
ಒಡಿಶಾ: ಮನೆಗೆ ಕಪ್ಪೆ ಬಂತೆಂದು ಸಿಟ್ಟಿಗೆದ್ದ ಅಪ್ಪ ಅದನ್ನು ಹೊಡೆದು ಕೊಂದು ಸಾರು ಮಾಡಿದ್ದಾನೆ. ಇದನ್ನು ತಿಂದು ಆರು ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ಒಡಿಶಾದ ಕಿಯೋಂಜರ್ (Keonjhar) ಜಿಲ್ಲೆಯಲ್ಲಿ ನಡೆದಿದೆ. ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಮನೆಗೆ ಬಂದ ಕಪ್ಪೆಯನ್ನು ಕೊಂದು ಕರಿ ಮಾಡಿದ್ದು, ಇದನ್ನು ತಿಂದು ಮಗು ಆರು ವರ್ಷದ ಸುಮಿತ್ರಾ ಮುಂಡಾ ಸಾವನ್ನಪ್ಪಿದೆ. ಹಾಗೆಯೇ ಇನ್ನೊಂದು 4 ವರ್ಷದ ಮಗು ಮುನ್ನಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕಿಯೋಂಜರ್ ಜಿಲ್ಲೆಯ ಜೋಡಾ ಬ್ಲಾಕ್‌ನಲ್ಲಿ ಆ ಘಟನೆ ನಡೆದಿದೆ. ಇನ್ನು ತಂದೆ ಮುನ್ನಾ ಮುಂಡಾ ಕೂಡ ಈ ಕಪ್ಪೆ ಸಾಂಬಾರ್ ಅನ್ನು ಸೇವಿಸಿದ್ದು, ಅವರ ಆರೋಗ್ಯದಲ್ಲಿ ಯಾವುದೇ ಏರು ಪೇರಾಗಿಲ್ಲ. ಸುದ್ದಿ ತಿಳಿದು ಕಿಯೋಂಜರ್‌ನಿಂದ 70 ಕಿಲೋ ಮೀಟರ್ ದೂರದಲ್ಲಿರುವ ಬಮೆಬರಿ (Bamebari) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಗ್ರಾಮವಾದ ಗುರುಡ (Guruda)ಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಈ ಘಟನೆಯನ್ನು ವಿವರಿಸಿದ್ದಾರೆ.
ಎಂಥಾ ಸೋಜಿಗವಿದು... ಹಾವಿನ ಮೇಲೆ ಕಪ್ಪೆಯ ಜಾರುಬಂಡಿ ಆಟ: ವೈರಲ್ ವಿಡಿಯೋ
ಗುರುವಾರ ಸಂಜೆ 40 ವರ್ಷದ ಬುಡಕಟ್ಟು ಸಮುದಾಯದ ಮುನ್ನ ಮುಂಡಾ ಅವರ ಮನೆಗೆ ಕಪ್ಪೆಯೊಂದು ಪ್ರವೇಶಿಸಿದೆ. ಕಪ್ಪೆ ಬಂದಿದ್ದಕ್ಕೆ ಸಿಟ್ಟುಗೊಂಡ ಮುನ್ನ ಆ ಕಪ್ಪೆಯನ್ನು ಕೊಂದು ಹಾಕಿದರೆ ಮನೆಯ ಮಹಿಳೆಯರು ಅದನ್ನು ಕರಿ ಮಾಡಿದ್ದಾರೆ. ಇದನ್ನು ನಂತರದಲ್ಲಿ ಮನೆ ಮಂದಿ ಸೇವಿಸಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಮನೆಯ ಮಕ್ಕಳು ವಾಂತಿ ಮಾಡಲು ಶುರು ಮಾಡಿದ್ದು, ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಶುಕ್ರವಾರ ಬೆಳಗ್ಗೆ ಮಕ್ಕಳನ್ನು ಕಿಯೋಂಜರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಆರು ವರ್ಷದ ಬಾಲಕಿ ಸುಮಿತ್ರಾ ಸಾವನ್ನಪ್ಪಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಬಮೆಬೇರಿ ಪೊಲೀಸ್ ಠಾಣೆಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಬಮೆಬೇರಿ ಪೊಲೀಸ್ ಠಾಣೆಯ ಉಸ್ತುವಾರಿ ಸ್ವರೂಪ್ ರಂಜನ್ ನಾಯಕ್ (Swarup Ranjan Nayak) ಹೇಳಿದರು.
ಹೂವೇ ಹೂವೇ... ಹೂವಿಗೆ ಮನಸೋತ ಮಂಡೂಕ.... ವಿಡಿಯೋ ವೈರಲ್
ಕಪ್ಪೆಗಳ ದೇಹದಲ್ಲಿರುವ ಪರೋಟಿಡ್ ಗ್ರಂಥಿ (parotid gland) ವಿಷವನ್ನು ಹೊಂದಿದ್ದು, ಇವು ಪರಭಕ್ಷಕಗಳಿಂದ ಅವುಗಳನ್ನು ರಕ್ಷಿಸಿಕೊಳ್ಳಲು ಇರುವಂತಹದ್ದಾಗಿದೆ. ಕಪ್ಪೆಯನ್ನು ತಿನ್ನುವವರ ಮೇಲೆ ಇದರ ಪರಿಣಾಮ ಬೀರುತ್ತದೆ. ಅಲ್ಲದೇ ಕೆಲವು ಕಪ್ಪೆಗಳ ಚರ್ಮವೂ ಕೂಡ ವಿಷಕಾರಿಯಾಗಿರುತ್ತದೆ ಎಂದು ಇಲ್ಲಿನ ವಿಎಸ್‌ಎಸ್ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನ ಸಂಸ್ಥೆಯ ಸಮುದಾಯ ಔಷಧ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಸಂಜೀಬ್ ಮಿಶ್ರಾ (Sanjeeb Mishra) ಹೇಳಿದ್ದಾರೆ. ಒಟ್ಟಿನಲ್ಲಿ ಪೋಷಕರ ಬುದ್ಧಿಗೇಡಿ ಕೆಲಸದಿಂದ ಏನು ಅರಿಯದ ಮಗುವೊಂದು ಸಾವನ್ನಪ್ಪುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ