹಲಿ (ನ.20): ರಕ್ಷಣಾ ಪಡೆಯ ಎಲ್ಲಾ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 2021ರ ಏಪ್ರಿಲ್‌ನಿಂದ 1ರಿಂದ 3 ವರ್ಷಗಳವರೆಗೆ ವಿಸ್ತರಿಸಲು ರಕ್ಷಣಾ ಇಲಾಖೆ ಉದ್ದೇಶಿಸಿದೆ. ಬಾಹ್ಯ ಶಕ್ತಿಗಳ ಜೊತೆಗಿನ ಯುದ್ಧ ಸೇರಿದಂತೆ ಇನ್ನಿತರ ಗಡಿ ವಿವಾದ ಇತ್ಯರ್ಥದ ವೇಳೆ ಅತ್ಯಂತ ಅನುಭವಿ ಮತ್ತು ಕೌಶಲ್ಯಯುತ ಅಧಿಕಾರಿಗಳ ಸೇವೆ ಸದ್ಬಳಕೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ನಲ್‌, ಬ್ರಿಗೇಡಿಯ​ರ್‍ಸ್, ಮೇಜರ್‌ ಜನರಲ್‌ ರಾರ‍ಯಂಕಿನ ಅಧಿಕಾರಿಗಳು ಮತ್ತು ಸೇನೆ ಹಾಗೂ ನೌಕಾಪಡೆಯಲ್ಲಿ ಅವರಿಗೆ ಸಮಾನಾಂತರವಾದ ಹುದ್ದೆಯಲ್ಲಿರುವ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು ಕ್ರಮವಾಗಿ 3, 2 ಮತ್ತು 1 ವರ್ಷಗಳ ಕಾಲ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

Tap to resize

Latest Videos

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಿನ್‌ಪಾಯಿಂಟ್ ಸ್ಟ್ರೈಕ್ ನಡೆಸಿಲ್ಲ: ಸೇನೆ ಸ್ಪಷ್ಟನೆ! ...

ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರ ನೇತೃತ್ವದ ಈ ಪ್ರಸ್ತಾವನೆಯನ್ನು ರಕ್ಷಣಾ ವ್ಯವಹಾರಗಳ ಇಲಾಖೆ 2020ರ ಏ.1ರಿಂದ ಜಾರಿ ಮಾಡಲು ನಿರ್ಧರಿಸಿದೆ. ವಾಯುಪಡೆ ಮತ್ತು ನೌಕಾಪಡೆಯಲ್ಲಿ ಕರ್ನಲ್‌ ಮಟ್ಟದ ಅಧಿಕಾರಿಗಳ ನಿವೃತ್ತಿ ವಯೋಮಿತಿಯನ್ನು ಈಗಿರುವ 54 ವರ್ಷದಿಂದ 57 ವರ್ಷಕ್ಕೆ ಏರಿಸುವ ಪ್ರಸ್ತಾವನೆ ಇದೆ. ಅದೇ ರೀತಿ ಬ್ರಿಗೇಡಿಯರ್‌ ಮಟ್ಟದ ಅಧಿಕಾರಿಗಳ ವಯೋಮಿತಿ 56 ವರ್ಷದಿಂದ 58 ವರ್ಷಕ್ಕೆ ಹೆಚ್ಚಿಸಲು ಹಾಗೂ ಮೇಜರ್‌ ಜನರಲ್‌ ಮಟ್ಟದ ಅಧಿಕಾರಿಗಳ ವಯಸ್ಸನ್ನು 58 ವರ್ಷದಿಂದ 59 ವರ್ಷಕ್ಕೆ ಏರಿಸಲು ಉದ್ದೇಶಿಸಲಾಗಿದೆ. ಲೆಫ್ಟಿನೆಂಟ್‌ ಜನರಲ್‌ಗಳ ನಿವೃತ್ತಿ ವಯಸ್ಸು 60 ವರ್ಷವೇ ಇರಲಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

click me!