ಭಾರತದಲ್ಲಿ ಕೋವಿಡ್‌ ಅಂತ್ಯದತ್ತ?: ಆಸ್ಪತ್ರೆ ವಾಸ, ಸಾವು ಸಂಖ್ಯೆ ಏರಿಕೆಯಾಗುವವರೆಗೆ ಆತಂಕವಿಲ್ಲ

By Suvarna NewsFirst Published Jun 25, 2022, 8:47 AM IST
Highlights

* ಭಾರತದಲ್ಲಿ ಕೋವಿಡ್‌ ಅಂತ್ಯದತ್ತ?

* ಅಂತ್ಯ ಘಟ್ಟದಲ್ಲಿದ್ದಾಗ ಸೋಂಕಿನ ಏರಿಕೆ, ಇಳಿಕೆ ಸಾಮಾನ್ಯ: ತಜ್ಞರು

* ಆಸ್ಪತ್ರೆ ವಾಸ, ಸಾವು ಸಂಖ್ಯೆ ಏರಿಕೆಯಾಗುವವರೆಗೆ ಆತಂಕವಿಲ್ಲ

ನವದೆಹಲಿ(ಜೂ.25): ಸರ್ವವ್ಯಾಪಿ (ಪ್ಯಾಂಡೆಮಿಕ್‌) ಆಗಿದ್ದ ರೋಗವೊಂದು ಅಂತ್ಯಘಟ್ಟಅಥವಾ ಕೆಲವೇ ಪ್ರದೇಶಗಳಿಗೆ ಸೀಮಿತವಾಗುವ ಹಂತಕ್ಕೆ ತಲುಪಿದಾಗ ಪ್ರಕರಣಗಳ ಏರಿಕೆ, ಇಳಿಕೆ ಸಾಮಾನ್ಯ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಹೇಳಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್‌ ದಿಢೀರ್‌ ಏರಿಳಿತ ಬಗ್ಗೆ ಆತಂಕ ಬೇಡ ಎಂದು ಧೈರ್ಯ ತುಂಬಿದ್ದಾರೆ.

ಸದ್ಯ ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೋನಾ ಪ್ರಕರಣಗಳು ದೇಶದ ಕೆಲವೊಂದು ಜಿಲ್ಲೆಗಳಿಗಷ್ಟೇ ಸೀಮಿತವಾಗಿವೆ. ಮಾಸ್‌್ಕ ಧರಿಸದಿರುವುದು, ಪ್ರಯಾಣ ಹೆಚ್ಚಳವಾಗಿರುವುದು, ಸಾಮಾಜಿಕ ಒಡನಾಟ ಅಧಿಕವಾಗಿರುವುದು ಹಾಗೂ ಬೂಸ್ಟರ್‌ ಡೋಸ್‌ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಸೋಂಕು ಸರ್ವವ್ಯಾಪಿಯಿಂದ ಅಂತ್ಯಘಟ್ಟತಲುಪುವಾಗ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುವುದು ಸರ್ವೇಸಾಮಾನ್ಯ. ಆಸ್ಪತ್ರೆ ವಾಸ ಹಾಗೂ ಸಾವಿನ ಸಂಖ್ಯೆ ಹೆಚ್ಚಳವಾಗುವವರೆಗೂ ಕಳವಳ ಅನಗತ್ಯ ಎಂದು ಏಮ್ಸ್‌ ಆಸ್ಪತ್ರೆ ಹಿರಿಯ ಸಾಂಕ್ರಾಮಿಕ ತಜ್ಞ ಡಾ| ಸಂಜಯ್‌ ರೈ ತಿಳಿಸಿದ್ದಾರೆ.

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ದೇಶದ 51 ಜಿಲ್ಲೆಗಳಲ್ಲಿ ಮಾತ್ರವೇ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. 53 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಶೇ.5ರಿಂದ ಶೇ.10ರಷ್ಟಿದೆ. ದೇಶದಲ್ಲಿ 600ಕ್ಕೂ ಹೆಚ್ಚು ಜಿಲ್ಲೆಗಳಿವೆ.

ಒಂದೇ ದಿನದಲ್ಲಿ ಸೋಂಕು ಶೇ.30ರಷ್ಟುಭಾರೀ ಏರಿಕೆ

 

ದೇಶದಲ್ಲಿ ಕæೂೕವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 17,336 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಸುಮಾರು 4 ತಿಂಗಳ (124 ದಿನಗಳು) ನಂತರ 17,000ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶೇ.30ರಷ್ಟುಏರಿಕೆ ಕಂಡುಬಂದಿದೆ. ಗುರುವಾರ 13,313 ಕೇಸುಗಳು ವರದಿಯಾಗಿದ್ದವು.

ಇದೇ ವೇಳೆ ಕಳೆದ 24 ಗಂಟೆಯಲ್ಲಿ 13 ಸೋಂಕಿತರು ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 7, ಪಂಜಾಬ್‌ನಲ್ಲಿ 2, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಬ್ಬ ಸೋಂಕಿತ ಸಾವನ್ನಪ್ಪಿದ್ದಾನೆ.

ಸಕ್ರಿಯ ಕೇಸು 88,284ಕ್ಕೇರಿಕೆ:

ಕಳೆದ 24 ಗಂಟೆಗಳಲ್ಲಿ ಗುಣಮುಖರಾದವರ ಸಂಖ್ಯೆಗಿಂತ 4,294 ಹೆಚ್ಚುವರಿ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆಯು 88,284ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.4.32ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ.3.07ರಷ್ಟಿದೆ. ಇದು ಕೋವಿಡ್‌ ಸೋಂಕು ತೀವ್ರವಾಗಿ ಹರಡುತ್ತಿರುವುದನ್ನು ಸೂಚಿಸಿದೆ. ದೇಶದಲ್ಲಿ ಈವರೆಗೆ 196.77 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

click me!