ಯಶಸ್ವಿಯಾದ ಭಾರತದ ದೇಶೀಯ ನಿರ್ಮಾಣದ ನಾಗ್ ಎಂಕೆ 2: ಪಾಕಿಸ್ತಾನ, ಚೀನಾಗಳ ನಿದ್ದೆ ಕಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿ

Published : Jan 14, 2025, 06:53 PM IST
ಯಶಸ್ವಿಯಾದ ಭಾರತದ ದೇಶೀಯ ನಿರ್ಮಾಣದ ನಾಗ್ ಎಂಕೆ 2: ಪಾಕಿಸ್ತಾನ, ಚೀನಾಗಳ ನಿದ್ದೆ ಕಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿ

ಸಾರಾಂಶ

ಭಾರತವು ತನ್ನ ಮೂರನೇ ತಲೆಮಾರಿನ ಆ್ಯಂಟಿ-ಟ್ಯಾಂಕ್ ಕ್ಷಿಪಣಿ ನಾಗ್ ಎಂಕೆ-2 ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಫೈರ್-ಆ್ಯಂಡ್-ಫಾರ್ಗೆಟ್ ಕ್ಷಿಪಣಿಯು ಸ್ಥಗಿತ ಮತ್ತು ಚಲಿಸುವ ಗುರಿಗಳನ್ನು ಹಗಲು-ರಾತ್ರಿ ಹೊಡೆದುರುಳಿಸಬಲ್ಲದು.

ಭಾರತ ಇತ್ತೀಚೆಗೆ ರಾಜಸ್ತಾನದ ಪೋಖ್ರಾನ್ ಪರೀಕ್ಷಾ ತಾಣದಲ್ಲಿ ತನ್ನ ದೇಶೀಯ ನಿರ್ಮಾಣದ, ಮೂರನೇ ತಲೆಮಾರಿನ ಆ್ಯಂಟಿ ಟ್ಯಾಂಕ್ ನಿರ್ದೇಶಿತ ಕ್ಷಿಪಣಿಯಾದ ನಾಗ್ ಎಂಕೆ - 2 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಪರೀಕ್ಷೆಗಳಲ್ಲಿ, ನಾಗ್ ಮಿಸೈಲ್ ಕ್ಯಾರಿಯರ್ (NAMICA) ವರ್ಷನ್ 2 ಗರಿಷ್ಠ ಮತ್ತು ಕನಿಷ್ಠ ಮಟ್ಟದ ಎರಡೂ ಗುರಿಗಳನ್ನೂ ಅತ್ಯಂತ ನಿಖರವಾಗಿ ತಲುಪಲು ಯಶಸ್ವಿಯಾಯಿತು. ಇದು ಕ್ಷಿಪಣಿ ವ್ಯವಸ್ಥೆಯ ನಿಖರತೆ ಮತ್ತು ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿತು.

ನಾಗ್ ಕ್ಷಿಪಣಿ ಒಂದು ಅತ್ಯಾಧುನಿಕವಾದ, ಫೈರ್ ಆ್ಯಂಡ್ ಫಾರ್ಗೆಟ್ ತಂತ್ರಜ್ಞಾನದ ಕ್ಷಿಪಣಿಯಾಗಿದೆ. ಫೈರ್ ಆ್ಯಂಡ್ ಫಾರ್ಗೆಟ್ ತಂತ್ರಜ್ಞಾನ ಎಂದರೆ, ಒಂದು ಬಾರಿ ಉಡಾವಣೆಗೊಂಡರೆ, ಈ ಕ್ಷಿಪಣಿ ನಿಯಂತ್ರಕನಿಂದ ಹೆಚ್ಚುವರಿ ಮಾರ್ಗದರ್ಶನದ ಅಗತ್ಯವಿಲ್ಲದೆ ತನ್ನ ಗುರಿಯನ್ನು ಹಿಂಬಾಲಿಸಿ, ದಾಳಿ ನಡೆಸುತ್ತದೆ. ಇಮೇಜಿಂಗ್ ಇನ್‌ಫ್ರಾರೆಡ್ (ಐಐಆರ್) ಸೀಕರ್ ಹೊಂದಿರುವ ನಾಗ್ ಎಂಕೆ 2 ಕ್ಷಿಪಣಿ ಸ್ಥಗಿತವಾಗಿರುವ ಮತ್ತು ಚಲಿಸುತ್ತಿರುವ ಗುರಿಗಳನ್ನು ಹಗಲು ಮತ್ತು ರಾತ್ರಿಗಳ ವ್ಯತ್ಯಾಸವಿಲ್ಲದೆ ಹೊಡೆದುರುಳಿಸುವ ಸಾಮರ್ಥ್ಯ ಪಡೆದಿದೆ.

ನಾಮಿಕ ವರ್ಷನ್ 2 ಕ್ಷಿಪಣಿಯನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿ ಪಡಿಸಿದ್ದು, ಇದು ಆಧುನಿಕ ಶಸ್ತ್ರಸಜ್ಜಿತ ವಾಹನಗಳನ್ನು ನಾಶಪಡಿಸುವ ಸಲುವಾಗಿ ವಿನ್ಯಾಸಗೊಂಡಿದೆ. ಈ ಕ್ಷಿಪಣಿ ಹೊಂದಿರುವ ಫೈರ್ ಆ್ಯಂಡ್ ಫಾರ್ಗೆಟ್ ಸಾಮರ್ಥ್ಯದ ಕಾರಣದಿಂದ, ಅತ್ಯಂತ ಸಂಕೀರ್ಣವಾದ ಯುದ್ಧರಂಗದ ಸನ್ನಿವೇಶಗಳಲ್ಲೂ ಕ್ಷಿಪ್ರವಾಗಿ ದಾಳಿ ನಡೆಸಲು ಸಾಧ್ಯವಾಗುತ್ತದೆ. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಡಿಆರ್‌ಡಿಓ ಮುಖ್ಯಸ್ಥರಾದ ಸಮೀರ್ ವಿ ಕಾಮತ್ ಅವರು ಕ್ಷಿಪಣಿಯ ಯಶಸ್ವಿ ಪರೀಕ್ಷೆಗಳನ್ನು ಶ್ಲಾಘಿಸಿದ್ದಾರೆ. ಈ ಯೋಜನೆಗಾಗಿ ಡಿಆರ್‌ಡಿಓ, ಭಾರತೀಯ ಸೇನೆ ಮತ್ತು ಔದ್ಯಮಿಕ ಸಹಯೋಗಿಗಳ ಸಂಯೋಜಿತ ಪ್ರಯತ್ನಗಳು ಈ ಯಶಸ್ಸಿಗೆ ಕಾರಣವಾಗಿದೆ ಎಂದಿದ್ದಾರೆ.

ಈ ಕ್ಷಿಪಣಿಯ ನಿಖರವಾದ ವ್ಯಾಪ್ತಿ ಎಷ್ಟು ಎನ್ನುವುದನ್ನು ಬಯಲುಗೊಳಿಸಿಲ್ಲವಾದರೂ, ನಾಗ್ ಎಂಕೆ 2 ಕ್ಷಿಪಣಿ ಅಂದಾಜು 7ರಿಂದ 10 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ ಎನ್ನಲಾಗಿದೆ. ಈ ವ್ಯಾಪ್ತಿ, ಇದರ ಹಿಂದಿನ ತಲೆಮಾರಿನ ನಾಗ್ ಮಾರ್ಕ್ 1 ಕ್ಷಿಪಣಿಯ 4 ಕಿಲೋಮೀಟರ್ ವ್ಯಾಪ್ತಿಗೆ ಹೋಲಿಸಿದರೆ ಉತ್ತಮ ಸುಧಾರಣೆಯಾಗಿದೆ. ನಾಗ್ ಎಂಕೆ 2 ಕ್ಷಿಪಣಿ ಒಂದು ಹೈ ಎಕ್ಸ್‌ಪ್ಲೋಸಿವ್ ಆ್ಯಂಟಿ ಟ್ಯಾಂಕ್ (HEAT) ಸಿಡಿತಲೆಯನ್ನು ಹೊಂದಿದ್ದು, ಇದು ಕ್ಷಿಪಣಿಯ ವಿಧ್ವಂಸಕ ಶಕ್ತಿ ಮತ್ತು ಶಸ್ತ್ರಸಜ್ಜಿತ ವಾಹನಗಳ ಅತ್ಯಂತ ದುರ್ಬಲವಾದ ಭಾಗವನ್ನು ಗುರುತಿಸಿ ಮೇಲಿನಿಂದ ದಾಳಿ ನಡೆಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಭೂ ಆಧಾರಿತ ಕಾರ್ಯಾಚರಣೆಗಳಿಗಾಗಿ, ನಾಗ್ ಎಂಕೆ 2 ಕ್ಷಿಪಣಿಯನ್ನು ಭಾರತೀಯ ನಿರ್ಮಾಣದ ಬಿಎಂಪಿ-2 ಸಾರಥ್ ಎಂಬ ಶಸ್ತ್ರಸಜ್ಜಿತ ವಾಹನದಿಂದ ಉಡಾವಣೆಗೊಳಿಸಲಾಗುತ್ತದೆ. ಸಾರಥ್ ಎಂಬ ಸಶಸ್ತ್ರ ವಾಹನ (ಸಂಸ್ಕೃತದ 'ಸಾರಥಿ' ಎಂಬ ಪದದ ವ್ಯುತ್ಪತ್ತಿ) ಸ್ವತಃ ಸೋವಿಯತ್ ನಿರ್ಮಾಣದ ಬಿಎಂಪಿ-2 ಪದಾತಿ ಯುದ್ಧ ವಾಹನದ ಭಾರತೀಯ ಆವೃತ್ತಿಯಾಗಿದೆ. ಪರವಾನಗಿ ಪಡೆದು ಭಾರತದಲ್ಲೇ ನಿರ್ಮಿಸಲಾಗಿರುವ ಸಾರಥ್, ಭಾರತೀಯ ಸೇನೆಯ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಈ ವಾಹನ ನಾಗ್ ಕ್ಷಿಪಣಿ ವ್ಯವಸ್ಥೆಗೆ ಸದೃಢವಾದ ಮತ್ತು ಚಲಿಸುವ ವೇದಿಕೆಯನ್ನು ಒದಗಿಸಿ, ವಿವಿಧ ಭೂ ಪ್ರದೇಶಗಳಲ್ಲೂ ಕ್ಷಿಪಣಿಯನ್ನು ಕ್ಷಿಪ್ರವಾಗಿ ಮತ್ತು ಪರಿಣಾಮಕಾರಿಯಾಗಿ ಉಡಾವಣೆಗೊಳಿಸಲು ಅನುಕೂಲ ಮಾಡಿಕೊಡುತ್ತದೆ.

ರಾಷ್ಟ್ರೀಯ ಭದ್ರತೆಯ ಕಾರಣದಿಂದಾಗಿ ನಾಗ್ ಎಂಕೆ 2 ಕ್ಷಿಪಣಿಯ ನಿಖರ ಗಾತ್ರದ ವಿವರಗಳನ್ನು ರಹಸ್ಯವಾಗಿ ಇಡಲಾಗಿದೆ. ಆದರೆ, ಅಂದಾಜುಗಳ ಪ್ರಕಾರ, ಈ ಕ್ಷಿಪಣಿ 1.8ರಿಂದ 2 ಮೀಟರ್ ಉದ್ದವಿದ್ದು, 150ರಿಂದ 200 ಮಿಲಿಮೀಟರ್ ವ್ಯಾಸ ಹೊಂದಿದೆ ಎನ್ನಲಾಗಿದೆ. ಕ್ಷಿಪಣಿ, ಉಡಾವಣಾ ಸಂಗ್ರಾಹಕ ಮತ್ತು ಇತರ ಉಪಕರಣಗಳು ಸೇರಿದಂತೆ, ಕ್ಷಿಪಣಿಯ ತೂಕ 40ರಿಂದ 50 ಕೆಜಿ ಇರಬಹುದು ಎಂದು ಅಂದಾಜಿಸಲಾಗಿದೆ.

Spadex docking postphoned : ಜನವರಿ 9ಕ್ಕೆ ಮುಂದೂಡಲ್ಪಟ್ಟ ಬಾಹ್ಯಾಕಾಶ ಡಾಕಿಂಗ್ ಮೈಲಿಗಲ್ಲು - ಹೊಸ ಬೆಳವಣಿಗೆಗಳು

ಪ್ರಾದೇಶಿಕ ಪ್ರತಿಸ್ಪರ್ಧಿಗಳು:

ಭಾರತ ನಾಗ್ ಎಂಕೆ 2 ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿರುವುದರಿಂದ, ಭಾರತ ಈಗ ಪ್ರಾದೇಶಿಕ ಆ್ಯಂಟಿ ಟ್ಯಾಂಕ್ ಮಿಸೈಲ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ. ಪಾಕಿಸ್ತಾನದ ಬಳಿ ಈಗ ಬಾರ್ಕ್ ಲೇಸರ್ ನಿರ್ದೇಶಿತ ಕ್ಷಿಪಣಿ ಇದ್ದು, ಅದು 10 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ ಎನ್ನಲಾಗಿದೆ. ಆದರೆ, ಈ ಕ್ಷಿಪಣಿ ಟರ್ಕಿಶ್ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದು, ನಾಗ್ ಕ್ಷಿಪಣಿ ಹೊಂದಿರುವ ಫೈರ್ ಆ್ಯಂಡ್ ಫಾರ್ಗೆಟ್ ತಂತ್ರಜ್ಞಾನವನ್ನು ಹೊಂದಿಲ್ಲ. ಕ್ಷಿಪಣಿ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿರುವ ಚೀನಾದ ಬತ್ತಳಿಕೆಯಲ್ಲಿ ಇರುವ ಎಚ್‌ಜೆ-10 ಕ್ಷಿಪಣಿ ನಾಗ್ ಕ್ಷಿಪಣಿಯನ್ನು ಹೋಲುವ ವ್ಯಾಪ್ತಿ ಹೊಂದಿದೆ. ಆದರೆ, ಇದು ವೈರ್ ನಿರ್ದೇಶನದ ಮೇಲೆ ಅವಲಂಬಿತವಾಗಿದ್ದು, ಪ್ರತಿರೋಧಕ ಕ್ರಮಗಳ ಎದುರು ಹೆಚ್ಚು ಬಲಹೀನವಾಗಿದೆ. ನಾಗ್ ಕ್ಷಿಪಣಿ ಹೊಂದಿರುವ ಆಧುನಿಕ ಐಐಆರ್ ಸೀಕರ್ ಮತ್ತು ಮೇಲ್ಭಾಗದ ದಾಳಿ ಸಾಮರ್ಥ್ಯ ಆಧುನಿಕ ಆಯುಧಗಳ ವಿರುದ್ಧವೂ ಅದನ್ನು ಪರಿಣಾಮಕಾರಿಯಾಗಿಸಿವೆ. ಆ ಮೂಲಕ, ಯುದ್ಧರಂಗದಲ್ಲಿ ಭಾರತದ ಪ್ರಾಬಲ್ಯವನ್ನು ನಾಗ್ ಕ್ಷಿಪಣಿ ಹೆಚ್ಚಿಸಿದೆ. ಈ ಯಶಸ್ವಿ ಪ್ರಯೋಗ ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಶಸ್ತ್ರಸಜ್ಜಿತ ವಾಹನಗಳ ದಾಳಿಯ ವಿರುದ್ಧ ಭಾರತಕ್ಕೆ ಮೇಲುಗೈ ಒದಗಿಸಲಿದೆ.

ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇಸ್ರೋ ಬಾಹ್ಯಾಕಾಶ ನಿಲ್ದಾಣಗಳ ಡಾಕಿಂಗ್‌ ಪ್ರಯೋಗ: ಇದರ ಯಶಸ್ಸಿನಲ್ಲಿದೆ ಭಾರತದ ಶ್ರೇಯಸ್ಸು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ