
ದೀಪಾವಳಿ ಹಬ್ಬಕ್ಕೆ ಕೇವಲ ದಿನಗಣನೆಯಷ್ಟೇ ಬಾಕಿ ಇದೆ. ಹಬ್ಬ ಬಂತು ಎಂದರೆ ಬಹುತೇಕ ಎಲ್ಲಾ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ. ಕೆಲವು ಕಡೆ ಗಿಫ್ಟ್ ವೋಚರ್‌ಗಳನ್ನು ನೀಡಿದರೆ ಮತ್ತೆ ಕೆಲವು ಕಂಪನಿಗಳಲ್ಲಿ ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ ಹಾಗೂ ಹಲವು ವಿವಿಧ ರೀತಿಯ ಗಿಫ್ಟ್ ಐಟಂಗಳನ್ನು ನೀಡಲಾಗುತ್ತದೆ. ಅನೇಕ ಉದ್ಯೋಗಿಗಳು ತಮ್ಮ ಸಂಸ್ಥೆಯಲ್ಲಿ ಸಿಕ್ಕ ಉಡುಗೊರೆಗಳ ಫೋಟೋ ವೀಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದಾರೆ. ಆದರೆ ಕೆಲವು ಕಂಪನಿಗಳ ಉದ್ಯೋಗಿಗಳು ತಮಗೆ ಯಾವುದೇ ಗಿಫ್ಟ್ ಸಿಕ್ಕಿಲ್ಲ ಎಂದು ಬೇಸರಿಸುತ್ತಿದ್ದಾರೆ.
ಆದರೆ ದೆಹಲಿ ಎನ್‌ಸಿಆರ್‌ನಲ್ಲಿ ಕಾರ್ಯ ನಿರ್ವಹಿಸುವ ಎರಡು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಯಾರೂ ನೀಡದಂತಹ ವಿಶೇಷ ಉಡುಗೊರೆಗಳನ್ನು ನೀಡಿವೆ. ಹೌದು ದೀಪಾವಳಿ ಹಬ್ಬವನ್ನು ಆಚರಿಸುವುದಕ್ಕೆ ಒಂದು ವಾರ ಕಾಲ ಸಂಪೂರ್ಣ ರಜೆ ನೀಡುವ ಮೂಲಕ ದೆಹಲಿ ಎನ್‌ಸಿಆರ್‌ನಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಭಾರಿ ಸುದ್ದಿಯಲ್ಲಿವೆ.
ನೋಯ್ಡಾ ಮೂಲದ ಹೆಲ್ತಿ ಸ್ನ್ಯಾಕಿಂಗ್ ಬ್ರಾಂಡ್ ಫರ್ಮ್ಲಿ ಹಾಗೂ ದೆಹಲಿ ಮೂಲದ ಪಿಆರ್ ಏಜೆನ್ಸಿ ಇಲೈಟ್ ಮರ್ಕ್ಯೂ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಒಂದು ವಾರಗಳ ಕಾಲ ರಜೆ ಘೋಷಣೆ ಮಾಡಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಈ ಎರಡು ಕಂಪನಿಗಳ ಕ್ರಮಕ್ಕೆ ಭಾರಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಲಿಂಕ್ಡಿನ್‌ನಲ್ಲಿ ಫರ್ಮ್ಲಿ ಸಂಸ್ಥೆ ಮಾಡಿದ ಪೋಸ್ಟ್ ಈಗ ವೈರಲ್ ಆಗ್ತಿದ್ದು, ಈ ಸಂಸ್ಥೆ ಅಧಿಕೃತವಾಗಿ ಆಕ್ಟೋಬರ್ 20ರಿಂದ ಆಕ್ಟೋಬರ್ 26ರವರೆಗೆ ಮುಚ್ಚಲ್ಪಟ್ಟಿರುತ್ತದೆ. ಈ ಮೂಲಕ ಉದ್ಯೋಗಿಗಳಿಗೆ ಟಾರ್ಗೆಟ್ ಬದಲು ಕುಟುಂಬಕ್ಕೆ ಉದ್ಯೋಗಿಗಳು ಸಮಯ ನೀಡುವುದಕ್ಕೆ ಮಹತ್ವ ನೀಡಿದೆ.
ಇವರು ಮಾಡಿದ ಪೋಸ್ಟ್ ಹೀಗಿದೆ.. ಉತ್ತಮ ವಿಚಾರ ಎಂದರೆ ದೀಪಾವಳಿ ಎಂದರೆ ಟಾರ್ಗೆಟ್‌ನ್ನು ಬೆನ್ನುತ್ತುವುದಲ್ಲ, ಇದು ನಿಮ್ಮ ಸೋದರ ಸಂಬಂಧಿಗೂ ಮೊದಲು ಕೊನೆಯ ಬೈಟ್‌ನ್ನು ಕಸಿದುಕೊಳ್ಳಲು ಬೆನ್ನತ್ತುವಂತಹ ರೇಸ್. ಈ ವರ್ಷ ನಾವು ಸರಿಯಾದುದನ್ನು ಮಾಡುತ್ತಿದ್ದೇವೆ. ಸಂಪೂರ್ಣ ಫರ್ಮ್ಲಿ ಫೇಮ್ ಆಹಾರ, ಸಂತೋಷ ಹಾಗೂ ಕುಟುಂಬದ ಜೊತೆ ಸಮಯ ಕಳೆಯುವುದಕ್ಕಾಗಿ ಬಿಡುವು ನೀಡಲಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಸಂತೋಷದಿಂದ ಕೂಡಿದ ದೀಪಾವಳಿಯ ಶುಭಾಶಯಗಳು ಎಂದು ಬರೆದು ಸಂದೇಶವನ್ನು ಪೋಸ್ಟ್ ಮಾಡಲಾಗಿದೆ.
ಹಾಗೆಯೇ ಇಲೈಟ್ ಮರ್ಕ್ಯೂ ಸಿಇಒ ರಜತ್ ಗ್ರೋವರ್ ಅವರು ಕೂಡ ತಮ್ಮ ಉದ್ಯೋಗಿಗಳಿಗೆ ಹಬ್ಬಕ್ಕಾಗಿ ವಾರಗಳ ಕಾಲ ರಜೆ ನೀಡಿದ್ದಾರೆ. ಆಕ್ಟೋಬರ್ 18 ರಿಂದ 26ರವರೆಗೆ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಹಬ್ಬದ ನಿಮಿತ್ತ ರಜೆ ನೀಡುವುದಾಗಿ ಉದ್ಯೋಗಿಗಳಿಗೆ ಇಮೇಲ್ ಸಂದೇಶ ಕಳುಹಿಸಲಾಗಿದ್ದು, ಇದು ದೇಸಿ ಹಬ್ಬದ ಖುಷಿಯಲ್ಲಿರುವ ಉದ್ಯೋಗಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ.
ಬಹುತೇಕ ಕಂಪನಿಗಳು ವಾರದ ಕಾಲ ರಜೆ ನೀಡುವುದು ಬಿಡಿ ಪುಟ್ಟ ಗಿಫ್ಟ್ ನೀಡುವುದಕ್ಕೂ ಯೋಚನೆ ಮಾಡ್ತಾರೆ. ಹೀಗಿರುವಾಗ ಎರಡು ಕಂಪನಿಗಳು ವಾರದ ಕಾಲ ರಜೆ ನೀಡಿ ಉದ್ಯೋಗಿಗಳಿಗೆ ಕುಟುಂಬದ ಜೊತೆ ಸಮಯ ಕಳೆಯುವುದಕ್ಕೆ ಅವಕಾಶ ನೀಡಿವೆ. ಹೀಗಾಗಿ ಈ ಪೋಸ್ಟ್‌ಗಳು ವೈರಲ್ ಆಗುತ್ತಿದ್ದು, ರಜೆಯೂ ಸಿಗದ ಅತ್ತ ಗಿಫ್ಟ್ ಕೂಡ ಸಿಗದ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗಳನ್ನು ಶಪಿಸುತ್ತಾ ತಮ್ಮ ದುರಾದೃಷ್ಟಕ್ಕೆ ಹಲಬುತ್ತಿದ್ದಾರೆ.
ಇದನ್ನೂ ಓದಿ: ನಾಡಿಗೆ ಬಂದ ಕಾಡಾನೆಯ ಬಾಲ ಎಳೆದ ಕಿಡಿಗೇಡಿ: ಕಾಡುಪ್ರಾಣಿಗಳಂತೆ ವರ್ತಿಸಿದ ಜನರ ಬಗ್ಗೆ ತೀವ್ರ ಆಕ್ರೋಶ
ಇದನ್ನೂ ಓದಿ: ಕಾಲ್‌ನಲ್ಲಿ ವೈದ್ಯರ ಮಾರ್ಗದರ್ಶನ: ರೈಲಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆರಿಗೆ ಮಾಡಿಸಿದ ಯುವಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ