
ಚೆನ್ನೈ(ಜ.07): ಕೊರೋನಾದಿಂದ ಗುಣಮುಖರಾಗಿರುವವರು ಹೊಸದಾಗಿ ಆರೋಗ್ಯ ವಿಮೆ ಮಾಡಿಸುವ ವೇಳೆ ಕೆಲ ತೊಡಕು ಎದುರಾಗುವ ಸಾಧ್ಯತೆ ಇದೆ. ಕೊರೋನಾದಿಂದ ಮಾನವನ ಹಲವು ಅಂಗಾಂಗಗಳಿಗೆ ಧಕ್ಕೆಯಾಗುವ ಕಾರಣ, ಕೊರೋನಾ ಸಂಬಂಧೀ ಆರೋಗ್ಯ ಸಮಸ್ಯೆಗಳನ್ನು ವಿಮಾ ಕಂಪನಿಗಳು ‘ಪ್ರಿ-ಎಕ್ಸಿಸ್ಟಿಂಗ್’ ಎಂದು ವರ್ಗೀಕರಿಸುವ ಸಂಭವವಿದೆ.
ಹೀಗೆ ‘ಪ್ರಿ-ಎಕ್ಸಿಸ್ಟಿಂಗ್’ ಎಂದು ವರ್ಗೀಕರಿಸಿದರೆ ಈ ವರ್ಗದಲ್ಲಿರುವ ರೋಗಗಳಿಗೆ ‘ಕಾಯುವಿಕೆ ಅವಧಿ’ಯಲ್ಲಿ ವಿಮೆ ದೊರಕುವುದಿಲ್ಲ. ‘ಕಾಯುವಿಕೆ ಅವಧಿ’ (ವೇಟಿಂಗ್ ಪೀರಿಯಡ್) 2ರಿಂದ 5 ವರ್ಷಗಳ ನಡುವೆ ಇರಲಿದೆ.
ಉದಾಹರಣೆಗೆ, ಕೊರೋನಾ ಬಂದು ಗುಣಮುಖರಾದ ಬಳಿಕವೂ ಕೆಲವರಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು, ರಕ್ತ ಹೆಪ್ಪುಗಟ್ಟುವಿಕೆ, ಹೃದಯ ಕಾಯಿಲೆಗಳು, ಮೂತ್ರಪಿಂಡ ಹಾಗೂ ಮಿದುಳಿನ ಸಮಸ್ಯೆಗಳು- ಮರುಕಳಿಸಬಹುದು. ಹೀಗಾಗಿ ವಿಮಾ ಕಂಪನಿಗಳು ಈ ಆರೋಗ್ಯ ಸಮಸ್ಯೆಗಳನ್ನು ‘ಪ್ರಿ ಎಕ್ಸಿಸ್ಟಿಂಗ್’ ಪಟ್ಟಿಗೆ ಸೇರಿಸುತ್ತವೆ. ಕೊರೋನಾ ಗುಣಮುಖರು ಹೊಸದಾಗಿ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಹೊರಟರೆ, ಅವರಿಗೆ ವಿಮೆ ಮಾಡಿಸಿದ 2ರಿಂದ 5 ವರ್ಷದ ಅವಧಿಯಲ್ಲಿ ಈ ಸಮಸ್ಯೆಗಳಿಗೆ ವಿಮೆ ದೊರಕುವುದಿಲ್ಲ. ಅಂದರೆ ಈ ಕಾಯುವಿಕೆ ಅವಧಿ ಮುಗಿದ ನಂತರವಷ್ಟೇ ‘ಪ್ರಿ ಎಕ್ಸಿಸ್ಟಿಂಗ್’ ಪಟ್ಟಿಯಲ್ಲಿರುವ ಆರೋಗ್ಯ ಸಮಸ್ಯೆಗಳಿಗೆ ವಿಮೆ ಲಭಿಸಲಿದೆ.
‘ಕೊರೋನಾ ಬಂದು ಹೋಮ್ ಕ್ವಾರಂಟೈನ್‌ನಲ್ಲಿದ್ದೇ ಗುಣಮುಖರಾದರೆ ಅವರಿಗೆ 30ರಿಂದ 60 ದಿನ ‘ವೇಟಿಂಗ್ ಪೀರಿಯಡ್’ ಎಂದು ಪರಿಗಣಿಸಲಾಗುವುದು. ಆದರೆ ಆಸ್ಪತ್ರೆಯಲ್ಲಿದ್ದು ಗುಣಮುಖರಾದವರಿಗೆ 2-5 ವರ್ಷ ಕಾಯುವಿಕೆ ಅವಧಿಯಾಗಲಿದೆ. ಹೊಸದಾಗಿ ವಿಮೆ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಈ ಮುನ್ನವೇ ವಿಮೆ ಇದ್ದು ನವೀಕರಿಸಿಕೊಂಡವರಿಗೆ ‘ವೇಟಿಂಗ್ ಪೀರಿಯಡ್’ ಇರುವುದಿಲ್ಲ’ ಎಂದು ವಿಮಾ ಕಂಪನಿಯ ಪ್ರಮುಖರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ