ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮದುವೆಯಾದ ಮಗಳು 4 ವರ್ಷ ಕಳೆದರೂ ತಂದೆ ನೀಡಿದ್ದ ಭರವಸೆಯನ್ನು ಈಡೇರಿಸದ್ದಕ್ಕೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಅಪ್ಪ ನನಗೆ ಕೊಟ್ಟಿದ್ದ ಮಾತುಗಳನ್ನು 4 ವರ್ಷಗಳಾದರೂ ಈಡೇರಿಸಿಲ್ಲ ಎಂದು ಮಗಳೂ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ. ಇಂತಹ ವಿಚಿತ್ರ ದೂರುಗಳೂ ಡಿಸಿ ಹಂತಕ್ಕೆ ಬರುತ್ತವೇ ಎಂದುಕೊಂಡ ಜಿಲ್ಲಾಧಿಕಾರಿ, ದೂರುದಾರ ಮಹಿಳೆಯ ಅಪ್ಪನಿಗೆ ಬುದ್ಧಿವಾದ ಹೇಳಿ ಮಗಳ ಮಾತನ್ನು ಈಡೇರಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಹಾಫಿಜ್ ಗಂಜ್ ಠಾಣಾ ವ್ಯಾಪ್ತಿಯ ರಿಥೌರ ಪಟ್ಟಣದಲ್ಲಿ ನಡೆದಿದೆ. ಅಪ್ಪನಿಗೆ ಮಗಳೆಂದರೆ ತುಂಬಾ ಇಷ್ಟ. ಆದರೆ, ಬೆಳೆದು ನಿಂತ ಮಗಳನ್ನು ಮದುವೆ ಮಾಡಿ ಗಂಡನಿಗೆ ಕಳುಹಿಸಬೇಕಾಗಿರುವುದು ಭಾರತೀಯ ಸಂಪ್ರದಾಯವೂ ಆಗಿದೆ. ಮಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದೇ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ. ಆಗ ಮಗಳಿಗೆ ಅಪ್ಪ ಒಂದು ಮಾತು ಕೊಟ್ಟಿದ್ದರು. ಆದರೆ, ಮದುವೆಯಾಗಿ ಗಂಡನ ಮನೆಯಲ್ಲಿ 4 ವರ್ಷಗಳ ಕಾಲ ಸಂಸಾರ ಮಾಡಿದ ಮಗಳು, ಇದೀಗ ನನ್ನ ತಂದೆ ನನಗೆ ಕೊಟ್ಟ ಮಾತನ್ನು ಈಡೇರಿಸಿಲ್ಲ ಎಂದು ಜಿಲ್ಲಾಧಿಕಾರಿ ಮೊರೆ ಹೋಗಿ ದೂರು ಕೊಟ್ಟಿದ್ದಾರೆ.
ಅಷ್ಟಕ್ಕೂ ದೂರು ಏನು?
ಜಿಲ್ಲಾಧಿಕಾರಿಗೆ ಮಹಿಳೆ ನೀಡಿದ ದೂರಿನಲ್ಲಿ ನಮ್ಮ ತಂದೆ ಲಾಕ್ ಡೌನ್ ಸಮಯದಲ್ಲಿ ತನ್ನನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಗಂಡನ ಮನೆಗೆ ಮದುಮಗಳ ಜೊತೆಗೆ ಕಳುಹಿಸಬೇಕಾದ ಗೃಹೋಪಯೋಗಿ ವಸ್ತುಗಳನ್ನು ಯಾವುದನ್ನೂ ಕೊಟ್ಟಿರಲಿಲ್ಲ. ಈಗ ಲಾಕ್‌ಡೌನ್ ಸಮಯವಾಗಿದ್ದು, ಯಾವುದೇ ಖರೀದಿ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಲಾಕ್‌ಡೌನ್ ಮುಗಿದ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಕೊಡಿಸುವುದಾಗಿ ತಂದೆ ಭರವಸೆ ನೀಡಿದ್ದರು. ಇದೀಗ ಮದುವೆಯಾಗಿ 4 ವರ್ಷಗಳ ನಂತರವೂ ತಂದೆ ತನಗೆ ಕೊಟ್ಟಿದ್ದ ಮಾತಿನಂತೆ ಯಾವುದೇ ವಸ್ತುಗಳನ್ನು ಕಳುಹಿಸಿಲ್ಲ ಎಂದು ಮಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಾರತೀಯ ಯುವಕರಿಗೆ ಭಾರೀ ಬೇಡಿಕೆ; ಇಲ್ಲಿದೆ ಪಾಕ್ ಹುಡುಗಿಯರ ಅಧಿಕೃತ ಆಹ್ವಾನ!
ದೂರಿನ ನಂತರ ತಂದೆ ವಚನ ಪೂರ್ಣ: ಕುಟುಂಬದಲ್ಲಿ ಬಗೆ ಹರಿಸಿಕೊಳ್ಳಬಹುದಾದ ಪ್ರಕರಣವನ್ನು ಜಿಲ್ಲಾಧಿಕಾರಿವರೆಗೂ ತೆಗೆದುಕೊಂಡು ಹೋಗಿದ್ದ ಮಗಳ ನಡೆಗೆ ಅಪ್ಪನೇ ಪೇಚಿಗೆ ಸಿಲುಕಿದ್ದಾರೆ. ಇದಾದ, ಮಗಳು ಡಿಸಿಗೆ ದೂರು ಕೊಟ್ಟ ನಂತರ ಸ್ವತಃ ಜಿಲ್ಲಾಧಿಕಾರಿ ಮಹಿಳೆಯ ಅಪ್ಪನನ್ನು ಕರೆಸಿ ವಿಚಾರಣೆ ಮಾಡಿ ಅದೇನು ಭರವಸೆ ಕೊಟ್ಟಿದ್ದೀರಿ ಈಡೇರಿಸಿ ಎಂದು ಸೂಚನೆ ನಡಿದ್ದಾರೆ. ಇದಾದ ನಂತರ, ಕೆಳಹಂತದ ತಹಶೀಲ್ದಾರ್ ಕಚೇರಿಯವರ ಮೂಲಕ ಮಗಳ ತಂದೆಯನ್ನು ಪುನಃ ಸಂಪರ್ಕಿಸಿ, ಮಗಳಿಗೆ ನೀಡಿದ್ದ ವಚನದಂತೆ ಅಗತ್ಯ ಸಾಮಗ್ರಿ ಕೊಡಲು ತಿಳಿಸಲಾಗಿದೆ. ಇದೀಗ ಕಳೆದ ಎರಡು ದಿನಗಳ ಹಿಂದೆ ಜ.12ರ ಭಾನುವಾರದಂದು ತಂದೆ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್‌ನಂತಹ ಇತರೆ ಗೃಹೋಪಯೋಗಿ ವಸ್ತುಗಳನ್ನು ಮಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಈಗ ವಿವಾದ ಬಗೆಹರಿದಿದ್ದರೂ, ಈ ವಿಚಿತ್ರ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಗಾಯಗೊಂಡ ಪತಿಯನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆ ದಾಖಲಿಸಿದ ಪತ್ನಿ, ಮನಕಲುಕುವ ಘಟನೆ