
ನವದೆಹಲಿ (ಡಿ.06): ಮಕ್ಕಳಿದ್ದರೂ, ವೃದ್ಧಾಪ್ಯದ ದಿನಗಳಲ್ಲಿ ಅನಾಥರಂತೆ ಜೀವನ ಸಾಗಿಸಬೇಕಾದ ಅನಿವಾರ್ಯತೆಗೆ ತುತ್ತಾಗುತ್ತಿರುವ ಹಿರಿಯ ನಾಗರಿಕರ ಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ‘ನಿರ್ವಹಣಾ ವೆಚ್ಚ ಮತ್ತು ಪಾಲಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ-2007’ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ, ಹಿರಿಯ ನಾಗರಿಕರನ್ನು ಕೇವಲ ಅವರ ಮಕ್ಕಳಷ್ಟೇ ಅಲ್ಲ, ಅಳಿಯಂದಿರು ಮತ್ತು ಸೊಸೆಯಂದಿರು ಕೂಡ ಚೆನ್ನಾಗಿ ನೋಡಿಕೊಳ್ಳದೇ ಹೋದಲ್ಲಿ ಅವರೂ ಶಿಕ್ಷೆಗೆ ಅರ್ಹರು. ಅಳಿಯಂದಿರು ಹಾಗೂ ಸೊಸೆಯಂದಿರು ಕೂಡ ಮಾಸಾಶನ ನೀಡಬೇಕು ಎಂಬ ಅಂಶಗಳನ್ನು ಸೇರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಸಂಸತ್ತಿನ ಇದೇ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. 2007ರಲ್ಲಿ ಈ ಕಾಯ್ದೆ ಜಾರಿಗೆ ಬಂದ ನಂತರ ಆಗುತ್ತಿರುವ ಅತಿ ಮಹತ್ವದ ತಿದ್ದುಪಡಿ ಇದಾಗಿದೆ.
ಈ ಹಿಂದೆ ಹಿರಿಯ ಪೋಷಕರಿಗೆ ನೀಡಬೇಕಾದ ಮಾಸಾಶನದ ಮೊತ್ತಕ್ಕೆ 10000 ರು.ಗಳ ಮಿತಿ ಹಾಕಲಾಗಿತ್ತು. ಅದನ್ನೀಗ ತೆಗೆಯಲಾಗಿದೆ. ಅಲ್ಲದೆ ವೃದ್ಧರ ಜೀವನವನ್ನು ಸಹನೀಯಗೊಳಿಸುವ ಹಲವು ಅಂಶಗಳನ್ನು ತಿದ್ದುಪಡಿ ಕರಡು ಮಸೂದೆ ಒಳಗೊಂಡಿದೆ.
ಕರಡು ಮಸೂದೆಯಲ್ಲೇನಿದೆ?: ತಮ್ಮನ್ನು ಮಕ್ಕಳು ಅಥವಾ ಅಳಿಯಂದಿರು ಅಥವಾ ಸೊಸೆಯಂದಿರು ಚೆನ್ನಾಗಿ ನೋಡಿಕೊಳ್ಳದೇ ಹೋದರೆ ‘ನಿರ್ವಹಣಾ ವೆಚ್ಚ ನ್ಯಾಯಾಧಿಕರಣ’ಕ್ಕೆ ಹಿರಿಯ ನಾಗರಿಕರು ದೂರು ನೀಡಬಹುದು.
- ಹಿರಿಯ ನಾಗರಿಕರಿಗೆ ಮಾಸಿಕ ಗರಿಷ್ಠ 10 ಸಾವಿರ ರು. ನಿರ್ವಹಣಾ ವೆಚ್ಚ ನೀಡಬೇಕು ಎಂಬ ಅಂಶ ತೆಗೆದು ಹಾಕಲಾಗುವುದು. ಹೆಚ್ಚು ಆದಾಯ ಗಳಿಸುತ್ತಿರುವವರು 10 ಸಾವಿರ ರು.ಗಿಂತ ಹೆಚ್ಚು ಮಾಸಿಕ ನಿರ್ವಹಣಾ ವೆಚ್ಚ ನೀಡಬಹುದು.
- ಈ ಕಾಯ್ದೆಯಲ್ಲಿನ ನಿಯಮ ಉಲ್ಲಂಘಿಸಿದರೆ ಕನಿಷ್ಠ 5 ಸಾವಿರ ರು. ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆಗೆ ಅರ್ಹರು.
- 80 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರು ತಮ್ಮ ಮಕ್ಕಳು/ಸೊಸೆಯಂದಿರು/ಅಳಿಯಂದಿರು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರು ನೀಡಿದರೆ ಆ ದೂರಿನ ವಿಚಾರಣೆಗೆ ಆದ್ಯತೆ ನೀಡಬೇಕು.
- ಎಲ್ಲ ವೃದ್ಧಾಶ್ರಮಗಳು ಸರ್ಕಾರದಲ್ಲಿ ನೋಂದಣಿ ಮಾಡಿಸಬೇಕು. ವೃದ್ಧಾಶ್ರಮಗಳು ಸರ್ಕಾರವು ವಿಧಿಸುವ ನಿಯಮಗಳನ್ನು ಪಾಲಿಸಬೇಕು.
- ಪ್ರತಿ ಪೊಲೀಸ್ ಠಾಣೆಯಲ್ಲಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಗಳಲ್ಲಿ ಹಿರಿಯ ನಾಗರಿಕರ ದೂರಿನ ವಿಚಾರಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿ ಇರಬೇಕು.
- ಹಿರಿಯ ನಾಗರಿಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪ್ರತಿ ರಾಜ್ಯಗಳಲ್ಲೂ ವಿಶೇಷ ಸಹಾಯವಾಣಿ ಆರಂಭಿಸಲಾಗುವುದು.
- ‘ನಿರ್ವಹಣೆ’ ಎಂಬ ಪದದ ಅರ್ಥವನ್ನು ವಿಸ್ತರಿಸಲಾಗಿದೆ. ಇದರಲ್ಲಿ ಆಹಾರ, ಬಟ್ಟೆ, ಮನೆ ಒದಗಿಸುವಿಕೆ, ಆರೋಗ್ಯದ ಬಗ್ಗೆ ಕಾಳಜಿ- ಅಲ್ಲದೆ, ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆಯೂ ಸೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ