ಲಸಿಕೆ ಮಹಾಭಿಯಾನಕ್ಕೆ ಭಾರತ ಸನ್ನದ್ಧ: 2 ದಿನದಲ್ಲಿ 2ನೇ ಲಸಿಕೆಗೆ ಗ್ರೀನ್‌ಸಿಗ್ನಲ್!

Published : Jan 03, 2021, 07:29 AM IST
ಲಸಿಕೆ ಮಹಾಭಿಯಾನಕ್ಕೆ ಭಾರತ ಸನ್ನದ್ಧ: 2 ದಿನದಲ್ಲಿ 2ನೇ ಲಸಿಕೆಗೆ ಗ್ರೀನ್‌ಸಿಗ್ನಲ್!

ಸಾರಾಂಶ

ಲಸಿಕೆ ಮಹಾಭಿಯಾನಕ್ಕೆ ಭಾರತ ಸನ್ನದ್ಧ| ಸ್ವದೇಶೀ ಕೊವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಓಕೆ| 2 ದಿನದಲ್ಲಿ 2ನೇ ಲಸಿಕೆಗೆ ಗ್ರೀನ್‌ಸಿಗ್ನಲ್‌| ಇಂದು ಔಷಧ ಮಹಾನಿರ್ದೇಶನಾಲಯದ ಒಪ್ಪಿಗೆ ಘೋಷಣೆ?| ಸಂಕ್ರಾಂತಿಯೊಳಗೆ ಅಭಿಯಾನ ಶುರು?

 

 ನವದೆಹಲಿ

ಕೇಂದ್ರ ಸರ್ಕಾರದ ತಜ್ಞರ ಸಮಿತಿ ಬ್ರಿಟನ್ನಿನ ಕೊರೋನಾ ಲಸಿಕೆ ‘ಕೋವಿಶೀಲ್ಡ್‌’ಗೆ ಭಾರತದಲ್ಲಿ ತುರ್ತು ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿದ ಮರುದಿನ ಶನಿವಾರ ಭಾರತದ ದೇಸಿ ಲಸಿಕೆ ‘ಕೋವ್ಯಾಕ್ಸಿನ್‌’ಗೂ ತುರ್ತು ಬಳಕೆಗೆ ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿದೆ. ಅದರೊಂದಿಗೆ ಭಾರತದಲ್ಲಿ ಎರಡು ಕೊರೋನಾ ಲಸಿಕೆಗಳ ತುರ್ತು ಬಳಕೆಗೆ ತಜ್ಞರು ಒಪ್ಪಿಗೆ ನೀಡಿದಂತಾಗಿದ್ದು, ಭಾರತೀಯ ಔಷಧ ಮಹಾನಿರ್ದೇಶನಾಲಯ (ಡಿಸಿಜಿಐ) ಇದನ್ನು ಅಂಗೀಕರಿಸಿದರೆ ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭವಾಗಲಿದೆ.

ಈ ಮಧ್ಯೆ, ಶನಿವಾರ ದೇಶಾದ್ಯಂತ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನ ಕೂಡ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಲಸಿಕೆ ಕಳುಹಿಸಿದ ತಕ್ಷಣ ಅದನ್ನು ವಿತರಿಸಲು ತಾವು ಸಿದ್ಧರಿದ್ದೇವೆ ಎಂದು ರಾಜ್ಯಗಳು ಹೇಳಿವೆ. ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ‘ಕೇಂದ್ರ ಸರ್ಕಾರ 2-3 ದಿನದಲ್ಲಿ ಸಾಕಷ್ಟುಲಸಿಕೆಯ ಸ್ಟಾಕ್‌ ಕಳುಹಿಸುವುದಾಗಿ ತಿಳಿಸಿದೆ’ ಎಂದು ಹೇಳಿದ್ದು, ರಾಜ್ಯಗಳಿಗೆ ಶೀಘ್ರದಲ್ಲೇ ಲಸಿಕೆ ಪೂರೈಕೆಯಾಗಲಿದೆ ಎಂಬ ಸುಳಿವು ಲಭಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಜ.14ರ ಮಕರ ಸಂಕ್ರಾಂತಿಯ ಶುಭ ವೇಳೆಗೆ ದೇಶದಲ್ಲಿ ಲಸಿಕೆ ವಿತರಣೆ ಆರಂಭವಾಗಬಹುದು ಎಂದು ತಿಳಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಕೊರೋನಾ ಲಸಿಕೆ ವಿತರಣೆಗೆ ದಿನಗಣನೆ ಆರಂಭವಾದಂತಾಗಿದೆ.

ಕೋವ್ಯಾಕ್ಸಿನ್‌ಗೆ ತಜ್ಞರ ಒಪ್ಪಿಗೆ:

ಕೊರೋನಾ ಲಸಿಕೆಯ ಪರಿಶೀಲನೆಗೆ ಕೇಂದ್ರ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ನೇಮಕ ಮಾಡಿದ್ದ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಶನಿವಾರ ಮತ್ತೊಮ್ಮೆ ಸಭೆ ನಡೆಸಿತು. ಈ ಸಭೆಯಲ್ಲಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್‌) ಜಂಟಿಯಾಗಿ ತಯಾರಿಸಿದ ಕೋವ್ಯಾಕ್ಸಿನ್‌ ಲಸಿಕೆಯ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಪರಿಶೀಲನೆ ನಡೆಸಲಾಯಿತು. ನಂತರ ಈ ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆ ಮಾಡಲು ಅನುಮತಿ ನೀಡಬಹುದು ಎಂದು ಎಂದು ಶಿಫಾರಸು ಮಾಡಿತು. ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಅನುಮತಿ ನೀಡುವಂತೆ ಡಿಸಿಜಿಐಗೆ ಭಾರತ್‌ ಬಯೋಟೆಕ್‌ ಕಂಪನಿ ಡಿ.7ರಂದು ಮನವಿ ಸಲ್ಲಿಸಿತ್ತು.

ಇಂದು ಡಿಸಿಜಿಐ ಅನುಮತಿ?

ಕೇಂದ್ರ ಸರ್ಕಾರದ ವಿಷಯ ತಜ್ಞರ ಸಮಿತಿ ಎರಡು ಕೊರೋನಾ ಲಸಿಕೆಗಳ ತುರ್ತು ವಿತರಣೆಗೆ ಶಿಫಾರಸು ಮಾಡಿದ ಬೆನ್ನಲ್ಲೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಭಾರತೀಯ ಔಷಧ ಮಹಾನಿರ್ದೇಶನಾಲಯ (ಡಿಸಿಜಿಐ) ಪತ್ರಿಕಾಗೋಷ್ಠಿ ಕರೆದಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಎರಡೂ ಲಸಿಕೆಗಳನ್ನು ಜನರಿಗೆ ನೀಡಲು ಅನುಮತಿ ನೀಡಿರುವುದಾಗಿ ಪ್ರಕಟಿಸಬಹುದೇ ಎಂಬ ಕುತೂಹಲ ಎಲ್ಲೆಡೆ ವ್ಯಕ್ತವಾಗಿದೆ.

ತಾಲೀಮು ಹೇಗಾಯ್ತು?

1. ಪ್ರತಿ ಲಸಿಕೆ ಕೇಂದ್ರದಲ್ಲಿ ನೋಂದಣಿ, ನಿರೀಕ್ಷಣೆ, ಲಸಿಕೆ ನೀಡಿಕೆ, ಪರಿಶೀಲನಾ ಕೊಠಡಿ

2. ಮೊದಲು ವಿಳಾಸ ದಾಖಲೆ ನೀಡಿ ಕೋವಿನ್‌ ಆ್ಯಪ್‌ನಲ್ಲಿ ಫಲಾನುಭವಿಗಳ ನೋಂದಣಿ

3. ಸರದಿ ಸಂಖ್ಯೆ ಪಡೆದ ನೋಂದಾಯಿತರು ನಿರೀಕ್ಷಣಾ ಕೊಠಡಿ, ಅಲ್ಲಿ ದಾಖಲೆ ಪರಿಶೀಲನೆ

4. ವೈದ್ಯ, ನರ್ಸ್‌, ಅರಿವಳಿಕೆ ತಜ್ಞ, ಆ್ಯಂಬುಲೆನ್ಸ್‌ ಚಾಲಕ ಇರುವ ಕೊಠಡಿಯಲ್ಲಿ ಲಸಿಕೆ ನೀಡಿಕೆ

5. ಬಳಿಕ 30 ನಿಮಿಷ ಕಾಲ ನಿಗಾ. ಆರೋಗ್ಯ ಏರುಪೇರಾದರೆ ಆಸ್ಪತ್ರೆಗೆ. ಇಲ್ಲದಿದ್ದರೆ ಮನೆಗೆ

ರಾಜ್ಯದಲ್ಲೂ ಅಣಕು ಕಾರಾರ‍ಯಚರಣೆ ಯಶಸ್ವಿ

1. ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿಯಲ್ಲಿ ನಡೆದ ಡ್ರೈ ರನ್‌

2. ಬೆಂಗಳೂರಲ್ಲಿ 4, ಉಳಿದ ನಾಲ್ಕು ಜಿಲ್ಲೆಗಳಲ್ಲಿ ತಲಾ 3 ಕೇಂದ್ರಗಳಲ್ಲಿ ನಡೆದ ತಾಲೀಮು

3. ಕರ್ನಾಟಕದಾದ್ಯಂತ ಒಟ್ಟಾರೆ 400 ಮಂದಿಗೆ ಲಸಿಕೆ ನೀಡಿಕೆ ಅಣಕು ಕಾರ್ಯಾಚರಣೆ

ಲಸಿಕೆ ತಾಲೀಮು ಸುಸೂತ್ರ

1. ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲೂ ನಡೆದ ಅಣಕು ಕಾರ್ಯಕ್ರಮ

2. ಪ್ರತಿ ರಾಜ್ಯದ ಆಯ್ದ ಜಿಲ್ಲೆಗಳ ಸರಾಸರಿ 3 ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ತಾಲೀಮು

3. ಪ್ರತಿಯೊಂದು ಲಸಿಕೆ ವಿತರಣಾ ಕೇಂದ್ರದಲ್ಲಿ 25 ಮಂದಿಗೆ ಲಸಿಕೆ ನೀಡುವ ಕಸರತ್ತು

4. ಸ್ವತಃ ಕೇಂದ್ರ ಆರೋಗ್ಯ ಸಚಿವ ಡಾ

ಹರ್ಷವರ್ಧನ್‌ರಿಂದ ತಾಲೀಮು ಪರಿಶೀಲನೆ

5. ರಾಜ್ಯಗಳಲ್ಲಿ ಅಲ್ಲಿನ ಆರೋಗ್ಯ ಸಚಿವರು, ಉನ್ನತಾಧಿಕಾರಿಗಳ ಮೇಲುಸ್ತುವಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?