Covid 19 Variant: ಒಂದೇ ದಿನ 18 ಹೊಸ ಒಮಿಕ್ರೋನ್‌ ಕೇಸ್‌: ರೂಪಾಂತರಿ ಸಂಖ್ಯೆ 169ಕ್ಕೆ ಏರಿಕೆ

Published : Dec 21, 2021, 05:31 AM IST
Covid 19 Variant: ಒಂದೇ ದಿನ 18 ಹೊಸ ಒಮಿಕ್ರೋನ್‌ ಕೇಸ್‌: ರೂಪಾಂತರಿ ಸಂಖ್ಯೆ 169ಕ್ಕೆ ಏರಿಕೆ

ಸಾರಾಂಶ

*ಹೊಸ ರೂಪಾಂತರಿ ಕೇಸ್‌ 169ಕ್ಕೆ ಏರಿಕೆ *ದಿಲ್ಲಿ 6, ಕರ್ನಾಟಕ 5, ಕೇರಳ 4, ಗುಜರಾತ್‌ನಲ್ಲಿ 3 ಹೊಸ ಕೇಸ್‌ *ಬ್ರಿಟನ್‌: ಒಂದೇ ದಿನ 12133 ಒಮಿಕ್ರೋನ್‌ ಕೇಸು, 5 ಸಾವು 

ನವದೆಹಲಿ (ಡಿ. 21): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 6 ಮಂದಿ ಸೇರಿದಂತೆ ದೇಶಾದ್ಯಂತ ಸೋಮವಾರ ಒಂದೇ ದಿನ 18 ರೂಪಾಂತರಿ ಒಮಿಕ್ರೋನ್‌ ಕೇಸ್‌ಗಳು (Covid 19 Variant) ಪತ್ತೆಯಾಗಿವೆ. ಇದರೊಂದಿಗೆ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 169ಕ್ಕೆ ಜಿಗಿದಿದೆ. ಸೋಮವಾರ ದೆಹಲಿಯಲ್ಲಿ 6, ಕರ್ನಾಟಕ 5, ಕೇರಳ 4 ಮತ್ತು ಗುಜರಾತ್‌ನಲ್ಲಿ 3 ಒಮಿಕ್ರೋನ್‌ ಕೇಸ್‌ ಪತ್ತೆಯಾಗಿವೆ. ಇದೇ ವೇಳೆ, ದೆಹಲಿಯಲ್ಲಿ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 28ಕ್ಕೆ ಜಿಗಿದಿದೆ. ಇದರಲ್ಲಿ 12 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು (54), ದೆಹಲಿ (28), ರಾಜಸ್ಥಾನ (17), ಕರ್ನಾಟಕ (19), ತೆಲಂಗಾಣ (20), ಕೇರಳ (15), ಗುಜರಾತ್‌ (14) ಹಾಗೂ ಆಂಧ್ರಪ್ರದೇಶ, ಚಂಡೀಗಢ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ರೂಪಾಂತರಿ ತಳಿ ಕೇಸ್‌ ಪತ್ತೆಯಾದಂತಾಗಿದೆ.

6563 ಕೇಸು, 132 ಸಾವು: ಸಕ್ರಿಯ ಕೇಸು 82267ಕ್ಕೆ ಇಳಿಕೆ

ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 6,563 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಇದೇ ಅವಧಿಯಲ್ಲಿ 132 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣ 3.47 ಕೋಟಿಗೆ ಮತ್ತು ಒಟ್ಟು ಸಾವು 4.77 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 82,267ಕ್ಕೆ ಇಳಿದಿದ್ದು, ಇದು 572 ದಿನಗಳ (19 ತಿಂಗಳ) ಕನಿಷ್ಠವಾಗಿದೆ. ದೇಶಾದ್ಯಂತ ಗುಣಮುಖ ದರ ಶೇ.98.39ರಷ್ಟಿದೆ. 

ಇದನ್ನೂ ಓದಿ: Covid 19 Variant: ಒಮಿಕ್ರೋನ್‌ ಭೀತಿ: ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಪ್ರಭಾವಿಗಳು!

ಕಳೆದ 53 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ. 0.75ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,646 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 137.67 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ದಿಲ್ಲಿಯ ಎಲ್ಲಾ ಕೊರೋನಾ ಪಾಸಿಟಿವ್‌ ವರದಿ ಜಿನೋಂ ಸೀಕ್ವೆನ್ಸಿಂಗ್‌ ಪರೀಕ್ಷೆಗೆ

ಭಾರತದಲ್ಲೂ ಒಮಿಕ್ರೋನ್‌ ವ್ಯಾಪಕವಾಗುತ್ತಿರುವ ಭೀತಿಯ ನಡುವೆಯೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್‌ ಏರಿಕೆಯಾಗುತ್ತಿದೆ. ಹೀಗಾಗಿ ಕೊರೋನಾ ದೃಢಪಟ್ಟಎಲ್ಲಾ ವರದಿಗಳನ್ನು ಒಮಿಕ್ರೋನ್‌ ಪತ್ತೆ ಹಚ್ಚುವ ಪರೀಕ್ಷೆಯಾದ ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಭಾನುವಾರ ಒಂದೇ ದಿನ ನಗರದಲ್ಲಿ 100ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾದವು. ಇದು ಯಾವ ತಳಿ ಎಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಕೊರೋನಾ ದೃಢಪಟ್ಟಎಲ್ಲಾ ವರದಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಕಳಿಸಿಕೊಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Karnataka omicron case ರಾಜ್ಯದ 6 ಜಿಲ್ಲೆಗಳಿಗೆ ಹರಡಿದ ಓಮಿಕ್ರಾನ್, ಕರ್ನಾಟಕದಲ್ಲಿ ಹೆಚ್ಚಾಯ್ತು ವೈರಸ್ ಭೀತಿ!

ಅಲ್ಲದೆ ನಗರದ ಜನತೆಗೆ ಬೂಸ್ಟರ್‌ ಡೋಸ್‌ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಅವರು, ‘ಜನರು ಹೊಸ ರೂಪಾಂತರಿ ತಳಿ ಬಗ್ಗೆ ಆತಂಕ ಮತ್ತು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಆದರೆ ವೈರಸ್‌ ವಿರುದ್ಧದ ಪರಿಣಾಮಕಾರಿಯಾದ ಮಾಸ್ಕ್‌ ಅನ್ನು ಧರಿಸಲೇಬೇಕು’ ಎಂದು ಕಿವಿಮಾತು ಹೇಳಿದ್ದಾರೆ.

ಬ್ರಿಟನ್‌: ಒಂದೇ ದಿನ 12133 ಒಮಿಕ್ರೋನ್‌ ಕೇಸು, 5 ಸಾವು

ಲಂಡನ್‌: ಕೋವಿಡ್‌ ಹೊಸ ರೂಪಾಂತರಿ ವೈರಸ್‌ ಕಾಣಿಸಿಕೊಂಡ ನಂತರ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಭಾನುವಾರ ಒಂದೇ ದಿನ 12,133 ಒಮಿಕ್ರೋನ್‌ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಒಮಿಕ್ರೋನ್‌ ಪ್ರಕರಣಗಳು 37,101ಕ್ಕೆ ಏರಿಕೆಯಾಗಿದೆ. ಒಮಿಕ್ರೋನ್‌ ರೂಪಾಂತರಿಗೆ ಇನ್ನೂ 5 ಜನರು ಬಲಿಯಾಗಿದ್ದು, ಒಟ್ಟು ಸಾವು 12ಕ್ಕೆ ಏರಿಕೆಯಾಗಿದೆ.

ಭಾನುವಾರ ಬ್ರಿಟನ್‌ನಲ್ಲಿ ಹೊಸದಾಗಿ 82,886 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು. ಈ ಮೂಲಕ ಒಟ್ಟು ಪ್ರಕರಣಗಳು 1.13 ಕೋಟಿಗೆ ಏರಿಕೆಯಾಗಿದೆ. ಶುಕ್ರವಾರ 93 ಸಾವಿರ ಪ್ರಕರಣ ದಾಖಲಾಗಿದ್ದು ಬ್ರಿಟನ್‌ನ ಈವರೆಗೆ ದಾಖಲಾದ ಅತಿ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ.

ಇದೇ ಅವಧಿಯಲ್ಲಿ 45 ಜನರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವು 1.47 ಲಕ್ಷಕ್ಕೆ ಏರಿದೆ. ಕ್ರಿಸ್‌ಮಸ್‌ಗೂ ಮೊದಲು ಸೋಂಕನ್ನು ತಡೆಗಟ್ಟಲು ಅಗತ್ಯವಾದ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬ್ರಿಟಿಷ್‌ ಆರೋಗ್ಯ ಸಚಿವ ಸಾಜಿದ್‌ ಜಾವೇದ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌