Covid 19 Spike: 4 ರಾಜ್ಯಗಳಲ್ಲಿ ಕೊರೋನಾ ಸ್ಫೋಟ

By Kannadaprabha News  |  First Published Jan 3, 2022, 3:30 AM IST
  • ದಿಲ್ಲಿಯಲ್ಲಿ 3194 ಕೇಸು: 7 ತಿಂಗಳ ದಾಖಲೆ
  • ಮಹಾರಾಷ್ಟ್ರದಲ್ಲಿ 11837, ಮುಂಬೈನಲ್ಲಿ 8067 ಕೇಸು
  • ಕೋಲ್ಕತಾದಲ್ಲಿ 3194, ಬಂಗಾಳದಲ್ಲಿ 6153 ಪ್ರಕರಣ
  • ಕೇರಳದಲ್ಲಿ 2802 ಮಂದಿಗೆ ಸೋಂಕು

ನವದೆಹಲಿ(ಜ.03): ದೇಶಾದ್ಯಂತ ಒಮಿಕ್ರೋನ್‌ ವ್ಯಾಪಕವಾಗುತ್ತಿರುವ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಕೋವಿಡ್‌ ಮಹಾಸ್ಫೋಟವೇ ಆಗಿದೆ. ಇಲ್ಲಿ ಕನಿಷ್ಟ2800ರಿಂದ ಗರಿಷ್ಠ 12 ಸಾವಿರದವರೆಗೆ ಪ್ರಕರಣಗಳು ಭಾನುವಾರ ವರದಿಯಾಗಿವೆ.

ದಿಲ್ಲಿಯಲ್ಲಿ ಶೇ.17 ಅಧಿಕ ಕೇಸು:

Tap to resize

Latest Videos

ದೆಹಲಿಯಲ್ಲಿ ಒಂದರಲ್ಲೇ 3194 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ಶನಿವಾರದ 2716 ಕೋವಿಡ್‌ ಕೇಸ್‌ಗಳಿಗೆ ಹೋಲಿಸಿದರೆ, ಭಾನುವಾರ ಶೇ.17ರಷ್ಟುಹೆಚ್ಚಾಗಿದೆ. 7 ತಿಂಗಳ ಬಳಿಕ ಒಂದು ದಿನದಲ್ಲಿ ದಾಖಲಾದ ದೈನಂದಿನ ಅತೀ ಹೆಚ್ಚು ಕೋವಿಡ್‌ ಕೇಸ್‌ ಇದು. ಇದೇ ವೇಳೆ ಶನಿವಾರ 3.64ರಷ್ಟಿದ್ದ ಪಾಸಿಟಿವಿಟಿ ದರ ಭಾನುವಾರ 4.59ಕ್ಕೆ ಜಿಗಿದಿದೆ. ಮೇ 20ರಂದು 3231 ಕೋವಿಡ್‌ ಪ್ರಕರಣಗಳು ದಾಖಲಾಗಿತ್ತು.

ಒಂದು ವೇಳೆ ಮುಂದಿನ 2 ದಿನಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ ‘ರೆಡ್‌’ ಅಲರ್ಟ್‌ ಘೋಷಿಸಿ, ಬಹುತೇಕ ಆರ್ಥಿಕ ಚಟುವಟಿಕೆಗಳ ಬಂದ್‌ಗೆ ನಿರ್ಧರಿಸಲಾಗಿದೆ.

ಮಹಾರಾಷ್ಟ್ರದಲ್ಲಿ 11837 ಕೇಸ್‌:

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 11837 ಮಂದಿಗೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಕೇಸ್‌ಗಳ ಪೈಕಿ ಮುಂಬೈನಲ್ಲಿ 8067 ಕೇಸ್‌ಗಳು ದೃಢಪಟ್ಟಿದೆ. ಶನಿವಾರಕ್ಕೆ ಹೋಲಿಸಿದರೆ ಮುಂಬೈನಲ್ಲಿ ಕೋವಿಡ್‌ ಶೇ.27 ಪ್ರಮಾಣದಷ್ಟುಹೆಚ್ಚಾಗಿದೆ. ಆದಾಗ್ಯೂ, ಕಳೆದ 24 ಗಂಟೆಯಲ್ಲಿ ಮುಂಬೈನಲ್ಲಿ ಕೋವಿಡ್‌ನಿಂದ ಒಂದೇ ಒಂದು ಸಾವು ಸಂಭವಿಸಿಲ್ಲ ಎಂಬುದು ಸಮಾಧಾನಕರ.

ಬಂಗಾಳದಲ್ಲಿ 6153 ಕೇಸು:

ಪಶ್ಚಿಮ ಬಂಗಾಳದಲ್ಲಿ ಭಾನುವಾರ 6153 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 9 ಸಾವು ಸಂಭವಿಸಿದೆ. ಒಟ್ಟಾರೆ ಕೇಸ್‌ನಲ್ಲಿ ಕೋಲ್ಕತಾದ ಪಾಲು 3194 ಆಗಿದೆ.

ಕೇರಳದಲ್ಲಿ ನಾಗಾಲೋಟ:

ಅದೇ ರೀತಿ ಕೇರಳದಲ್ಲಿ 2802 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಹಳೇ ಸಾವು ಸೇರಿದಂತೆ 78 ಸಾವು ಸಂಭವಿಸಿದೆ. ಇದರೊಂದಿಗೆ ಕೇರಳದಲ್ಲಿ ಈವರೆಗೆ ಈ ವ್ಯಾಧಿಗೆ 48,113 ಬಲಿಯಾದಂತಾಗಿದೆ.

ಬೆಂಗಳೂರಿನಲ್ಲಿ ಕೊರೋನಾ(Coronavirus) ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 184 ದಿನಗಳ ಬಳಿಕ ಶನಿವಾರ 800ಕ್ಕೂ ಅಧಿಕ ಸೋಂಕು ಪತ್ತೆಯಾಗಿದೆ. ಶನಿವಾರ 810 ಜನರಿಗೆ ಸೋಂಕು ತಗುಲಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 7876ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತರಾಗುವುದರೊಂದಿಗೆ(Death) ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 16,402ಕ್ಕೆ ಏರಿಕೆಯಾಗಿದೆ.

ಕಳೆದ ಜೂ.29ರಂದು 753 ಮತ್ತು ಜೂ.30ರಂದು 813 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಕೊರೋನಾ ಪ್ರಕರಣವಾಗಿತ್ತು. ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,64,428ಕ್ಕೆ ಏರಿಕೆಯಾಗಿದೆ. 218 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,40,149ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 5ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ 20, ಹಗದೂರು, ದೊಡ್ಡನೆಕ್ಕುಂದಿ, ಅರಕೆರೆ ವಾರ್ಡ್‌ಗಳಲ್ಲಿ ತಲಾ 9, ಶಾಂತಲಾ ನಗರ, ವರ್ತೂರು, ಹೊರಮಾವು ವಾರ್ಡ್‌ಗಳಲ್ಲಿ ತಲಾ 7, ಕೋರಮಂಗಲ, ಬ್ಯಾಟರಾಯನಪುರ ವಾರ್ಡ್‌ನಲ್ಲಿ ತಲಾ 6 ಪ್ರಕರಣಗಳು ಪತ್ತೆಯಾಗುತ್ತಿವೆ.

ಮೈಕ್ರೋ ಕಂಟೈನ್ಮೆಂಟ್‌ 110ಕ್ಕೆ ಏರಿಕೆ

ಪಾಲಿಕೆ(BBMP) ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ(Micro Containment) ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 35, ಮಹದೇವಪುರ 23, ದಕ್ಷಿಣ 15, ಪೂರ್ವ 12, ಯಲಹಂಕ 11, ಪಶ್ಚಿಮ 10, ದಾಸರಹಳ್ಳಿ 3, ಆರ್‌ಆರ್‌ ನಗರ 1 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!