ಮೇರಠ್(ಜ.03): ‘ಈ ಹಿಂದಿನ ಸರ್ಕಾರಗಳನ್ನು ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳು ತಮ್ಮ ಆಟಕ್ಕಾಗಿ ಬಳಸಿಕೊಂಡಿದ್ದವು. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಜೈಲು-ಜೈಲು ಆಟದ ಮುಂದೆ ಕ್ರಿಮಿನಲ್‌ಗಳ ಆಟ ನಡೆಯುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತನ್ಮೂಲಕ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ನೇತೃತ್ವದ ಈ ಹಿಂದಿನ ಸರ್ಕಾರದ ವಿರುದ್ಧ ಮೋದಿ ಅವರು ಪರೋಕ್ಷ ವಾಗ್ದಾಳಿ ನಡೆಸಿದರು.
ಮೇಜರ್ ಧ್ಯಾನ್‌ಚಂದ್ ಕ್ರೀಡಾ ವಿವಿಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ‘ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಕ್ರಮ ಭೂ ಪರಭಾರೆ ಟೂರ್ನಿ ನಡೆಯುತ್ತಿದ್ದವು. ಸ್ವತಂತ್ರವಾಗಿ ಓಡಾಡುತ್ತಿದ್ದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಲಾಗುತ್ತಿತ್ತು. ಜತೆಗೆ ನಗರದಲ್ಲಿ ಮನೆಗಳನ್ನು ಸುಟ್ಟಕೃತ್ಯಗಳನ್ನು ಮೇರಠ್ ಜನ ಮರೆಯುವುದುಂಟೇ? ಒಟ್ಟಾರೆ ಈ ಹಿಂದಿನ ಸರ್ಕಾರ ಕ್ರಿಮಿನಲ್‌ಗಳು ಮತ್ತು ಮಾಫಿಯಾದ ಆಟಗಳಲ್ಲಿ ಸಕ್ರಿಯವಾಗಿತ್ತು. ಆದರೆ ಅಂಥ ಕ್ರಿಮಿನಲ್‌ಗಳ ವಿರುದ್ಧ ಯೋಗಿ ಸರ್ಕಾರ ಜೈಲಿನ ಆಟವಾಡುತ್ತಿದೆ’ ಎಂದು ಚಾಟಿ ಬೀಸಿದರು.
ಮಂಗಲ್‌ಪಾಂಡೆ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪನಮನ
1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಮಂಗಲ್‌ಪಾಂಡೆ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪುಷ್ಪನಮನ ಸಲ್ಲಿಸಿದರು. ಬಳಿಕ ಶಾಹೀದ್ ಸ್ಮಾರಕ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡಿದ ಅವರು, 1857ರ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಅಲ್ಲದೆ ರಾಜ್‌ಕಿಯೆ ಸ್ವತಂತ್ರತಾ ಸಂಗ್ರಹಾಲಯಕ್ಕೂ ತೆರಳಿ, ವಸ್ತುಪ್ರದರ್ಶನವನ್ನು ಕಣ್ತುಂಬಿಕೊಂಡರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 34ನೇ ಬೆಂಗಾಲ್ ನೇಟಿವ್ ಇನ್ಫ್ಯಾಂಟ್ರಿಯಲ್ಲಿ ಸಿಪಾಯಿ ಆಗಿದ್ದ ಅವರು, ಬ್ರಿಟಿಷರ ವಿರುದ್ಧ ಮೊಟ್ಟಮೊದಲ ಬಾರಿಗೆ ದಂಗೆಯೆದ್ದು, ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣೀಭೂತರಾಗಿದ್ದರು.
ಈ ಹಿಂದೆ ಕಾಶಿ ವಿಶ್ವನಾಥ ಧಾಮ ತ್ವರಿತ ಕೆಲಸಗಳಲ್ಲಿ ಭೇಷ್ ಎನಿಸಿಕೊಂಡ ಯೋಗಿ
ಪ್ರಧಾನಿ ನರೇಂದ್ರ ಮೋದಿಯವರ ಕಾಶಿ ವಿಶ್ವನಾಥ್ ಕಾರಿಡಾರ್ ಕನಸನ್ನು ನನಸು ಮಾಡುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಖ್ಯಮಂತ್ರಿಗಳು ಒಂಬತ್ತು ಸಂಪುಟ ಸಭೆಗಳನ್ನು ನಡೆಸುವ ಮೂಲಕ ಯೋಜನೆಗೆ ರೂಪು ನೀಡಿದ್ದಾರೆ ಮತ್ತು ಕೇವಲ ನಾಲ್ಕು ವರ್ಷಗಳಲ್ಲಿ, ಯೋಗಿ ಮಹತ್ವದ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಒಂಬತ್ತು ಕ್ಯಾಬಿನೆಟ್ ಸಭೆಗಳಲ್ಲಿ ದತ್ತಿ ವ್ಯವಹಾರಗಳ ಇಲಾಖೆಯಿಂದ ಕಾಶಿ ವಿಶ್ವನಾಥ ದೇವಾಲಯದ ವಿಸ್ತರಣೆ ಮತ್ತು ಅಭುವೃದ್ಧಿ ಯೋಜನೆಗೆ ಪ್ರಸ್ತಾವನೆಗಳನ್ನು ಮಂಡಿಸಲಾಯಿತು. ಇದಕ್ಕಾಗಿ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದತ್ತಿ ಕಾರ್ಯದ ಜವಾಬ್ದಾರಿಯನ್ನು ಸಿಎಂ ಯೋಗಿ ನೀಡಿದರು. ಅವ್ನಿಶ್ ಅವಸ್ಥಿ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಸಿದ್ಧಪಡಿಸಲು ವಿಶೇಷ ತಂಡವನ್ನು ರಚಿಸಿದರು. ಇದರಿಂದ ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಂಡಿದೆ. ಈ ಅಧಿಕಾರಿಗಳ ತಂಡವು ಜೂನ್ 19, 2018 ರಿಂದ ಕೆಲಸವನ್ನು ಪ್ರಾರಂಭಿಸಿತು ಮತ್ತು ಕೇವಲ ನಾಲ್ಕು ವರ್ಷಗಳಲ್ಲಿ ಯೋಜನೆಯನ್ನು ಕೊನೆಗೊಳಿಸಿತು.
ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆಯೊಂದಿಗೆ ಯೋಗಿ ಸರ್ಕಾರ 2022ರ ವಿಧಾನಸಭಾ ಚುನಾವಣೆಯ ರಾಜಕೀಯ ಮಾಡಿದ್ದು ಮಾತ್ರವಲ್ಲದೆ 2024ರ ಲೋಕಸಭೆ ಚುನಾವಣೆಗೂ ವೇದಿಕೆ ಸಿದ್ಧಪಡಿಸಿದೆ. ವಾಸ್ತವವಾಗಿ, ಪ್ರಧಾನಿ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವುದರಿಂದ, ಬನಾರಸ್‌ನಲ್ಲಿ ಧಾರ್ಮಿಕ ಬೆಳವಣಿಗೆಯ ಹೊಸ ಅಧ್ಯಾಯವನ್ನು ಬರೆಯಲಾಗಿದೆ. ಅಷ್ಟೇ ಅಲ್ಲ, ಈ ಯೋಜನೆಯ ಮೂಲಕ ಪೂರ್ವಾಂಚಲ್‌ನ ರಾಜಕೀಯವನ್ನು ಆಧ್ಯಾತ್ಮಿಕ ರಾಷ್ಟ್ರೀಯತೆಯೊಂದಿಗೆ ಜೋಡಿಸಲಾಗಿದೆ.