ಮಗಳಿಗೆ ಸಮೋಸ ತೆಗೆದುಕೊಂಡು ಮನೆಗೆ ಬಂದಾಗ, ಸಮೋಸದ ಒಳಗೆ ಸತ್ತ ಹಲ್ಲಿ ಇತ್ತು. ರಾಜೇಶ್ ತಕ್ಷಣ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಸಮೋಸದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ತಿರುವನಂತಪುರ: ರಸ್ತೆಬದಿ ಅಥವಾ ಹೊರಗಿನ ಆಹಾರ ಸೇವಿಸುವಾಗ ತುಂಬಾ ಮುನ್ನೆಚ್ಚರಿಕೆಯಿಂದಿರಬೇಕು. ಬೆಲೆಗಿಂತ ಗುಣಮಟ್ಟಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ. ಆಹಾರ ಹೇಗೆ ಮತ್ತು ಎಲ್ಲಿ ತಯಾರಿಸಲಾಗುತ್ತೆ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ವ್ಯಕ್ತಿಯೊಬ್ಬರು ಮಗಳಿಗಾಗಿ ಎರಡು ಸಮೋಸಾ ಖರೀದಿಸಿ ತಂದಿದ್ದಾರೆ. ಮಗಳು ಸಮೋಸಾ ತಿನ್ನುವಾಗ ಅದರೊಳಗೆ ಸತ್ತ ಹಲ್ಲಿ ಕಂಡು ದಿಗ್ಭ್ರಾಂತಗೊಂಡಿದ್ದಾರೆ. ತಿನ್ನುವ ಮೊದಲೇ ಸಮೋಸಾ ಎರಡು ಭಾಗ ಮಾಡಿದ್ದರಿಂದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಅಂಗಡಿ ವಿರುದ್ಧ ಗ್ರಾಹಕ ತಕ್ಷಣ ಸಾಕ್ಷಿ ಸಮೇತ ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಕೇರಳದ ಇರಿಂಜಾಲಕ್ಕುಡ ಎಂಬಲ್ಲಿ ಬುಧವಾರ ನಡೆದಿದೆ.
ನಂದಪುರಂ ನಿವಾಸಿ ತೋಣಿಯಿಲ್ ಸಿನಿ ರಾಜೇಶ್ ಎಂಬವರು ಮಗಳಿಗಾಗಿ ಎರಡು ಸಮೋಸಾ ಖರೀದಿಸಿದ್ದರು. ಬುಧವಾರ ಮಧ್ಯಾಹ್ನ ರಾಜೇಶ್ ಮತ್ತು ಅವರ ಮಗ ಇರಿಂಜಾಲಕ್ಕುಡ ಬಸ್ ನಿಲ್ದಾಣದ ಸಮೀಪ ಕೂಡಲ್ಮಾಣಿಕ್ಯಂ ರಸ್ತೆಯಲ್ಲಿರುವ 'ಬಬಲ್ ಟೀ' ಅಂಗಡಿ ಚಹಾ ಕುಡಿದಿದ್ದಾರೆ. ಮನೆಗೆ ತೆರಳುವಾಗ ಮಗಳಿಗಾಗಿ ಎರಡು ಸಮೋಸ ಪಾರ್ಸೆಲ್ ತೆಗೆದುಕೊಂಡಿದ್ದರು. ಮನೆಗೆ ಬಂದು ಮಗಳು ಸಮೋಸ ತಿನ್ನುವಾಗ ಸಮೋಸದ ಒಳಗೆ ಸತ್ತ ಹಲ್ಲಿ ಕಂಡುಬಂದಿದೆ. ರಾಜೇಶ್ ತಕ್ಷಣ ಇರಿಂಜಾಲಕ್ಕುಡ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 1 ವರ್ಷ ಬೇಯಿಸಿದ ಆಹಾರ ತಿಂದ್ರೆ ಏನಾಗುತ್ತೆ?
ಆರೋಗ್ಯ ಇಲಾಖೆ ಅಧಿಕಾರಿಗಳು 'ಬಬಲ್ ಟೀ' ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ, ಸಮೋಸವನ್ನು ಇಲ್ಲಿ ತಯಾರಿಸುವುದಿಲ್ಲ, ಕಲ್ಲುಂಕುನ್ನು ಎಬಿ ಫುಡ್ ಪ್ರಾಡಕ್ಟ್ಸ್ ಎಂಬ ಸಂಸ್ಥೆಯಿಂದ ತಯಾರಿಸಿ ವಿತರಿಸಲಾಗುತ್ತದೆ ಎಂದು ಅಂಗಡಿಯವರು ತಿಳಿಸಿದ್ದಾರೆ.
ವೇಳೂಕ್ಕರ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಂಸ್ಥೆಯಲ್ಲಿ ಪರಿಶೀಲನೆ ನಡೆಸಿದಾಗ, ಅಲ್ಲಿ ಕೆಲಸ ಮಾಡುವವರಿಗೆ ಆರೋಗ್ಯ ಕಾರ್ಡ್ ಇಲ್ಲ ಎಂದು ಕಂಡುಬಂದಿದೆ. ಹೀಗಾಗಿ ಆರೋಗ್ಯ ಕಾರ್ಡ್ ಪಡೆದ ನಂತರವೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ. ಸಮೋಸದಲ್ಲಿ ಸತ್ತ ಹಲ್ಲಿ ಸಿಕ್ಕ ಪ್ರಕರಣವನ್ನು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ವಹಿಸಲಾಗಿದೆ. ಅವರ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇರಿಂಜಾಲಕ್ಕುಡ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 8 ಜನರು ಊಟ ಮಾಡಿದ್ದಕ್ಕೆ ₹77,000 ಬಿಲ್; ರೆಸ್ಟೋರೆಂಟ್ ವಿರುದ್ಧ ಯುವತಿ ಕಿಡಿ