ಲಸಿಕೆಯ ಎಲ್ಲಾ ಅಡ್ಡ ಪರಿಣಾಮಗಳ ಬಗ್ಗೆ ನಿಗಾ!

By Suvarna NewsFirst Published Mar 14, 2021, 11:07 AM IST
Highlights

ಲಸಿಕೆಯ ಎಲ್ಲಾ ಅಡ್ಡ ಪರಿಣಾಮಗಳ ಬಗ್ಗೆ ನಿಗಾ| ಆಸ್ಟ್ರಾಜೆನೆಕಾ ಲಸಿಕೆಯಿಂದ ರಕ್ತ ಹೆಪ್ಪುಗಟ್ಟಿದ ಪ್ರಕರಣದ ಬೆನ್ನಲ್ಲೇ ಸ್ಪಷ್ಟನೆ

ನವದೆಹಲಿ(ಮಾ.14): ದೇಶೀಯವಾಗಿ ಉತ್ಪಾದಿಸಲಾಗಿರುವ ಕೊರೋನಾ ಲಸಿಕೆಗಳಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ ಕುರಿತ ಎಲ್ಲಾ ಅಡ್ಡಪರಿಣಾಮಗಳ ಬಗ್ಗೆ ತೀವ್ರ ನಿಗಾವಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ಪಡೆದ ಕೆಲವರಲ್ಲಿ ರಕ್ತಹೆಪ್ಪುಗಟ್ಟಿದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಯುರೋಪ್‌ನ 7 ದೇಶಗಳು ಲಸಿಕೆಯ ಬಳಕೆ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದ್ದವು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ರಚಿತವಾಗಿರುವ ರಾಷ್ಟಿ್ರಯ ಕಾರ್ಯಪಡೆ ಸದಸ್ಯ ಡಾ.ಎನ್‌.ಕೆ. ಅರೋರಾ, ‘ನಾವು ಯಾವುದೇ ಒಂದು ಲಸಿಕೆಯ ಬಗ್ಗೆ ನಿಗಾ ವಹಿಸಿಲ್ಲ. ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಎರಡೂ ಲಸಿಕೆಯಿಂದ ಉದ್ಭವವಾಗುವ ಎಲ್ಲಾ ರೀತಿಯ ಅಡ್ಡಪರಿಣಾಮಗಳ ಬಗ್ಗೆ ನಾವು ಗಮನ ಹರಿಸಿದ್ದೇವೆ. ಅಡ್ಡಪರಿಣಾಮಗಳಲ್ಲಿ ಎರಡು ಬಗೆ. ಒಂದು ಸಾಮಾನ್ಯ, ಮತ್ತೊಂದು ಗಂಭೀರ. ನಾವು ಎಲ್ಲಾ ರೀತಿಯ ಗಂಭೀರ ಸಮಸ್ಯೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಡಾ.ರಾಜೇಂದ್ರ ಕೆ. ಧಮಾಜಿಯಾ ಪ್ರತಿಕ್ರಿಯೆ ನೀಡಿ, ಲಸಿಕೆ ಪಡೆದವರ ಮೇಲೆ ನಿಗಾಕ್ಕೆ ದೇಶದಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲಾಗುತ್ತಿದೆ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಗಾ ವ್ಯವಸ್ಥೆ ಇದೆ. ಇದುವರೆಗೆ ನಾವೂ ಲಸಿಕೆಯಿಂದಾಗಿ ಯಾವುದೇ ಗಂಭೀರ ಸಮಸ್ಯೆ ಪ್ರಕರಣ ಕಂಡಿಲ್ಲ ಎಂದು ಹೇಳಿದ್ದಾರೆ.

ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ದೇಶೀಯವಾಗಿ ಕೋವಿಶೀಲ್ಡ್‌ ಲಸಿಕೆ ಅಭಿವೃದ್ಧಿಪಡಿಸಿ, ಉತ್ಪಾದಿಸುತ್ತಿದೆ.

click me!