ಕೇಳಿದವರಿಗೆಲ್ಲಾ ಕೊರೋನಾ ಟೆಸ್ಟ್ ಮಾಡಿ!| ಸೋಂಕು ಲಕ್ಷಣ ಇಲ್ಲದಿದ್ದರೂ ಟೆಸ್ಟ್ ಮಾಡಬೇಕು| ಕಂಟೈನ್ಮೆಂಟ್ ವಲಯದಲ್ಲಿನ ಶೇ.100 ಜನರ ಪರೀಕ್ಷೆ| ಕೊರೋನಾ ಪರೀಕ್ಷೆಯ ನಿಯಮ ಬದಲಿಸಿದ ಐಸಿಎಂಆರ್
ನವದೆಹಲಿ(ಸೆ.06): ಕೊರೋನಾ ಪರೀಕ್ಷಾ ನಿಯಮಾವಳಿಗಳನ್ನು ಬದಲಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್), ಪರೀಕ್ಷೆ ನಡೆಸುವಂತೆ ಬೇಡಿಕೆ ಇರಿಸಿದರೆ, ವೈದ್ಯರ ಸಲಹೆ ಹೊರತಾಗಿಯೂ ಕೋವಿಡ್ ಟೆಸ್ಟ್ ಮಾಡಬೇಕು ಎಂಬ ಸಲಹಾವಳಿಯನ್ನು ಸರ್ಕಾರಗಳಿಗೆ ರವಾನಿಸಿದೆ. ಆದರೆ ತಮ್ಮ ವಿವೇಚನೆಗೆ ಅನುಗುಣವಾಗಿ ನಿಯಮಗಳನ್ನು ಸರಳಗೊಳಿಸಬಹುದಾದ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ.
ಇದೇ ವೇಳೆ ಅಂತಾರಾಜ್ಯ ಪ್ರಯಾಣಿಕರು ಅಥವಾ ವಿದೇಶದಿಂದ ಬಂದವರು ಸೋಂಕುಲಕ್ಷಣ ಇಲ್ಲದಿದ್ದರೂ ಪ್ರವೇಶದ ವೇಳೆಯೇ ಬೇಡಿಕೆ ಇರಿಸಿದರೆ ಟೆಸ್ಟ್ ಮಾಡಬೇಕು ಎಂದು ಸಲಹೆ ನೀಡಿದೆ. ಈವರೆಗೆ ಸೋಂಕುಲಕ್ಷಣ ಇದ್ದರೆ ಮಾತ್ರ ಪರೀಕ್ಷೆಗೆ ಸೂಚಿಸಲಾಗುತ್ತಿತ್ತು. ಈಗ ಸೋಂಕುಲಕ್ಷಣ ಇಲ್ಲದವರೂ ಬೇಡಿಕೆ ಇರಿಸಿದರೆ ಪರೀಕ್ಷೆ ಮಾಡಬೇಕು ಎಂದು ನಿಯಮ ಬದಲಿಸಲಾಗಿದೆ.
ಸೋಂಕು ವ್ಯಾಪಕವಾಗಿರುವ ಕಂಟೈನ್ಮೆಂಟ್ ವಲಯದಲ್ಲಿನ, ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಶೇ.100ರಷ್ಟುಜನರನ್ನು ಆ್ಯಂಟಿಜೆನ್ ಪರೀಕ್ಷೆಗೆ ಹಾಗೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಪರೀಕ್ಷೆಗಳನ್ನು ಕಂಟೈನ್ಮೆಂಟ್ ವಲಯದಲ್ಲಿನ ಮಾಮೂಲಿ ತಪಾಸಣೆ, ಗಡಿ ಪ್ರವೇಶದ್ವಾರದಲ್ಲಿ ತಪಾಸಣೆ, ಕಂಟೈನ್ಮೆಂಟ್ ವಲಯದಲ್ಲಿನ ತಪಾಸಣೆ ಹಾಗೂ ಬೇಡಿಕೆ ಪರಿಗಣಿಸಿ ತಪಾಸಣೆ ಎಂಬ 4 ವರ್ಗೀಕರಣಗಳನ್ನು ಐಸಿಎಂಆರ್ ಮಾಡಿದೆ.
ಇದರ ಅನುಸಾರ ಕಂಟೈನ್ಮೆಂಟ್ ವಲಯದಲ್ಲಿನ ಜನ ಹಾಗೂ ಗಡಿಯಲ್ಲಿ ಒಳಪ್ರವೇಶಿಸುತ್ತಿರುವ ಜನರು ಲಕ್ಷಣರಹಿತರಾಗಿದ್ದರೂ ಬೇಡಿಕೆ ಇರಿಸಿದರೆ ತಪಾಸಣೆ ಮಾಡಬೇಕು. ಅಲ್ಲದೆ, ವಿಷಮಶೀತ ಜ್ವರ ಲಕ್ಷಣ ಇರುವವರು, ಆರೋಗ್ಯ ಸಿಬ್ಬಂದಿ ಹಾಗೂ ಜನರ ನೇರ ಸಂಪರ್ಕದಲ್ಲಿರುವ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತನ ಸಂಪರ್ಕಕ್ಕೆ ಬಂದಿದ್ದರೂ ಸೋಂಕುಲಕ್ಷಣ ಇಲ್ಲದಿದ್ದರೆ, ಸಂಪರ್ಕಕ್ಕೆ ಬಂದ 5ರಿಂದ 10 ದಿನದೊಳಗೆ ಪರೀಕ್ಷೆ ಮಾಡಬೇಕು ಎಂದು ತಿಳಿಸಲಾಗಿದೆ.