
ನವದೆಹಲಿ: ಹಾಸನ ಜಿಲ್ಲೆಯಲ್ಲಿ ಘಟಿಸುತ್ತಿರುವ ಹಠಾತ್ ಹೃದಯಾಘಾತದ ಸಾವುಗಳಿಗೆ ಕೋವಿಡ್ ಲಸಿಕೆಯೇ ಕಾರಣ ಎಂದಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆ ತಜ್ಞರು, ಕೋವಿಶೀಲ್ಡ್ ಲಸಿಕೆ ತಯಾರಕರಾದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ತಳ್ಳಿ ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಮ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ. ಕರಣ್ ಮದನ್, ‘ಹಠಾತ್ ಹೃದಯಸಂಬಂಧಿ ಸಾವುಗಳ ಕುರಿತು ಏಮ್ಸ್‌ನಿಂದ ಅಧ್ಯಯನ ನಡೆಸಲಾಗಿದೆ. ಆದರೆ ಸಾವುಗಳಿಗೂ ಲಸಿಕೆಗೂ ಯಾವುದೇ ಸಂಬಂಧ ಕಂಡುಬಂದಿಲ್ಲ’ ಎಂದರು.
ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸೀರಂ ಸಂಸ್ಥೆ, ‘ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ಅಧ್ಯಯನಗಳು ಕೋವಿಡ್ ಲಸಿಕೆಗೂ, ಹಠಾತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ದೃಡಪಡಿಸಿವೆ. ಲಸಿಕೆಗಳು ಸುರಕ್ಷಿತ ಮತ್ತು ವೈಜ್ಞಾನಿಕವಾಗಿ ಮೌಲ್ಯೀಕರಿಸಲ್ಪಟ್ಟಿವೆ’ ಎಂದಿದೆ.
ಇಂಡಿಯನ್ ಫಾರ್ಮಾಸ್ಯುಟಿಕಲ್ ಅಲೈಯನ್ಸ್ (ಐಪಿಎ) ಔಷಧ ಕಂಪನಿ ಸಹ ಪ್ರತಿಕ್ರಿಯಿಸಿದ್ದು, ‘ಕೋವಿಡ್ ಸಮಯದಲ್ಲಿ ಲಸಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ. ತಪ್ಪು ಮಾಹಿತಿ ನೀಡುವುದು ಮತ್ತು ಸತ್ಯವನ್ನು ತಿರುಚುವುದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಜಾಗತಿಕವಾಗಿ ವಿಜ್ಞಾನ, ವೈದ್ಯಕೀಯದ ಮೇಲಿನ ನಂಬಿಕೆಯನ್ನು ಹಾಳು ಮಾಡುತ್ತದೆ’ ಎಂದಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಿರಣ್ ಷಾ, ‘ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್ ಲಸಿಕೆಗಳನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ, ಕಠಿಣ ಶಿಷ್ಟಾಚಾರಗಳನ್ನು ಅನುಸರಿಸಿ ಅನುಮೋದಿಸಲಾಗಿದೆ. ಈ ಲಸಿಕೆಗಳನ್ನು ಆತುರದಿಂದ ಅನುಮೋದಿಸಲಾಗಿದೆ ಎಂಬ ಹೇಳಿಕೆ ತಪ್ಪು. ಅದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ