ಏರುತ್ತಿದೆ ಕೊರೋನಾ ಪ್ರಕರಣ ಸಂಖ್ಯೆ, ಮಹಾರಾಷ್ಟ್ರ ಮತ್ತೆ ಲಾಕ್ಡೌನ್?| ಮಹಾರಾಷ್ಟ್ರಕ್ಕೆ ಹೋಗಬೇಕೇ?: ಕೋವಿಡ್ ನೆಗೆಟಿವ್ ಕಡ್ಡಾಯ
ಮುಂಬೈ(ನ.24): ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೊರೋನಾ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಡಿಸೆಂಬರ್‌ನಲ್ಲಿ ಮತ್ತೊಂದು ಲಾಕ್‌ಡೌನ್ ಹೇರುವ ಸಾಧ್ಯತೆ ಇದೆ. ಈ ಬಗ್ಗೆ ಡಿಸಿಎಂ ಅಜಿತ್ ಪವಾರ್ ಸುಳಿವು ನೀಡಿದ್ದಾರೆ.
ಗಣೇಶ ಚತುರ್ಥಿ ಮತ್ತು ದೀಪಾವಳಿ ಅವಧಿಯಲ್ಲಿ ಜನರ ಚಟುವಟಿಕೆಗಳು ಕೊರೋನಾ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಮುಂದಿನ 8-10 ದಿನಗಳ ಈ ಬಗ್ಗೆ ನಿಗಾವಹಿಸುತ್ತೇವೆ. ಕೊರೋನಾ ತಹಬದಿಗೆ ಬರದಿದ್ದರೆ ಮತ್ತೊಮ್ಮೆ ಲಾಕ್‌ಡೌನ್ ನಿರ್ಧಾರ ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದ ಇಲಾಖೆಗಳ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಜೂನಿಯರ್ ಪವಾರ್ ತಿಳಿಸಿದರು.
undefined
ಮತ್ತೊಂದೆಡೆ, ಸರ್ಕಾರದ ಸುರಕ್ಷಿತ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ರಾಜ್ಯಕ್ಕೆ ಕೊರೋನಾದ 2ನೇ ಅಲೆಯು ಸುನಾಮಿಯಂತೆ ಅಪ್ಪಳಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದರು. ತನ್ಮೂಲಕ ಜನ ಸಾಮಾನ್ಯರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ್ತೊಂದು ಲಾಕ್‌ಡೌನ್‌ಗೆ ಅವಕಾಶ ಕಲ್ಪಿಸದಂತೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರಕ್ಕೆ ಹೋಗಬೇಕೇ?: ಕೋವಿಡ್ ನೆಗೆಟಿವ್ ಕಡ್ಡಾಯ
ಕೊರೋನಾ ಹೆಚ್ಚಳದ ಭೀತಿ ಕಾರಣ ದಿಲ್ಲಿ, ರಾಜಸ್ಥಾನ, ಗುಜರಾತ್ ಹಾಗೂ ಗೋವಾದಿಂದ ಮಹಾರಾಷ್ಟ್ರ ಪ್ರವೇಶಿಸುವವರು ಕಡ್ಡಾಯವಾಗಿ ‘ಕೋವಿಡ್ ನೆಗೆಟಿವ್’ ವರದಿ ಹೊಂದಿರಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಈ 4 ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ವಿಮಾನಗಳನ್ನು ಏರುವ ಪ್ರಯಾಣಿಕರು ‘ಕೋವಿಡ್ ನೆಗೆಟಿವ್’ ಆರ್‌ಟಿ-ಪಿಸಿಆರ್ ವರದಿ ಇಟ್ಟುಕೊಂಡಿರಬೇಕು. ಬಂದಿಳಿಯುತ್ತಿದ್ದಂತೆಯೇ ಸಿಬ್ಬಂದಿಗೆ ವರದಿ ತೋರಿಸಬೇಕು. ಮಹಾರಾಷ್ಟ್ರಕ್ಕೆ ಬಂದು ಇಳಿಯುವ 72 ತಾಸಿನ ಮೊದಲು ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಂಡಿರಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇನ್ನು ರಸ್ತೆ ಹಾಗೂ ರೈಲು ಮಾರ್ಗದ ಮೂಲಕ ಸಾಗುವ ಪ್ರಯಾಣಿಕರಿಗೂ ಕೋವಿಡ್ ಪರೀಕ್ಷೆ ಕಡ್ಡಾಯ. ಈ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ರೋಗಲಕ್ಷಣಗಳಿದ್ದರೆ ಅವರನ್ನು ವಾಪಸು ಕಳಿಸಲಾಗುವುದು ಎಂದು ತಿಳಿಸಲಾಗಿದೆ.