ಡೀಪ್‌ಸೀಕ್: ಮಾನವರನ್ನೂ ಹಿಮ್ಮೆಟ್ಟಿಸಲಿದೆಯೇ ಈ ಕೃತಕ ಬುದ್ಧಿಮತ್ತೆ?

Published : Feb 01, 2025, 01:16 PM IST
ಡೀಪ್‌ಸೀಕ್: ಮಾನವರನ್ನೂ ಹಿಮ್ಮೆಟ್ಟಿಸಲಿದೆಯೇ ಈ ಕೃತಕ ಬುದ್ಧಿಮತ್ತೆ?

ಸಾರಾಂಶ

ಚೀನಾದ ಡೀಪ್‌ಸೀಕ್ ಎಂಬ ಸ್ಟಾರ್ಟಪ್ ಎಐ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಿರುವ ಡೀಪ್‌ಸೀಕ್, ಚಾಟ್ ಜಿಪಿಟಿಯಂತಹ ಎಐ ಟೂಲ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ.

- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಚೀನಾದ ಒಂದು ನಿಗೂಢ ಸ್ಟಾರ್ಟಪ್ ಸಂಸ್ಥೆ ಎಐ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ. ಸಿಲಿಕಾನ್ ವ್ಯಾಲಿಯ ದೊಡ್ಡ ದೊಡ್ಡ ಕಂಪನಿಗಳಿಗೆ ನಡುಕ ಹುಟ್ಟಿಸಿ, ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣಗೊಂಡು, ಜನರು ಎಐ ಏನು ಮಾಡಬಲ್ಲದು ಎನ್ನುವುದರ ಕುರಿತು ಮತ್ತೊಮ್ಮೆ ಆಲೋಚಿಸುವಂತೆ ಮಾಡಿದೆ. ಡೀಪ್‌ಸೀಕ್ ತನ್ನ ಆರ್ಥಿಕ ಸಂಪನ್ಮೂಲಕ್ಕಾಗಿ ಅಪಾರ ಹಣದ ಅವಶ್ಯಕತೆ ಹೊಂದಿದ್ದು, ಇದಕ್ಕಾಗಿ ಅಗಾಧವಾದ ಆರ್ಥಿಕ ಸಂಪನ್ಮೂಲ ಅಥವಾ ತನ್ನ ಕಾರ್ಯಾಚರಣೆಗಳಿಗೆ, ಬೆಳವಣಿಗೆಗೆ ಮತ್ತು ಗುರಿಯ ಸಾಧನೆಗೆ ಹೂಡಿಕೆಗಳನ್ನು ಪಡೆಯುತ್ತಿದೆ. ಆ ಮೂಲಕ ಡೀಪ್‌ಸೀಕ್ ಮುಕ್ತವಾದ ನಾವೀನ್ಯತೆಯಾಗುವುದರತ್ತ ಬದ್ಧತೆ ತೋರಿಸಿದ್ದು, ಮಾನವರ ಬುದ್ಧಿಮತ್ತೆಯನ್ನೂ ಮೀರಿ ಸಾಧನೆಗೈದು, ಓಪನ್ ಎಐನಂತಹ ಬೃಹತ್ ಸಂಸ್ಥೆಗಳನ್ನೂ ಮಣಿಸಲು ಸಜ್ಜಾಗಿದೆ. ಆದರೆ, ಡೀಪ್ ಸೀಕ್ ಇಷ್ಟೊಂದು ಕ್ಷಿಪ್ರವಾಗಿ ಬೆಳೆಯುತ್ತಿರುವುದೂ ಹಲವು ಮುಖ್ಯ ಪ್ರಶ್ನೆಗಳಿಗೆ ಹಾದಿ ಮಾಡಿಕೊಟ್ಟಿದೆ. ಅವೆಂದರೆ:

ನಾವು ನಿಜಕ್ಕೂ ಕೃತಕ ಬುದ್ಧಿಮತ್ತೆಯ (ಎಐ) ಕ್ರಾಂತಿಯನ್ನು ನೋಡುತ್ತಿದ್ದೇವೆಯೇ? ಅಥವಾ ಇದಕ್ಕೆ ಕೇವಲ ಅತಿಯಾದ ಪ್ರಚಾರ ನೀಡಲಾಗುತ್ತಿದೆಯೇ? ಈ ಲೇಖನದ ಮುಂದಿನ ಭಾಗಗಳಲ್ಲಿ, ನಾವು ಡೀಪ್‌ಸೀಕ್‌ನ ಮೂಲ, ಅದರ ಯೋಜನೆಗಳ ಕುರಿತು ತಿಳಿಯುತ್ತಾ, ಇದು ಚಾಟ್ ಜಿಪಿಟಿಯಂತಹ ಜನಪ್ರಿಯ ಎಐ ಟೂಲ್‌ಗಳ ಜೊತೆಗಿನ ಹೋಲಿಕೆಯಲ್ಲಿ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ. ಅದರೊಡನೆ, ಇದರಿಂದ ಉಂಟಾಗಿರುವ ಮಾರುಕಟ್ಟೆಯ ಬದಲಾವಣೆಗಳು ಹಾಗೂ ಟಿಕ್‌ಟಾಕ್ ಆ್ಯಪ್ ರೀತಿಯಲ್ಲಿಯೇ ಇದರ ಗೌಪ್ಯತೆಯ ಕುರಿತ ಕಳವಳಗಳನ್ನೂ ಗಮನಿಸೋಣ.

ಏನು ಈ ಡೀಪ್‌ಸೀಕ್ & ಯಾರು ಇದರ ಉಸ್ತುವಾರಿ?

ಡೀಪ್‌ಸೀಕ್ ಅನ್ನು ಜುಲೈ 2023ರಲ್ಲಿ ಚೀನಾದ ಹ್ಯಾಂಗ್‌ಝೌ‌ನ ಝೆಜಿಯಾಂಗ್ ವಿಶ್ವವಿದ್ಯಾಲಯದ ಪದವೀಧರನಾದ ಲಿಯಾಂಗ್ ವೆನ್‌ಫೆಂಗ್ ಎಂಬಾತ ಆರಂಭಿಸಿದ. ಈತನ ಸಂಸ್ಥೆಗೆ ಹೈ ಫ್ಲೈಯರ್ ಎಂಬ ಹೆಜ್ ಫಂಡ್ ಸಂಸ್ಥೆ (ಎಂತಹ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಬೇಕು ಎನ್ನುವುದನ್ನು ಗಣಿತ, ಮಾಹಿತಿ ಮತ್ತು ಕಂಪ್ಯೂಟರ್‌ಗಳನ್ನು ಬಳಸಿ ನಿರ್ಧರಿಸುವ ಒಂದು ರೀತಿಯ ಹೂಡಿಕೆ ಸಂಸ್ಥೆ) ಹೂಡಿಕೆ ಮತ್ತು ಮಾರ್ಗದರ್ಶನ ಒದಗಿಸುತ್ತಿದೆ. ಲಿಯಾಂಗ್ ವೆನ್‌ಫೆಂಗ್ ಈ ಹೈ ಫ್ಲೈಯರ್ ಸಂಸ್ಥೆಗೂ ಸಹ ಸಂಸ್ಥಾಪಕನಾಗಿದ್ದಾನೆ.

ಇದನ್ನೂ ಓದಿ: ಚೀನಾಕ್ಕೆ ಶಾಕ್, ಅಮೆರಿಕಾಗೆ ಡಬಲ್ ಶಾಕ್; ಎಐ ಅಖಾಡಕ್ಕೆ ಇಳಿದ ಭಾರತ! ಅಶ್ಚಿನಿ ವೈಷ್ಣವ್ ಮಹತ್ವದ ಘೋಷಣೆ!

ಈಗಾಗಲೇ 8 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ನಿರ್ವಹಿಸುತ್ತಿರುವ ಶ್ರೀಮಂತ ಸಂಸ್ಥೆಯಾದ ಹೈ ಫ್ಲೈಯರ್‌ನ ಬೆಂಬಲ ಹೊಂದಿರುವ ಡೀಪ್‌ಸೀಕ್, ಭರ್ಜರಿಯಾಗಿಯೇ ಎಐ ಉದ್ಯಮಕ್ಕೆ ಕಾಲಿಟ್ಟಿದೆ. ಎಐ ತಂತ್ರಜ್ಞಾನದ ಅಭಿವೃದ್ಧಿಗೆ ಎನ್‌ವೀಡಿಯಾ ಸಂಸ್ಥೆಯ ಎ100 ಚಿಪ್ ಅವಶ್ಯಕವಾಗಿದ್ದು, ಚೀನಾಗೆ ಅದರ ರಫ್ತನ್ನು ನಿರ್ಬಂಧಿಸಲಾಗಿದೆ. ಅಷ್ಟಾದರೂ ಡೀಪ್‌ಸೀಕ್ ಭಾರೀ ಸಂಖ್ಯೆಯಲ್ಲಿ ಈ ಚಿಪ್‌ಗಳನ್ನು ಅದು ಹೇಗೋ ಸಂಪಾದಿಸಲು ಯಶಸ್ವಿಯಾಗಿದೆ.

ಡೀಪ್‌ಸೀಕ್ ಸಂಸ್ಥೆ ತಾನು ನಿರ್ಮಿಸಿರುವ ಡೀಪ್‌ಸೀಕ್-ವಿ3 ಮಾದರಿಯ ಮೂಲಕ ದಿಢೀರ್ ಜನಪ್ರಿಯತೆ ಗಳಿಸಿದೆ. ಈ ಎಐ ಮಾದರಿಯನ್ನು ಸಂಸ್ಥೆ ಕೇವಲ 6 ಮಿಲಿಯನ್ ಡಾಲರ್ ಮೌಲ್ಯದ ಕಂಪ್ಯೂಟಿಂಗ್ ಸಂಪನ್ಮೂಲಗಳಾದ ಅಪಾರ ಪ್ರಮಾಣದ ಮಾಹಿತಿಯನ್ನು ಸಂಸ್ಕರಿಸುವ ಶಕ್ತಿಶಾಲಿ ಕಂಪ್ಯೂಟರ್‌ಗಳು, ಸರ್ವರ್‌ಗಳು, ಚಿಪ್‌ಗಳನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಿದೆ. ಇದು ಇಂತಹ ಯೋಜನೆಗಳಿಗೆ ಅಮೆರಿಕಾದ ಕಂಪನಿಗಳು ನಡೆಸುವ ಭಾರೀ ಪ್ರಮಾಣದ ಹೂಡಿಕೆಗೆ ಹೋಲಿಸಿದರೆ ಅತ್ಯಂತ ಕನಿಷ್ಠ ಮಟ್ಟದ ವೆಚ್ಚವಾಗಿದೆ.

ತಾನು ಹೊಂದಿರುವ ಅಸಾಧಾರಣ ದಕ್ಷತೆಯ ಕಾರಣದಿಂದಾಗಿ ಡೀಪ್‌ಸೀಕ್ ಸಂಸ್ಥೆಯ ಎಐ ಅಸಿಸ್ಟೆಂಟ್ ಇಂದು ಅಮೆರಿಕಾದ ಆ್ಯಪ್ ಸ್ಟೋರ್‌ನಲ್ಲೂ ಅತ್ಯಂತ ಜನಪ್ರಿಯ ಉಚಿತ ಆ್ಯಪ್ ಆಗಿದ್ದು, ಚಾಟ್ ಜಿಪಿಟಿಯನ್ನೂ ಹಿಂದಿಕ್ಕಿದೆ. ಈ ಯಶಸ್ಸಿನ ಮೂಲಕ ಡೀಪ್‌ಸೀಕ್ ಅತ್ಯಂತ ಕಡಿಮೆ ವೆಚ್ಚದಲ್ಲೂ ಅಸಾಧಾರಣ ಫಲಿತಾಂಶಗಳನ್ನು ಸಾಧಿಸಬಹುದು ಎಂದು ನಿರೂಪಿಸಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ. ಆ ಮೂಲಕ, ಸಾಂಪ್ರದಾಯಿಕ ವಿಧಾನದಲ್ಲಿ ಸಾಗುತ್ತಿದ್ದ ಜಾಗತಿಕ ಎಐ ಉದ್ಯಮ ಎಚ್ಚೆತ್ತುಕೊಂಡು ತಮ್ಮ ಕಾರ್ಯತಂತ್ರದ ಕುರಿತು ಮತ್ತೊಮ್ಮೆ ಆಲೋಚಿಸುವಂತೆ ಮಾಡಿದೆ.

ಹೈ ಫ್ಲೈಯರ್ ಸಂಸ್ಥೆ 2023ರ ಆರಂಭದಲ್ಲಿ ತಾನು ಮಾನವರಂತೆ ಯೋಚಿಸಬಲ್ಲ, ಕಲಿಯಬಲ್ಲ, ಮತ್ತು ಸಮಸ್ಯೆಗಳನ್ನು ಪರಿಹರಿಸಬಲ್ಲ ಆರ್ಟಿಫಿಶಿಯಲ್ ಜನರಲ್ ಇಂಟಲಿಜೆನ್ಸ್ (ಎಜಿಐ) ಎಂಬ ಎಐ ಅನ್ನು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿತ್ತು. ಡೀಪ್‌ಸೀಕ್ ತಂತ್ರಜ್ಞಾನಕ್ಕೆ ಹೈ ಫ್ಲೈಯರ್ ಸಂಸ್ಥೆಯ ಸಂಶೋಧಕರ ತಂಡ ಬೆಂಬಲ ನೀಡಿತ್ತು. ನಿರ್ದಿಷ್ಟವಾದ ಕಾರ್ಯಗಳನ್ನು ಮಾತ್ರವೇ ನಿರ್ವಹಿಸಬಲ್ಲ ಎಐ ರೀತಿಯಲ್ಲದೆ, ಎಜಿಐ ವಿಶಾಲ ಶ್ರೇಣಿಯ ಕಾರ್ಯಗಳನ್ನು ನಿರ್ವಹಿಸಿ, ಹೊಸ ಪರಿಸ್ಥಿತಿಗಳಿಗೆ ತನ್ನನ್ನು ತಾನು ಹೊಂದಿಸಿಕೊಳ್ಳಬಲ್ಲದು.

10,000 ಎನ್‌ವೀಡಿಯಾ ಎ100 ಚಿಪ್‌ಗಳ ಜಾಲವನ್ನು ನಿರ್ವಹಿಸುವ ಈ ಸಂಶೋಧನಾ ತಂಡ, ಎಐನ ಸಾಮರ್ಥ್ಯವನ್ನು ಅದರ ಸಾಮಾನ್ಯ ಬಳಕೆಯಿಂದಾಚೆಗೆ ವಿಸ್ತರಿಸುವ ಉದ್ದೇಶ ಹೊಂದಿದೆ. ಆ ಮೂಲಕ, ಮುಖ್ಯವಾದ, ಮೌಲ್ಯಯುತವಾದ ಕಾರ್ಯಗಳಲ್ಲಿ ಮಾನವರನ್ನು ಸೋಲಿಸುವ ಸಾಮರ್ಥ್ಯ ಹೊಂದಿರುವ ಸಿಸ್ಟಮ್‌ಗಳನ್ನು ನಿರ್ಮಿಸುವ ಗುರಿಯನ್ನು ಡೀಪ್‌ಸೀಕ್ ಹೊಂದಿದೆ. ತನ್ನ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಡೀಪ್‌ಸೀಕ್ ತಾನು ಎಐ ವಲಯದ ನಾಯಕನಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಿದೆ. ಇದರ ಕಾರ್ಯತಂತ್ರದ ರೀತಿ ಎಐನ ಭವಿಷ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ.

ಡೀಪ್‌ಸೀಕ್ ಆರಂಭ ಹೇಗಾಯಿತು?

2022ರ ಕೊನೆಯ ಭಾಗದಲ್ಲಿ ಓಪನ್ ಎಐ ಚಾಟ್ ಜಿಪಿಟಿಯನ್ನು ಆರಂಭಿಸಿದಾಗ ಉಂಟಾದ ಸ್ಪರ್ಧೆಯ ಪರಿಣಾಮವಾಗಿ ಡೀಪ್‌ಸೀಕ್ ಜನ್ಮ ತಾಳಿತು. ಚಾಟ್ ಜಿಪಿಟಿಯ ಆರಂಭದಿಂದಾಗಿ, ಚೀನೀ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಸ್ವಂತ ಆಧುನಿಕ ಎಐ ಚಾಟ್‌ಬಾಟ್ ಆರಂಭಿಸಲು ಸ್ಪರ್ಧೆಗಿಳಿದವು. ಚೀನಾದ ಮುಂಚೂಣಿ ತಂತ್ರಜ್ಞಾನ ಸಂಸ್ಥೆ ಮತ್ತು ಸರ್ಚ್ ಇಂಜಿನ್ ಆಗಿರುವ ಬೈದುವಿನಂತಹ ಪ್ರಮುಖ ಕಂಪನಿಗಳು ಎಐನಲ್ಲಿ ಆರಂಭಿಕ ಪ್ರಯತ್ನಗಳನ್ನು ನಡೆಸಿದವಾದರೂ, ಚೀನಾ ಮತ್ತು ಅಮೆರಿಕಾದ ಎಐ ತಂತ್ರಜ್ಞಾನಗಳ ನಡುವೆ ಅಜಗಜಾಂತರವಿತ್ತು.

ಇದರ ಪರಿಣಾಮವಾಗಿ, ಚೀನಾದ ತಂತ್ರಜ್ಞಾನ ಸಮುದಾಯ ನಿರಾಶೆಗೊಳಗಾಯಿತು. ಈ ಪರಿಸ್ಥಿತಿಯಿಂದಾಗಿ, 2023ರಲ್ಲಿ ಈ ಅಂತರವನ್ನು ತಗ್ಗಿಸುವ ಸಲುವಾಗಿ ಡೀಪ್‌ಸೀಕ್ ಆರಂಭಗೊಂಡಿತು. ಇದರ ಗುರಿ ಎಜಿಐ ಮಿತಿಗಳನ್ನು ವಿಸ್ತರಿಸಿ, ಮಾನವ ಬುದ್ಧಿಮತ್ತೆಯನ್ನು ಮೀರುವಂತಹ ಎಐಯನ್ನು ನಿರ್ಮಿಸುವುದಾಗಿತ್ತು.

ಡೀಪ್‌ಸೀಕ್ ಅನ್ನು ಹಣ ಮಾಡುವ ಉದ್ದೇಶಕ್ಕಿಂತಲೂ, ಓಪನ್ ಎಐ ಆರಂಭಿಕ ವರ್ಷಗಳಲ್ಲಿ ಇದ್ದಂತೆ ಆದರ್ಶವಾದಿ ಗುರಿಗಳನ್ನು ಸಾಧಿಸಲು ಆರಂಭಿಸಲಾಯಿತು. ಡೀಪ್‌ಸೀಕ್ ಹಿಂದಿನ ತಂಡ ತನ್ನನ್ನು ಎಜಿಐನಲ್ಲಿ ಬಹುದೊಡ್ಡ ಸಾಧನೆ ನಿರ್ಮಿಸುವ ಕನಸು ಕಾಣುತ್ತಿರುವ ತಂಡವಾಗಿ ಪರಿಗಣಿಸಿದ್ದು, ಹಣ ಮಾಡುವ ಉದ್ದೇಶ ಹೊಂದಿಲ್ಲ ಎಂದಿದೆ. ಅವರ ದೃಷ್ಟಿಕೋನಕ್ಕೆ ಬೆಂಬಲ ಎನ್ನುವಂತೆ, ತಂತ್ರಜ್ಞಾನದಲ್ಲಿ, ಅದರಲ್ಲೂ ಆಧುನಿಕ ಆವೃತ್ತಿಗಳಾದ ಡೀಪ್‌ಸೀಕ್-ವಿ3 ಮತ್ತು ಡೀಪ್‌ಸೀಕ್-ಆರ್1 ನಿರ್ಮಾಣದಲ್ಲಿ ಅಪಾರ ಪ್ರಮಾಣದಲ್ಲಿ ತಂತ್ರಜ್ಞಾನಕ್ಕಾಗಿ ಹೂಡಿಕೆ ಲಭಿಸಿದೆ.

ಈ ಡೀಪ್‌ಸೀಕ್ ಮಾದರಿಗಳು ತಮ್ಮ ಗಮನಾರ್ಹ ಪ್ರದರ್ಶನಕ್ಕಾಗಿ, ಮತ್ತು ಓಪನ್ ಎಐ, ಮೆಟಾಗಳಂತಹ ಎಐ ಮಾಡೆಲ್‌ಗಳೊಡನೆ ಸ್ಪರ್ಧಿಸಿರುವುದಕ್ಕೆ, ಮತ್ತು ಅವುಗಳನ್ನೂ ಸೋಲಿಸಿರುವುದಕ್ಕಾಗಿ ಶ್ಲಾಘಿಸಲ್ಪಟ್ಟವು. ಡೀಪ್‌ಸೀಕ್ ಕನಿಷ್ಠ ಪ್ರಮಾಣದಲ್ಲಿ ಅತ್ಯಾಧುನಿಕ ಎನ್‌ವೀಡಿಯಾ ಚಿಪ್‌ಗಳ ಲಭ್ಯತೆ ಹೊಂದಿರುವುದರಿಂದ, ಈ ಸಾಧನೆ ಇನ್ನಷ್ಟು ಮಹತ್ವದ್ದಾಗಿದೆ. ಡೀಪ್‌ಸೀಕ್-ವಿ3 ತನ್ನ ಅತ್ಯಂತ ವೇಗದ ಪ್ರೊಸೆಸಿಂಗ್ ಸ್ಪೀಡ್ ಮತ್ತು ಕಡಿಮೆ ವೆಚ್ಚದಾಯಕ ಕಾರ್ಯಾಚರಣೆಗೆ ಹೆಸರಾಗಿದೆ. ಇದು ಅತ್ಯಂತ ಹೆಚ್ಚಿನ ಕಂಪ್ಯೂಟಿಂಗ್ ಶಕ್ತಿಗಳಾದ ಕೋಡಿಂಗ್ ಮತ್ತು ಸಂಕೀರ್ಣ ಗಣಿತದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದೆ.

ಆರ್ಕ್ಸಿವ್‌ನ ಒಂದು ಸಂಶೋಧನಾ ಪ್ರಬಂಧ ಡೀಪ್‌ಸೀಕ್ ಮಾಡೆಲ್ಲಿನ ಗಮನಾರ್ಹ ಸಾಮರ್ಥ್ಯಗಳತ್ತ ಬೆಳಕು ಚೆಲ್ಲಿದ್ದು, ಇದು ಇತರ ಓಪನ್ ಸೋರ್ಸ್ ಮಾದರಿಗಳನ್ನು ಸೋಲಿಸಿ, ಜಿಪಿಟಿ-4, ಕ್ಲಾಡ್-3.5 ಸಾನೆಟ್‌ಗಳಂತಹ ಉತ್ಕೃಷ್ಟ ಕ್ಲೋಸ್ಡ್ ಸೋರ್ಸ್ ಮಾದರಿಗಳಿಗೆ ಸರಿಸಮನಾಗಿ ಸ್ಪರ್ಧಿಸಿದೆ ಎಂದಿದೆ.  ಈ ಸಾಧನೆಯನ್ನು ಪ್ರಸಿದ್ಧ ವಿಜ್ಞಾನ ವೇದಿಕೆಯಾದ ಇಂಟರೆಸ್ಟಿಂಗ್ ಇಂಜಿನಿಯರಿಂಗ್.ಕಾಮ್ ಸಹ ವರದಿ ಮಾಡಿದೆ.

ಇದನ್ನೂ ಓದಿ: DeepSeek ಎಂದರೇನು? ಕಳೆದೆರಡು ದಿನಗಳಿಂದ ಜಗತ್ತಿನಾದ್ಯಂತ ಚರ್ಚೆ ಆಗ್ತಿದೆ ಏಕೆ?

ಡೀಪ್‌ಸೀಕ್ ಮತ್ತು ಚಾಟ್ ಜಿಪಿಟಿ ಹೇಗೆ ಭಿನ್ನವಾಗಿವೆ?

ಡೀಪ್‌ಸೀಕ್ ಚಾಟ್ ಜಿಪಿಟಿಯಂತಹ ಎಐ ಟೂಲ್‌ಗಳಿಂದ ಪ್ರತ್ಯೇಕವಾದ ವಿನ್ಯಾಸ ಮತ್ತು ಕಾರ್ಯ ವಿಧಾನವನ್ನು ಹೊಂದಿ, ಆ ಮೂಲಕ ಅದರಿಂದ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಡೀಪ್‌ಸೀಕ್ ಅನ್ನು ವೇಗವಾಗಿ, ಮತ್ತು ಕಡಿಮೆ ವೆಚ್ಚದಾಯಕವಾಗಿ ಕಾರ್ಯಾಚರಿಸಲು ನೆರವಾಗುತ್ತವೆ.

'ಮಿಕ್ಸ್ಚರ್ ಆಫ್ ಎಕ್ಸ್‌ಪರ್ಟ್ಸ್' (ಎಂಒಇ) ಎಂಬ ವ್ಯವಸ್ಥೆಯನ್ನು ಬಳಸಿಕೊಂಡು, ಡೀಪ್‌ಸೀಕ್ ಪ್ರತಿಯೊಂದು ಪ್ರಶ್ನೆಗೂ ತನ್ನ ಜಾಲದ ಅಗತ್ಯವಿರುವ ಭಾಗಗಳನ್ನು ಮಾತ್ರವೇ ಸಕ್ರಿಯಗೊಳಿಸುತ್ತದೆ. ಈ ವಿಧಾನ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಮಿತವಾಗಿ ಬಳಸಿ, ಖರ್ಚು ಕಡಿಮೆಗೊಳಿಸಲು ನೆರವಾಗುತ್ತದೆ. ಡೀಪ್‌ಸೀಕ್ ರೀತಿಯಲ್ಲದೆ, ಚಾಟ್ ಜಿಪಿಟಿ ಟ್ರಾನ್ಸ್‌ಫಾರ್ಮರ್ ಆಧಾರಿತ ವಿನ್ಯಾಸವನ್ನು ಬಳಸಿಕೊಂಡು, ಕಾರ್ಯಗಳನ್ನು ತನ್ನ ಸಂಪೂರ್ಣ ಜಾಲದ ಮೂಲಕ ಸಾಗಿಸುತ್ತದೆ. ಇದರ ಪರಿಣಾಮವಾಗಿ, ಹೆಚ್ಚಿನ ಸಂಪನ್ಮೂಲಗಳು ಬಳಕೆಯಾಗಿ, ಕಾರ್ಯಾಚರಣಾ ವೆಚ್ಚವೂ ಹೆಚ್ಚಾಗುತ್ತದೆ.

ತಂತ್ರಜ್ಞಾನ ಮತ್ತು ಪ್ರದರ್ಶನದ ಆಧುನೀಕರಣ

ಈಗಾಗಲೇ ವಿವರಿಸಿರುವಂತೆ, ಡೀಪ್‌ಸೀಕ್ ಹೊಂದಿರುವ ಎಂಒಇ ವಿನ್ಯಾಸ ಗುರಿಗಳನ್ನು ಅವುಗಳ ನಿರ್ದಿಷ್ಟ ಅಗತ್ಯಗಳಿಗೆ ತಕ್ಕಂತೆ ಸಂಸ್ಕರಿಸುತ್ತದೆ. ಇದರಿಂದಾಗಿ, ಕೋಡಿಂಗ್ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಡೀಪ್‌ಸೀಕ್ ಸಾಮರ್ಥ್ಯ ವೃದ್ಧಿಸಿ, ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಸುತ್ತದೆ. ಇನ್ನೊಂದೆಡೆ, ಚಾಟ್ ಜಿಪಿಟಿ ಹಲವಾರು ಗುರಿಗಳಲ್ಲಿ ಒಂದೇ ರೀತಿಯ ಪ್ರದರ್ಶನ ನೀಡುತ್ತಾದರೂ, ಇದು ಎಲ್ಲ ಪ್ರಕ್ರಿಯೆಗಳನ್ನೂ ತನ್ನ ಸಂಪೂರ್ಣ ವ್ಯವಸ್ಥೆಯಲ್ಲಿ ಸಂಸ್ಕರಿಸುವುದರಿಂದ ಡೀಪ್‌ಸೀಕ್‌ಗೆ ಹೋಲಿಸಿದರೆ ಒಂದಷ್ಟು ನಿಧಾನವಾಗಬಹುದು.

ಇಷ್ಟಾದರೂ, ಚಾಟ್ ಜಿಪಿಟಿ ಸಾಮಾನ್ಯವಾಗಿ ಹೆಚ್ಚು ವಿಸ್ತೃತವಾದ, ವಿವೇಚನೆಯ ಉತ್ತರಗಳನ್ನು ನೀಡಿ, ವಿಶಾಲ ವಿಚಾರಗಳಲ್ಲಿ ಡೀಪ್‌ಸೀಕ್ ಹೊಂದಿರದ ವಿಷಯದ ಆಳವನ್ನು ಹೊಂದಬಲ್ಲದು.

ವೈಯಕ್ತೀಕರಣ ಮತ್ತು ಬಳಕೆ

ಡೀಪ್‌ಸೀಕ್‌ನ ಸಿಸ್ಟಮ್ ಅತ್ಯಂತ ಹೊಂದಿಕೊಳ್ಳುವಂತದ್ದಾಗಿದ್ದು, ತಾಂತ್ರಿಕ ಕೌಶಲಗಳನ್ನು ಹೊಂದಿ, ಅದರ ವೈಶಿಷ್ಟ್ಯಗಳನ್ನು ತಮಗೆ ಬೇಕಾದ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಳ್ಳುವವರಿಗೆ ಸೂಕ್ತವಾಗಿದೆ. ಇದರಿಂದಾಗಿ ಡೀಪ್‌ಸೀಕ್ ನಿಖರ ತಾಂತ್ರಿಕ ಬೆಂಬಲದ ಅಗತ್ಯವಿರುವ ಕಾರ್ಯಗಳಿಗೆ ಸೂಕ್ತವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಚಾಟ್ ಜಿಪಿಟಿ ಸುಲಭವಾಗಿ ವೈಯಕ್ತಿಕಗೊಳಿಸಬಹುದಾದ ವ್ಯವಸ್ಥೆಗಳನ್ನು ಹೊಂದಿದ್ದು, ವಿಶಾಲ ಶ್ರೇಣಿಯ ಜನರಿಗೆ ಉತ್ತಮ ಆಯ್ಕೆಯಾಗಿದೆ. ಇದು ಸೃಜನಶೀಲ ಬರವಣಿಗೆ, ಹೊಸ ಆಲೋಚನೆಗಳಿಗೆ ಮತ್ತು ಸಾಮಾನ್ಯ ಮಾಹಿತಿಗಳಿಗೆ ಹೆಚ್ಚು ಸಹಾಯಕವಾಗಿದೆ.

ಬೆಲೆ ಮತ್ತು ಲಭ್ಯತೆ

ಬಳಕೆಯ ವಿಚಾರಕ್ಕೆ ಬಂದರೆ, ಡೀಪ್‌ಸೀಕ್ ಒಂದು ಓಪನ್ ಸೋರ್ಸ್ ಎಐ ಆಗಿದೆ. ಅಂದರೆ, ಇದು ಬಳಕೆಗೆ ಸಂಪೂರ್ಣವಾಗಿ ಉಚಿತವಾಗಿದ್ದು, ಇದನ್ನು ಸುಲಭವಾಗಿ ಬೇಕಾದಂತೆ ಮಾರ್ಪಡಿಸಿಕೊಳ್ಳಬಹುದು. ಇನ್ನೊಂದೆಡೆ, ಚಾಟ್ ಜಿಪಿಟಿಯೂ ಒಂದು ಉಚಿತ ಆವೃತ್ತಿಯನ್ನು ಒದಗಿಸುತ್ತಿದ್ದು, ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ, ಉತ್ತಮ ಎಪಿಐ ಲಭ್ಯತೆಯನ್ನು ಒದಗಿಸುವ ಪಾವತಿ ಯೋಜನೆಯನ್ನೂ ಹೊಂದಿದೆ. ಅಂದರೆ, ಒಂದು ಸೇವೆ ಅಥವಾ ಟೂಲ್ ಜೊತೆ ಕಾರ್ಯಾಚರಿಸಲು ವಿಭಿನ್ನ ಸಾಫ್ಟ್‌ವೇರ್‌ಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ಮೂಲಕ ಬೇರೆ ಪ್ರೋಗ್ರಾಂಗಳಿಗೆ 'ಮಾತನಾಡಲು' ಅವಕಾಶ ನೀಡಿ, ಎಐ ಟೂಲಿನ ಅಂಶಗಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಬಳಕೆದಾರರ ಅನುಭವ ಮತ್ತು ನೈತಿಕ ಅಂಶಗಳು

ಡೀಪ್‌ಸೀಕ್ ಒಂದು ಅತ್ಯಂತ ಶಕ್ತಿಶಾಲಿ ಟೂಲ್. ಆದರೆ, ಅದನ್ನು ಬಳಸಲು ಹೆಚ್ಚಿನ ತಾಂತ್ರಿಕ ಕೌಶಲಗಳ ಅಗತ್ಯವಿದೆ. ಇದು ತಾಂತ್ರಿಕ ಹಿನ್ನೆಲೆ ಇರದ ಜನರಿಗೆ ಡೀಪ್‌ಸೀಕ್ ಬಳಕೆಯನ್ನು ಕಷ್ಟಕರವಾಗಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಚಾಟ್ ಜಿಪಿಟಿ ಒಂದು ಸರಳವಾದ, ಬಳಕೆದಾರ ಸ್ನೇಹಿ ವಿನ್ಯಾಸವನ್ನು ಹೊಂದಿದ್ದು, ಯಾರಿಗಾದರೂ ಅದನ್ನು ಸುಲಭವಾಗಿ ಕಲಿತು ಬಳಸಲು ಸಾಧ್ಯವಾಗುತ್ತದೆ.

ಆದರೆ, ಡೀಪ್‌ಸೀಕ್ ಐಪಿ ಅಡ್ರೆಸ್ ಮತ್ತು ಬಳಸುವ ಉಪಕರಣಗಳ ಮಾಹಿತಿಯನ್ನು ಕಲೆಹಾಕುವುದರಿಂದ, ಇದು ಜಗತ್ತಿನ ಅತ್ಯಂತ ಪ್ರಬಲವಾದ, ಐರೋಪ್ಯ ಒಕ್ಕೂಟದ ಗೌಪ್ಯತೆಯ ನಿಯಮವಾದ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯಲೇಶನ್ನಿನಂತಹ (ಜಿಡಿಪಿಆರ್) ಗೌಪ್ಯತೆಯ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವುದಿಲ್ಲ. ಈ ನಿಯಮವನ್ನು 2016ರಲ್ಲಿ ರೂಪಿಸಿ, 2018ರಲ್ಲಿ ಜಾರಿಗೆ ತರಲಾಯಿತು. ಇದು ಬಳಕೆದಾರರ ಖಾಸಗಿ ಮಾಹಿತಿಗಳನ್ನು ರಕ್ಷಿಸುವ ನಿಯಮವಾಗಿದೆ. ಇನ್ನೊಂದೆಡೆ ಓಪನ್ಎಐ ಡೇಟಾ ಎನ್‌ಕ್ರಿಪ್ಷನ್ ಬಳಸಿಕೊಂಡು, ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುವತ್ತ ಗಮನ ಹರಿಸುತ್ತದೆ. ಆ ಮೂಲಕ ಗೌಪ್ಯತೆಯ ಕಾನೂನುಗಳನ್ನು ಪಾಲಿಸಲು ಮಾಹಿತಿಗಳನ್ನು ಅಜ್ಞಾತವಾಗಿಡುತ್ತದೆ.

ಡೀಪ್‌ಸೀಕ್ ಯಶಸ್ಸಿನಿಂದ ಸಿಗುವ ಸಂದೇಶವೇನು?

ಡೀಪ್‌ಸೀಕ್ ತನ್ನ ಆರ್1 ಮಾಡೆಲ್ ಬಿಡುಗಡೆಗೊಳಿಸಿದ್ದರಿಂದ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ, ಅದರಲ್ಲೂ ತಂತ್ರಜ್ಞಾನ ಉದ್ಯಮದಲ್ಲಿ ಭಾರೀ ಅಲೆಗಳೆದ್ದಿವೆ. ಒಂದು ಮುಖ್ಯ ಟ್ರೇಡಿಂಗ್ ದಿನದಂದು ನಾಸ್ದಾಕ್ ಕಾಂಪೋಸಿಟ್ ಸೂಚ್ಯಂಕ 3.1% ಇಳಿಕೆ ಕಂಡು, 1 ಟ್ರಿಲಿಯನ್ ಡಾಲರ್‌ಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಅಳಿಸಿಹಾಕಿದೆ. ವರದಿಗಳ ಪ್ರಕಾರ, ದೊಡ್ಡ ತಂತ್ರಜ್ಞಾನ ಕಂಪನಿಗಳು ಎದುರಿಸಿರುವ ನಷ್ಟದ ಪರಿಣಾಮವಾಗಿ ಈ ಕುಸಿತ ಕಂಡುಬಂದಿದೆ. ಎನ್‌ವೀಡಿಯಾ ಸಂಸ್ಥೆ ಅತಿದೊಡ್ಡ ಹೊಡೆತ ಅನುಭವಿಸಿದ್ದು, 700 ಬಿಲಿಯನ್ ಡಾಲರ್‌ಗೂ ಹೆಚ್ಚಿನ ನಷ್ಟ ಅನುಭವಿಸಿ, ಯಾವುದೇ ಕಂಪನಿ ಒಂದು ದಿನದಲ್ಲಿ ಅನುಭವಿಸಿದ ಅತಿದೊಡ್ಡ ನಷ್ಟವನ್ನು ಎದುರಿಸಿದೆ.

ಅಡಚಣೆ ಒಡ್ಡಬಲ್ಲ ನಾವೀನ್ಯತೆ ಮತ್ತು ಎನ್‌ವೀಡಿಯಾ ತಂತ್ರಜ್ಞಾನ

ಪ್ರಸ್ತುತ ಸನ್ನಿವೇಶದಲ್ಲಿ, ಎನ್‌ವೀಡಿಯಾ ಸಂಸ್ಥೆ ಇಂತಹ ನಷ್ಟ ಅನುಭವಿಸಿರುವುದಕ್ಕೆ ಕೆಲವು ಸಂಭಾವ್ಯ ಕಾರಣಗಳು:

ಅಸಾಧಾರಣ ಸಾಮರ್ಥ್ಯ: ಡೀಪ್‌ಸೀಕ್ ಆರ್1 ಮಾದರಿ ಎಐ ಕಾರ್ಯಗಳಲ್ಲಿ ಎನ್‌ವೀಡಿಯಾ ಜಿಪಿಯುಗಳಿಗೆ ಹೋಲಿಸಿದರೆ ಉತ್ಕೃಷ್ಟ ಪ್ರದರ್ಶನ ನೀಡಬಲ್ಲದು. ಇದರಿಂದಾಗಿ ಎಐ ಡೆವಲಪರ್‌ಗಳು ಮತ್ತು ಸಂಶೋಧಕರಿಗೆ ಎನ್‌ವೀಡಿಯಾ ಜಿಪಿಯುಗಳು ಅಷ್ಟು ಅನಿವಾರ್ಯವಲ್ಲ ಎಂಬ ಭಾವನೆ ಮೂಡಿಸಬಹುದು.

ಕಡಿಮೆ ವೆಚ್ಚದಾಯಕ: ಆರ್1 ಎನ್‌ವೀಡಿಯಾಗಿಂತಲೂ ಕಡಿಮೆ ವೆಚ್ಚದಾಯಕವಾಗಬಹುದು. ಇದು ಆರಂಭಿಕ ಖರೀದಿಯಲ್ಲಿ, ಅಥವಾ ಕಾರ್ಯಾಚರಣಾ ವೆಚ್ಚದಲ್ಲಿ ಎನ್‌ವೀಡಿಯಾಗಿಂತ ಕಡಿಮೆ ವೆಚ್ಚದಾಯಕವಾಗಿದ್ದು, ವೆಚ್ಚದ ಕುರಿತು ಚಿಂತಿಸುವ ಬಳಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ.

ವಿಶೇಷ ಹಾರ್ಡ್‌ವೇರ್: ಡೀಪ್‌ಸೀಕ್ ತನ್ನ ಆರ್1 ಮಾಡೆಲ್‌ಗಾಗಿ ವಿಶೇಷ ಹಾರ್ಡ್‌ವೇರ್ ಅನ್ನು ಅಭಿವೃದ್ಧಿ ಪಡಿಸಿರುವ ಸಾಧ್ಯತೆಗಳಿವೆ. ಇದು ಎನ್‌ವೀಡಿಯಾ ಸಾಮಾನ್ಯ ಬಳಕೆಗೆ ನಿರ್ಮಿಸಿರುವ ಜಿಪಿಯುಗಳನ್ನು ಎಐ ಬಳಕೆಯಲ್ಲಿ ಸೋಲಿಸಬಲ್ಲದು.

ಅಡಚಣೆ ಒಡ್ಡಬಲ್ಲ ನಾವೀನ್ಯತೆ: ಆರ್1 ಎಐ ತಂತ್ರಜ್ಞಾನದಲ್ಲಿ ಹೊಸ ವಿನ್ಯಾಸ, ಅಥವಾ ಅಲ್ಗಾರಿದಂನಂತಹ ಹೊಸ ನಾವೀನ್ಯತೆಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ. ಇದರಿಂದಾಗಿ ಎನ್‌ವೀಡಿಯಾದ ಪ್ರಸ್ತುತ ಬಳಕೆಯಲ್ಲಿರುವ ಜಿಪಿಯು ತಂತ್ರಜ್ಞಾನ ಸ್ಪರ್ಧೆಯೊಡ್ಡಲು ವಿಫಲವಾಗಬಹುದು.

ಮಾರುಕಟ್ಟೆ ಪಾಲಿನ ನಷ್ಟ: ಒಂದು ವೇಳೆ ಆರ್1 ಹೆಚ್ಚಾಗಿ ಬಳಕೆಗೆ ಬಂದರೆ, ಅದರ ಪರಿಣಾಮವಾಗಿ ಎಐ ಹಾರ್ಡ್‌ವೇರ್ ಮಾರುಕಟ್ಟೆಯಲ್ಲಿ ಎನ್‌ವೀಡಿಯಾದ ಮಾರುಕಟ್ಟೆ ಪಾಲು ಅಪಾರ ಪ್ರಮಾಣದ ಕುಸಿತ ಕಂಡು, ಅದರ ಆದಾಯ ಮತ್ತು ಹೂಡಿಕೆದಾರರ ವಿಶ್ವಾಸಗಳೂ ಕಡಿಮೆಯಾಗಬಹುದು.

ಬೇಡಿಕೆಯಲ್ಲಿನ ಬದಲಾವಣೆ: ಆರ್1 ಸಾಮರ್ಥ್ಯಗಳ ಕಾರಣದಿಂದ, ನಿರ್ದಿಷ್ಟ ಎಐ ಬಳಕೆಗಳಿಗೆ ಹೆಚ್ಚಿನ ಬೇಡಿಕೆ ಎದುರಾಗಬಲ್ಲದು. ಅಥವಾ, ಡೀಪ್‌ಸೀಕ್ ಹಾರ್ಡ್‌ವೇರ್‌ಗಳಿಗೆ ಸೂಕ್ತವಾದಂತಹ ಕೆಲಸಗಳು ಹೆಚ್ಚಾಗಿ, ಎನ್‌ವೀಡಿಯಾ ಜಿಪಿಯುಗಳಿಗೆ ಬೇಡಿಕೆ ಕುಸಿತಗೊಳ್ಳಬಹುದು.

ಋಣಾತ್ಮಕ ಭಾವನೆ: ಆರ್1 ಮಾಡೆಲ್ ಬಿಡುಗಡೆ ಮತ್ತು ಎನ್‌ವೀಡಿಯಾ ಮೇಲೆ ಅದರ ಪರಿಣಾಮಗಳ ಕಾರಣದಿಂದಾಗಿ ಹೂಡಿಕೆದಾರರಲ್ಲಿ ಋಣಾತ್ಮಕ ಭಾವನೆ ಮೂಡುವ ಸಾಧ್ಯತೆಗಳಿವೆ. ಇದರ ಪರಿಣಾಮವಾಗಿ, ಅವರು ಹೊಂದಿರುವ ಎನ್‌ವೀಡಿಯಾ ಷೇರುಗಳನ್ನು ಮಾರಾಟ ಮಾಡಲಾರಂಭಿಸಿದರೆ, ಕಂಪನಿಯ ಮಾರುಕಟ್ಟೆ ಪಾಲು ಕುಸಿಯಬಹುದು.

ಆದರೆ, ಗಮನಿಸಬೇಕಾದ ಅಂಶವೆಂದರೆ, ಇವೆಲ್ಲವೂ ಹೀಗಾಗಬಹುದು ಎನ್ನುವ ಆಲೋಚನೆಗಳಷ್ಟೇ. ಎನ್‌ವೀಡಿಯಾ ಮೇಲೆ ಯಾವುದೇ ಹೊಸ ಎಐ ಮಾಡೆಲ್‌ನ ಪರಿಣಾಮ ಅದರ ಸಾಮರ್ಥ್ಯ, ಬೆಲೆ, ಮಾರುಕಟ್ಟೆಯಲ್ಲಿ ಅದಕ್ಕೆ ಬೇಡಿಕೆ, ಅದರ ಹೊಂದಿಕೊಳ್ಳುವಿಕೆಗಳ ಜೊತೆಗೆ, ಎನ್‌ವೀಡಿಯಾದ ಪ್ರತಿಕ್ರಿಯೆ ಮತ್ತು ನಾವೀನ್ಯತೆಗಳಂತಹ ಹಲವಾರು ಅಂಶಗಳನ್ನು ಆಧರಿಸಿವೆ.

ಷೇರು ಮಾರುಕಟ್ಟೆಯನ್ನು ಮೀರಿದೆ ಡೀಪ್‌ಸೀಕ್

ಇತ್ತೀಚಿನ ಬೆಳವಣಿಗೆಗಳು ಎನ್‌ವೀಡಿಯಾವನ್ನು ಅಗ್ರಸ್ಥಾನದಿಂದ ಕೆಳಗಿಳಿಸಿ, ಆ್ಯಪಲ್ ಅನ್ನು ಅಮೆರಿಕಾದ ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿಸಿವೆ. ಇತರ ತಂತ್ರಜ್ಞಾನ ದೈತ್ಯರಾದ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳೂ ಬಹಳಷ್ಟು ನಷ್ಟ ಅನುಭವಿಸಿವೆ.

* ಡೀಪ್‌ಸೀಕ್‌ನ ನಿರಂತರ ಪ್ರಗತಿ ಕೇವಲ ಷೇರು ಮೌಲ್ಯಗಳ ಮೇಲೆ ಮಾತ್ರವೇ ಪರಿಣಾಮ ಬೀರುತ್ತಿಲ್ಲ. ಡೀಪ್‌ಸೀಕ್‌ನ ಇಂಧನ ದಕ್ಷತೆಯ ಪರಿಣಾಮದಿಂದಾಗಿ ತಂತ್ರಜ್ಞಾನ ವಲಯದ ಒಟ್ಟಾರೆ ಶಕ್ತಿ ಬಳಕೆ ಬಹುಮಟ್ಟಿಗೆ ಕಡಿಮೆಯಾಗಬಹುದು ಎಂಬ ಆತಂಕದ ಪರಿಣಾಮವಾಗಿ ಇಂಧನ ವಲಯಕ್ಕೂ ಹೊಡೆತ ಬಿದ್ದಿದೆ.

* ಜಿಇ ವರ್ನೋವಾ ಮತ್ತು ವಿಸ್ತ್ರಾಗಳಂತಹ ಗಾಳಿ ಮತ್ತು ಅನಿಲ ಟರ್ಬೈನ್‌ಗಳನ್ನು ನಿರ್ಮಿಸುವ ಸಂಸ್ಥೆಗಳ ಷೇರುಗಳು 21% ಮತ್ತು 28% ಕುಸಿತ ಕಂಡಿವೆ.

* ಎಐ ಉದ್ಯಮದಲ್ಲಿ ಡೀಪ್‌ಸೀಕ್ ಪ್ರಬಲ ಸ್ಪರ್ಧಿಯಾಗಿ ಬೆಳೆಯುತ್ತಿರುವುದರ ದೀರ್ಘಕಾಲೀನ ಪರಿಣಾಮ ಏನಾಗಬಹುದು ಎಂದು ವಾಲ್ ಸ್ಟ್ರೀಟ್ ತಜ್ಞರು ಈಗ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಡೀಪ್‌ಸೀಕ್‌ನ ಕಡಿಮೆ ಬೆಲೆಯ, ಹೆಚ್ಚು ಇಂಧನ ದಕ್ಷತೆಯ ಮಾಡೆಲ್‌ಗಳಿಂದಾಗಿ, ಅಮೆರಿಕನ್ ಕಂಪನಿಗಳು ಎಐ ತಂತ್ರಜ್ಞಾನದ ಮೇಲೆ ಮಿತಿಮೀರಿ ಹೂಡಿಕೆ ಮಾಡುತ್ತಿವೆಯೇ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿವೆ.

* ಭೌಗೋಳಿಕ ರಾಜಕಾರಣದ ವಿಚಾರಗಳೂ ಮುಖ್ಯ ಅಂಶವಾಗಿದ್ದು, ಇದಕ್ಕೆ ಅಮೆರಿಕಾ ಸರ್ಕಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬ ಕುರಿತು ಅನಿಶ್ಚಿತತೆಗಳಿವೆ. ಚೀನಾದಿಂದ ನಡೆಸುವ ಆಮದಿನ ಮೇಲಿನ ಸುಂಕದ ಸಾಧ್ಯತೆಗಳು ಮತ್ತು ಚೀನೀ ಆಮದಿನ ಮೇಲಿನ ಹೊಸ ನಿಯಮಗಳು ಡೀಪ್‌ಸೀಕ್ ನಂತಹ ತಂತ್ರಜ್ಞಾನಗಳು ಅಮೆರಿಕಾದ ಮಾರುಕಟ್ಟೆಯಲ್ಲಿ ಹೇಗೆ ಬಳಕೆಯಾಗಬಹುದು ಎನ್ನುವುದರ ಮೇಲೆ ಪರಿಣಾಮ ಬೀರಬಹುದು.

ನಿಮ್ಮ ಖಾಸಗಿ ಗೌಪ್ಯತೆ ಅಪಾಯದಲ್ಲಿದೆಯೇ?

ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೂ, ಡೀಪ್‌ಸೀಕ್ ಖಾಸಗಿ ಗೌಪ್ಯತೆಯ ವಿಚಾರದಲ್ಲಿ ಸಾಕಷ್ಟು ಟೀಕೆಗೊಳಗಾಗಿದೆ. ಚೀನಾ ಮಾಲಿಕತ್ವದ ಟಿಕ್‌ಟಾಕ್ ಸಂಸ್ಥೆಯ ಕುರಿತೂ ಇಂತಹ ಆರೋಪಗಳು ಎದುರಾಗಿದ್ದವು. ಡೀಪ್‌ಸೀಕ್ ಬಳಕೆದಾರರ ಜನ್ಮದಿನ, ಟೈಪ್ ಮಾಡುವ ರೀತಿ, ಧ್ವನಿ ಮತ್ತು ಅಕ್ಷರ ಮಾಹಿತಿಗಳು, ಅಪ್‌ಲೋಡ್ ಮಾಡಲಾದ ಫೈಲ್‌ಗಳು, ಮತ್ತು ಚಾಟ್‌ಗಳಂತಹ ಅಪಾರ ಪ್ರಮಾಣದ ವೈಯಕ್ತಿಕ ಮಾಹಿತಿಗಳನ್ನು ಕಲೆಹಾಕುತ್ತದೆ. ಈ ಮಾಹಿತಿಗಳೆಲ್ಲ ಚೀನಾದಲ್ಲಿರುವ ಸರ್ವರ್‌ಗಳಲ್ಲಿ ಸಂಗ್ರಹಿಸಲ್ಪಡುತ್ತವೆ.

ಚೀನಾದ ಕಠಿಣ ಗುಪ್ತಚರ ಕಾನೂನುಗಳ ಪರಿಣಾಮವಾಗಿ, ಅಲ್ಲಿನ ಎಲ್ಲ ಸಂಸ್ಥೆಗಳೂ ರಾಷ್ಟ್ರೀಯ ಗುಪ್ತಚರ ಚಟುವಟಿಕೆಗಳಿಗೆ ನೆರವಾಗುವ ಅವಶ್ಯಕತೆಯಿದೆ. ಇದು ಬಳಕೆದಾರರ ಮಾಹಿತಿ ಸುರಕ್ಷತೆ ಮತ್ತು ಗೌಪ್ಯತೆಯ ಕುರಿತು ಗಂಭೀರವಾದ ಕಳವಳಗಳನ್ನು ಮೂಡಿಸಿದೆ.

ಈ ಕಳವಳಗಳ ಜೊತೆಗೆ, ಚಾಟ್ ಜಿಪಿಟಿ ಮತ್ತು ಗೂಗಲ್ ಜೆಮಿನಿಯಂತ ಎಐ ಮಾಡೆಲ್‌ಗಳು ಡೀಪ್‌ಸೀಕ್ ಕುರಿತು ಆತಂಕದ ಧ್ವನಿ ಎತ್ತಿವೆ. ಈ ತಂತ್ರಜ್ಞಾನ ಮೂಲತಃ ಚೀನಾದಿಂದ ಬರುವುದು ಇಂದಿನ ಭೌಗೋಳಿಕ ರಾಜಕಾರಣದ ಸೂಕ್ಷ್ಮ ಸನ್ನಿವೇಶದಲ್ಲಿ ಸಂಭಾವ್ಯ ಅಪಾಯ ತಂದೊಡ್ಡಲಿದೆ ಎಂದು ಅವುಗಳು ಅಭಿಪ್ರಾಯ ಪಟ್ಟಿವೆ.

ಈ ಸಾಫ್ಟ್‌ವೇರ್ ಬಚ್ಚಿಟ್ಟ ವೈರಸ್‌ಗಳನ್ನು, ಅಥವಾ ಗುಪ್ತಚರ ವ್ಯವಸ್ಥೆಗಳನ್ನು ಹೊಂದಿರಬಹುದು ಎಂದೂ ಜನರು ಆತಂಕ ವ್ಯಕ್ತಪಡಿಸಿದ್ದು, ಅವುಗಳು ಬಳಕೆದಾರರ ಸುರಕ್ಷತೆಗೆ ಅಪಾಯಕಾರಿಯಾಗಿವೆ. ಡಿಸೆಂಬರ್ ತಿಂಗಳಲ್ಲಿ ಒಂದು ದೋಷವನ್ನು ಗುರುತಿಸಿದ ಕಾರಣದಿಂದ, ಡೀಪ್‌ಸೀಕ್‌ನ ಭದ್ರತಾ ವಿಚಾರ ಪರಿಶೀಲಿಸಲ್ಪಡುತ್ತಿದೆ. ಈ ದೌರ್ಬಲ್ಯದ ಕಾರಣದಿಂದ ಹ್ಯಾಕರ್‌ಗಳು ಪ್ರಾಂಪ್ಟ್ ಇಂಜೆಕ್ಷನ್ ಬಳಸಿ, ಖಾತೆಗಳನ್ನು ತಮ್ಮದಾಗಿಸುವ ಅಪಾಯಗಳಿವೆ. ಆದರೆ, ಈ ಅಪಾಯವನ್ನು ಬಳಿಕ ಸರಿಪಡಿಸಲಾಯಿತು.

ಡೀಪ್‌ಸೀಕ್ ಬಳಕೆ ಬಹಳಷ್ಟು ಹೆಚ್ಚಾಗುತ್ತಿದ್ದಂತೆ, ಎಐ ಅಸಿಸ್ಟೆಂಟ್ ಮೇಲೆ 'ದೊಡ್ಡ ಪ್ರಮಾಣದ ದುರುದ್ದೇಶಪೂರಿತ ದಾಳಿ' ನಡೆದಿದೆ ಎಂದು ಡೀಪ್‌ಸೀಕ್ ಹೇಳಿಕೆ ನೀಡಿದ್ದರಿಂದ ಈ ವಿಚಾರ ಇನ್ನಷ್ಟು ಗಂಭೀರವಾಯಿತು. ಇದು ಪ್ರಸ್ತುತ ಭದ್ರತಾ ಸಮಸ್ಯೆಗಳನ್ನು ಎತ್ತಿಹಿಡಿದು, ಎಐ ನಿರ್ವಹಿಸುತ್ತಿರುವ ವೈಯಕ್ತಿಕ ಮಾಹಿತಿಗಳನ್ನು ಸಂರಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿದೆ.

ಡೀಪ್‌ಸೀಕ್ ನಂತಹ ಎಐ ಉಪಕರಣಗಳನ್ನು ಬಳಸುವ ಜನರು ಅದರೊಡನೆ ಬರುವ ಗೌಪ್ಯತೆ ಮತ್ತು ಸುರಕ್ಷತೆಯ ಅಪಾಯಗಳ ಕುರಿತು ಯೋಚಿಸುವ ಅಗತ್ಯವಿದೆ. ಈ ಆತಂಕಗಳು ಕೇವಲ ಮಾಹಿತಿಗಳನ್ನು ಖಾಸಗಿಯಾಗಿಡುವುದಕ್ಕೆ ಸೀಮಿತವಾಗಿರದೆ, ಸಂಗ್ರಹಿಸಿರುವ ಮಾಹಿತಿಗಳು ಬಳಕೆದಾರರ ಗಮನಕ್ಕೆ ಬರದಂತೆ ಹೇಗೆ ಬಳಕೆಯಾಗಬಹುದು ಎಂಬ ಕುರಿತೂ ವ್ಯಾಪಿಸಿವೆ. ಇದು ಎಐ ಮಾಡೆಲ್‌ಗಳ ತರಬೇತಿ, ಅಥವಾ ಇತರ ಗೌಪ್ಯ ಚಟುವಟಿಕೆಗಳನ್ನು ಒಳಗೊಂಡಿದೆ. ಎಐ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿದ್ದು, ವೈಯಕ್ತಿಕ ಮಾಹಿತಿಗಳನ್ನು ರಕ್ಷಿಸುವ ಮತ್ತು ಬಳಕೆದಾರರ ವಿಶ್ವಾಸವನ್ನು ಕಾಯ್ದುಕೊಳ್ಳುವ ಕುರಿತು ಸ್ಪಷ್ಟ ಅಭ್ಯಾಸಗಳನ್ನು ಹೊಂದುವ ಅಗತ್ಯವಿದೆ.

ಡೀಪ್‌ಸೀಕ್‌ಗೆ ಕೆಲವು ಪ್ರತಿಕ್ರಿಯೆಗಳು

ಎನ್‌ವೀಡಿಯಾ ಡೀಪ್‌ಸೀಕ್ ಅನ್ನು ಶ್ಲಾಘಿಸಿದ್ದು, ಇದು ಎಐನಲ್ಲಿ ಬಹುದೊಡ್ಡ ಹೆಜ್ಜೆ ಎಂದು ಬಣ್ಣಿಸಿದೆ. ಎಐ ಮಾಡೆಲ್ ಅನ್ನು ಬಳಸುತ್ತಾ ಅದರ ಸುಧಾರಣೆ, ಹೊಂದಾಣಿಕೆ ನಡೆಸುವ 'ಟೆಸ್ಟ್ ಟೈಮ್ ಸ್ಕೇಲಿಂಗ್' ಅನ್ನೂ ಎನ್‌ವೀಡಿಯಾ ಶ್ಲಾಘಿಸಿದೆ. ಈ ಪ್ರಕ್ರಿಯೆಯಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮೂಲ ವಿನ್ಯಾಸವನ್ನು ಬದಲಾಯಿಸದೆ, ಎಐ ನಿರ್ದಿಷ್ಟ ಕಾರ್ಯಗಳಿಗೆ, ಅಥವಾ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ಈ ವಿಧಾನ ರಫ್ತು ನಿಯಮಗಳನ್ನು ಅನುಸರಿಸುವ ಹೊಸ ಮಾದರಿಗಳ ಅಭಿವೃದ್ಧಿಗೆ ನೆರವಾಗುತ್ತದೆ.

ಎನ್‌ವೀಡಿಯಾ ಡೀಪ್‌ಸೀಕ್ ಅನ್ನು ಹೊಗಳಿದ್ದರೂ, ಎಐ ಕಾರ್ಯಗಳು ಎನ್‌ವೀಡಿಯಾ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ಸ್ (ಜಿಪಿಯು) ಎಂಬ ಶಕ್ತಿಶಾಲಿ ಕಂಪ್ಯೂಟರ್ ಚಿಪ್‌ಗಳ ಮೇಲೆ ಅವಲಂಬಿತವಾಗಿವೆ ಎಂದಿದೆ. ಈ ಚಿಪ್‌ಗಳು ಮೂಲತಃ ಕಂಪ್ಯೂಟರ್ ಆಟಗಳಲ್ಲಿ ಚಿತ್ರಗಳು ಮತ್ತು ವೀಡಿಯೋಗಳ ರೆಂಡರಿಂಗ್ ನಡೆಸಲು ನಿರ್ಮಿತವಾಗಿದ್ದು, ಈಗ ಅವುಗಳು ಎಐ ಕಾರ್ಯಕ್ರಮಗಳಲ್ಲಿ ಅಪಾರ ಪ್ರಮಾಣದ ಮಾಹಿತಿಗಳನ್ನು ಸಂಸ್ಕರಿಸಲು ಮತ್ತು ಸಂಕೀರ್ಣ ಲೆಕ್ಕಾಚಾರಗಳನ್ನು ಕ್ಷಿಪ್ರವಾಗಿ ನಡೆಸಲು ಬಳಕೆಯಾಗುತ್ತಿವೆ. ಇದು ಎಐ ಸುಗಮವಾಗಿ ಕಾರ್ಯಾಚರಿಸಲು ಶಕ್ತಿಶಾಲಿ ಹಾರ್ಡ್‌ವೇರ್‌ನ ಅವಶ್ಯಕತೆಯನ್ನು ಪ್ರದರ್ಶಿಸಿದೆ.

ಓಪನ್ ಎಐ ಸಿಇಒ ಆಗಿರುವ ಸ್ಯಾಮ್ ಆಲ್ಟ್‌ಮ್ಯಾನ್ ಅವರು ಡೀಪ್‌ಸೀಕ್‌ನ ಆರ್1 ಮಾದರಿಗೆ ಮೆಚ್ಚುಗೆ ಸೂಚಿಸಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ ಎಂದಿದ್ದಾರೆ. ಓಪನ್ ಎಐ ತನ್ನ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಆ ಮೂಲಕ ತನ್ನ ಗುರಿಯನ್ನು ಸಾಧಿಸಲು ಬದ್ಧವಾಗಿದೆ ಎಂದು ಆಲ್ಟ್‌ಮ್ಯಾನ್ ಹೇಳಿದ್ದಾರೆ. ಅವರು ಡೀಪ್‌ಸೀಕ್ ಒಂದು ಪ್ರಮುಖ ಸಾಧನೆಯಾಗಿದೆ ಎಂದಿದ್ದರೂ, ಓಪನ್ ಎಐ ದೀರ್ಘಾವಧಿಯ ಕುರಿತು ಆಲೋಚಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಏನಿದು ಅಮೆರಿಕವನ್ನೇ ನಡುಗಿಸಿದ ಚೀನಾದ ಉಚಿತ AI ಡೀಪ್‌ಸೀಕ್? ಬಳಕೆ, ಡೌನ್ಲೋಡ್ ಹೇಗೆ?

ಚೀನಾದ ಸರ್ಕಾರಿ ಮಾಧ್ಯಮ ಮತ್ತು ರಾಜಕಾರಣಿಗಳು ಡೀಪ್‌ಸೀಕ್ ಯಶಸ್ಸಿನ ಕುರಿತು ಅಪಾರ ಆಸಕ್ತಿ ತೋರಿದ್ದಾರೆ. ಅವರು ಈ ಸಾಧನೆಯನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕಾದ ನಾಯಕತ್ವಕ್ಕೆ ಸವಾಲೆಸೆಯುವ ರೀತಿಯಲ್ಲಿ ಪರಿಗಣಿಸಿದ್ದು, ಎಐ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗುವತ್ತ ಚೀನಾದ ಸರಿಯಾದ ಹೆಜ್ಜೆ ಎಂದು ಭಾವಿಸಿದ್ದಾರೆ. ಡೀಪ್‌ಸೀಕ್ ಸ್ಥಾಪಕ ಚೀನಾದ ಪ್ರೀಮಿಯರ್ ಲಿ ಕಿಯಾಂಗ್ ಅವರೊಡನೆ ಸಭೆಯಲ್ಲಿ ಭಾಗವಹಿಸಿದ್ದು, ಈ ಬೆಳವಣಿಗೆ ಡೀಪ್‌ಸೀಕ್ ಚೀನಾದ ರಾಷ್ಟ್ರೀಯ ಗುರಿಗಳಿಗೆ ಎಷ್ಟು ಮುಖ್ಯವಾಗಿದೆ ಎಂದು ಸಾಬೀತುಪಡಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡೀಪ್‌ಸೀಕ್ ಬೆಳವಣಿಗೆ ಅಮೆರಿಕನ್ ತಂತ್ರಜ್ಞಾನ ಉದ್ಯಮಕ್ಕೆ ಅವಕಾಶವೂ ಹೌದು, ಸವಾಲೂ ಹೌದು ಎಂದು ಭಾವಿಸಿದ್ದಾರೆ. ಡೀಪ್‌ಸೀಕ್ ಯಶಸ್ಸು ಅಮೆರಿಕನ್ ಕಂಪನಿಗಳಿಗೆ ನಾವೀನ್ಯತೆ ಸಾಧಿಸಿ, ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸ್ಪರ್ಧೆಯೊಡ್ಡಲು ಸ್ಫೂರ್ತಿ ನೀಡಿದೆ ಎಂದು ಟ್ರಂಪ್ ಹೇಳಿದ್ದು, ರಾಜಕಾರಣ ಮತ್ತು ಆರ್ಥಿಕತೆ ಎರಡರಲ್ಲೂ ಡೀಪ್‌ಸೀಕ್ ಮಹತ್ವವನ್ನು ಒಪ್ಪಿಕೊಂಡಿದ್ದಾರೆ.

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್