ಲಭ್ಯತೆ ಇರುವೆಡೆ ಪೈಪ್‌ಗ್ಯಾಸ್‌ ನಿರಾಕರಿಸಿದ್ರೆ ಸಿಲಿಂಡರ್‌ ಕಟ್‌

Kannadaprabha News   | Kannada Prabha
Published : Mar 26, 2026, 05:12 AM IST
LPG

ಸಾರಾಂಶ

ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌ ಸಂಪರ್ಕ ಪಡೆಯಲು ಅವಕಾಶವಿದ್ದರೂ ಸಿಲಿಂಡರ್‌ ಅನ್ನೇ ಅವಲಂಬಿಸಿರುವಂಥ ಗ್ರಾಹಕರಿಗೆ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರಿಸಿದೆ. ಈ ಮೂಲಕ ಕೇಂದ್ರ ದೇಶಾದ್ಯಂತ ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ವಿಸ್ತರಣೆಯನ್ನು ತೀವ್ರಗೊಳಿಸಲು ಮುಂದಾಗಿದೆ.

ನವದೆಹಲಿ : ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌ (ಪಿಎನ್‌ಜಿ-ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಪೂರೈಕೆ) ಸಂಪರ್ಕ ಪಡೆಯಲು ಅವಕಾಶವಿದ್ದರೂ ಗ್ಯಾಸ್‌ ಸಿಲಿಂಡರ್‌ ಅನ್ನೇ ಅವಲಂಬಿಸಿರುವಂಥ ಗ್ರಾಹಕರಿಗೆ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರಿಸಿದೆ. ಈ ಮೂಲಕ ಕೇಂದ್ರ ಸರ್ಕಾರವು ದೇಶಾದ್ಯಂತ ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ವಿಸ್ತರಣೆಯನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದೆ.

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ಗೃಹಬಳಕೆ ಮತ್ತು ವಾಣಿಜ್ಯ ಗ್ಯಾಸ್‌ ಬಳಕೆದಾರರಿಗೆ ಪೈಪ್‌ಲೈನ್‌ ಮೂಲಕ ಗ್ಯಾಸ್‌ ಸಂಪರ್ಕಕ್ಕೆ ಮೊರೆ ಹೋಗಲು ಉತ್ತೇಜನ ನೀಡಲು ಮುಂದಾಗಿದೆ. ಹೀಗಾಗಿ, ಪಿಎನ್‌ಜಿ ಪ್ರಸ್ತಾವ ನಿರಾಕರಿಸಿದರೆ 3 ತಿಂಗಳ ಬಳಿಕ ಎಲ್‌ಪಿಜಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

ಏಕೆ ಈ ನಿರ್ಧಾರ?:

ಎಲ್‌ಪಿಜಿಗೆ ಹೋಲಿಸಿದರೆ ಪಿಎನ್‌ಜಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದ್ದು, ಗಲ್ಫ್‌ ದೇಶಗಳಲ್ಲದೆ ಅನ್ಯ ದೇಶಗಳಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಕೊಲ್ಲಿಯುದ್ಧದಂಥ ಪರಿಸ್ಥಿತಿಯಲ್ಲಿ ಗ್ಯಾಸ್‌ ಪೂರೈಕೆ ಮೇಲೆ ದೊಡ್ಡ ಹೊಡೆತಬೀಳದಂತೆ ತಡೆಯಬಹುದಾಗಿದೆ. ಅಲ್ಲದೆ, ಇದಕ್ಕೆ ತಗಲುವ ವೆಚ್ಚವೂ ಕಡಿಮೆ.

ಹೀಗಾಗಿ ಎಲ್ಲೆಲ್ಲೆ ಪಿಎನ್‌ಜಿ ಮೂಲಕ ಗ್ಯಾಸ್‌ ಪೂರೈಕೆಗೆ ಅವಕಾಶವಿದೆಯೋ ಅಲ್ಲೆಲ್ಲ ಎಲ್‌ಪಿಜಿ ಪೂರೈಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಾ.24ರಂದು ಪಿಎನ್‌ಜಿಗೆ ಪ್ರೋತ್ಸಾಹ ನೀಡುವ ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ?:

- ಯಾವುದೇ ಮನೆಗೆ ಪಿಎನ್‌ಜಿ ಪೂರೈಸಲು ಅವಕಾಶ ಇದ್ದರೂ ಆ ಮನೆಯವರು ಎಲ್‌ಪಿಜಿ ಸಂಪರ್ಕ ಮುಂದುವರಿಸಿದ್ದರೆ ಅಂಥ ಮನೆಗಳಿಗೆ 3 ತಿಂಗಳ ಬಳಿಕ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸಲಾಗುವುದು.

- ಪೈಪ್‌ಲೈನ್‌ ಸಂಪರ್ಕಕ್ಕೆ ಅವಕಾಶ ನೀಡದ ವಸತಿ ಸಂಕೀರ್ಣಗಳಿಗೆ ನೋಟಿಸ್‌ ನೀಡಲಾಗುವುದು. ಇದಾದ 3 ತಿಂಗಳ ಬಳಿಕ ಆ ವಸತಿ ಸಂಕೀರ್ಣಗಳಿಗೆ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸಲಾಗುವುದು.

- ಯಾವ ಮನೆಗೆ ಪೈಪ್‌ಲೈನ್‌ ಮೂಲಕ ಗ್ಯಾಸ್‌ ಪೂರೈಕೆ ತಾಂತ್ರಿಕವಾಗಿ ಸಾಧ್ಯವಿಲ್ಲವೋ ಆ ಮನೆಯವರಿಗೆ ಸಂಬಂಧಿತ ಗ್ಯಾಸ್‌ ಪೂರೈಕೆ ಸಂಸ್ಥೆಗಳು ಎನ್‌ಒಸಿ ನೀಡಬೇಕು. ಅದರ ಆಧಾರದ ಮೇಲೆ ಆ ಮನೆಗಳಿಗೆ ಎಲ್‌ಪಿಜಿ ಪೂರೈಕೆ ಮುಂದುವರಿಯಲಿದೆ.

- ವಸತಿ ಸಂಕೀರ್ಣಗಳು 3 ದಿನದೊಳಗೆ ಪೈಪ್‌ಲೈನ್‌ ಹಾಕಲು ಅನುಮತಿ ನೀಡಬೇಕು. ಆ ಬಳಿಕ ಕೊನೇ ಹಂತದ ಸಂಪರ್ಕವನ್ನು 48 ಗಂಟೆಯೊಳಗೆ ಅಳವಡಿಸಬೇಕು.

- ಪಿಎನ್‌ಜಿ ಸಂಪರ್ಕ ಕೋರಿ ಸಲ್ಲಿಸುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಬೇಕಾಬಿಟ್ಟಿಯಾಗಿ ತಿರಸ್ಕರಿಸುವಂತಿಲ್ಲ.

- ಗ್ಯಾಸ್‌ ಪೈಪ್‌ಲೈನ್‌ ಯೋಜನೆ ಮೇಲೆ ನಿಗಾ ಇಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯನ್ನು ನೋಡಲ್‌ ಏಜೆನ್ಸಿಯಾಗಿ ನೇಮಿಸಲಾಗಿದೆ. ಪೈಪ್‌ಲೈನ್‌ ಹಾಕುವ ಅನುಮತಿ ಪಡೆದಿರುವ ಸಂಸ್ಥೆ ಅನುಮತಿ ಸಿಕ್ಕ 4 ತಿಂಗಳೊಳಗೆ ಪೈಪ್‌ಲೈನ್‌ ಕಾರ್ಯ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ದಂಡ, ಇನ್ನಿತರ ಕ್ರಮ ಕೈಗೊಳ್ಳಲು ಈ ಆದೇಶದ ಮೂಲಕ ಅವಕಾಶ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಯಾಮರಣಿ ಹರೀಶ್‌ ರಾಣಾಗೆ ಭಾವುಕ ವಿದಾಯ
ಬಿಜೆಪಿಗೆ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಸೇರ್ಪಡೆ?